"ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರನ್ನು ಸಹಿಸುವುದಿಲ್ಲ"

Update: 2018-07-11 15:36 GMT

ಬೆಂಗಳೂರು, ಜು.11: ನಾನು ಯಾವ ಮುಖಂಡರ ಪರವಾಗಿಯೂ ಕಾರ್ಯ ನಿರ್ವಹಿಸುವುದಿಲ್ಲ. ಕಾಂಗ್ರೆಸ್ ಪಕ್ಷವನ್ನು ಸಂಘಟಿಸಲು ಸಹಕಾರ ನೀಡುವವರಿಗೆ ನನ್ನ ಬೆಂಬಲ. ಅಧಿಕಾರದ ಆಸೆಗಾಗಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರನ್ನು ಯಾವುದೆ ಕಾರಣಕ್ಕೂ ಸಹಿಸುವುದಿಲ್ಲ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ದಿನೇಶ್ ಗುಂಡೂರಾವ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಬುಧವಾರ ನಗರದ ಅರಮನೆ ಮೈದಾನದಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಲಾಗಿದ್ದ ಕೆಪಿಸಿಸಿ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು. 'ಜನರ ಹಿತಕ್ಕಾಗಿ ತ್ಯಾಗ ಮಾಡಿರುವ ಪಕ್ಷ ಕಾಂಗ್ರೆಸ್. ಹೀಗಾಗಿಯೇ, ನಾವು ಹೆಚ್ಚಿನ ಸಂಖ್ಯೆಯ ಶಾಸಕರನ್ನು ಹೊಂದಿದ್ದರೂ ಸಮ್ಮಿಶ್ರ ಸರಕಾರದಲ್ಲಿ ಜೆಡಿಎಸ್ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟು ಕೊಟ್ಟಿದ್ದೇವೆ' ಎಂದು ದಿನೇಶ್‌ ಗುಂಡೂರಾವ್ ಹೇಳಿದರು.

ನಾನು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ರಾಜ್ಯಾದ್ಯಂತ ಪ್ರವಾಸ ಮಾಡಿ ನಿಷ್ಠಾವಂತರನ್ನು ಗುರುತಿಸುತ್ತೇವೆ. ಅನೇಕ ಕಾರ್ಯಕರ್ತರಿಗೆ ಕೆಪಿಸಿಸಿ ಎಲ್ಲಿದೆ ಎಂಬುದು ಗೊತ್ತಿಲ್ಲ. ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಅವರ ಕೈಗೆ ಅಧಿಕಾರ ಕೊಡುವ ಕೆಲಸವನ್ನು ಮಾಡುತ್ತೇವೆ ಎಂದು ಅವರು ಹೇಳಿದರು.

ಬಿಜೆಪಿಯವರು, ಕೋಮುವಾದದ ವಿಷ ಬೀಜ ಬಿತ್ತುವ ಮೂಲಕ ದಲಿತರು, ಅಲ್ಪಸಂಖ್ಯಾತರ ಮತಗಳನ್ನು ಪಡೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ವಿರೋಧ ಪಕ್ಷಗಳು ಸೇರಿದಂತೆ ಕೇಂದ್ರ ಸರಕಾರದ ವಿರುದ್ಧ ಮಾತನಾಡುವವರ ಮೇಲೆ ಸಿಬಿಐ, ಇಡಿ, ಐಟಿ ದಾಳಿ ಮಾಡಿಸಲಾಗುತ್ತಿದೆ. ಅನೇಕ ಮಾಧ್ಯಮಗಳು ಬಿಜೆಪಿಗೆ ಭಯ ಪಡುವಂತಾಗಿದೆ ಎಂದು ದಿನೇಶ್‌ ಗುಂಡೂರಾವ್ ದೂರಿದರು.

ಪ್ರಜಾಪ್ರಭುತ್ವದ ಮೂಲ ಸಿದ್ಧಾಂತ, ಜಾತ್ಯತೀತ ತತ್ವ, ಸಾಮಾಜಿಕ ನ್ಯಾಯ. ಆದರೆ, ಬಿಜೆಪಿಯವರು ಜಾತ್ಯತೀತ ಸಿದ್ಧಾಂತ ಹಾಗೂ ಸಾಮಾಜಿಕ ನ್ಯಾಯದ ವಿರುದ್ಧವಾಗಿದ್ದಾರೆ. ಕೋಮುವಾದದ ವಿರುದ್ದ ಧ್ವನಿ ಎತ್ತಿದ್ದ ವಿಚಾರವಾದಿ ಕಲಬುರಗಿ, ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆಯಾಯಿತು. ಈ ಘಟನೆಗಳ ಬಳಿಕ ಕೋಮುವಾದದ ವಿರುದ್ಧ ಮಾತನಾಡಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು. ಭಯಮುಕ್ತ ಸಮಾಜ ನಿರ್ಮಾಣವಾಗಬೇಕಾದರೆ ದೇಶದ ಜನತೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸಂಪೂರ್ಣ ಬಹುಮತ ನೀಡಬೇಕು ಎಂದು ದಿನೇಶ್ ಗುಂಡೂರಾವ್ ಕರೆ ನೀಡಿದರು.

ಸರಕಾರಕ್ಕೆ ಸಹಕಾರ: ಸಮ್ಮಿಶ್ರ ಸರಕಾರಕ್ಕೆ ಕಾಂಗ್ರೆಸ್ ಸಹಕಾರ ಕೊಡಬೇಕೆಂದು ರಾಹುಲ್ ಗಾಂಧಿ ಸಂದೇಶ ಕೊಟ್ಟಿದ್ದಾರೆ. ಮೈತ್ರಿ ಧರ್ಮಪಾಲನೆ ಮಾಡಬೇಕು. ದುರ್ಬಲರಿಗೆ ರಕ್ಷಣೆ ಕೊಡಬೇಕು, ಸಾಮಾಜಿಕ ನ್ಯಾಯದ ಮುಖಾಂತರ ಲೋಕಸಭೆ ಚುನಾವಣೆ ಗೆಲ್ಲಬೇಕು ಎಂಬುದೇ ನಮ್ಮ ಮುಖ್ಯ ಗುರಿ. ಹೀಗಾಗಿ, ಎಲ್ಲರೂ ಒಂದಾಗಬೇಕು ಎಂದು ಅವರು ಹೇಳಿದರು.

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಎಲ್ಲೂ ಸ್ಥಾನಮಾನವಿಲ್ಲ. ಬಿಜೆಪಿಗೆ ಸರಿಯಾದ ಪಾಠ ಕಲಿಸುತ್ತೇವೆ. ಉತ್ತರದಲ್ಲೂ ವಾತಾವರಣ ಬದಲಾಗುತ್ತಿದೆ. ಉಪ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತಿದೆ. ಮಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಪ್ರತಿಯೊಬ್ಬರು ನಿಷ್ಠೆಯಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ ಎಂದು ಅವರು ಕರೆ ನೀಡಿದರು.

ಕನಸಲ್ಲೂ ನೆನೆಸಿರಲಿಲ್ಲ: ಕೆಪಿಸಿಸಿ ಅಧ್ಯಕ್ಷ ಹುದ್ದೆ ತನಗೆ ಸಿಗುತ್ತದೆಂದು ಕನಸಿನಲ್ಲೂ ನೆನೆಸಿರಲಿಲ್ಲ. ಇಷ್ಟೊಂದು ದೊಡ್ಡ ಹುದ್ದೆ ಸಿಕ್ಕಿರುವುದು ಹೆಮ್ಮೆಯ ವಿಚಾರ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ನಾನು ಸುಲಭದ ಕೆಲಸ ಅಂದುಕೊಂಡಿಲ್ಲ. ಅನೇಕ ದಿಗ್ಗಜರು ಈ ಹುದ್ದೆ ಅಲಂಕರಿಸಿದ್ದು ದೊಡ್ಡ ಇತಿಹಾಸವಿದೆ ಎಂದು ಅವರು ಹೇಳಿದರು. ದೇವರಾಜ ಅರಸು, ನಿಜಲಿಂಗಪ್ಪ, ಎಸ್.ಎಂ.ಕೃಷ್ಣ, ಮಲ್ಲಿಕಾರ್ಜುನ ಖರ್ಗೆ ಅವರಂತಹ ಅನೇಕ ದಿಗ್ಗಜರು ಈ ಹುದ್ದೆಯನ್ನು ನಿಭಾಯಿಸಿದ್ದಾರೆ. ಅಂತ ಹುದ್ದೆಯನ್ನು ಅಲಂಕರಿಸಲು ಅವಕಾಶ ಸಿಕ್ಕಿದೆ. ಎಲ್ಲ ಮುಖಂಡರು ತನಗೆ ಸಹಕಾರ ಕೊಟ್ಟಿದ್ದಾರೆ ಎಂದು ಅವರು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಕಾಂಗ್ರೆಸ್ ಅಧ್ಯಕ್ಷರು ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಕಾಂಗ್ರೆಸ್‌ನಲ್ಲಿ ಜವಾಬ್ದಾರಿಯುತವಾದ ಹುದ್ದೆ ಸಿಕ್ಕಿರುವುದು ಹೆಮ್ಮೆಯ ವಿಷಯ. ನನ್ನ ಮೇಲೆ ನಂಬಿಕೆಯಿಟ್ಟು ವರಿಷ್ಠರು ಜವಾಬ್ದಾರಿ ನೀಡಿದ್ದಾರೆ. ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ರಾಹುಲ್ ಗಾಂಧಿ ಮಾರ್ಗದರ್ಶನದಂತೆ ಬೂತ್, ಬ್ಲಾಕ್, ಜಿಲ್ಲಾ, ತಾಲೂಕು ಮಟ್ಟದಲ್ಲಿ ಹಾಗೂ ಯುವ ಮತ್ತು ವಿದ್ಯಾರ್ಥಿ ಘಟಕಗಳನ್ನು ಬಲಪಡಿಸಿ ಪಕ್ಷ ಸಂಘಟನೆ ಮಾಡಲಾಗುವುದು ಎಂದ ಅವರು, ಎನ್‌ಡಿಎ ಸರಕಾರದ ಆಡಳಿತದ ವೈಫಲ್ಯದ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಯುವಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವ ಕೆಲಸ ಮಾಡಬೇಕು. ಪ್ರತಿಯೊಬ್ಬ ಕಾರ್ಯಕರ್ತ ಲೋಕಸಭೆ ಚುನಾವಣೆ ಗೆಲ್ಲುವ ಸಂಕಲ್ಪ ಮಾಡಬೇಕು ಎಂದು ಅವರು ಕರೆ ನೀಡಿದರು.

ಉಪಮುಖ್ಯಮಂತ್ರಿ ಹಾಗೂ ನಿರ್ಗಮಿತ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ನಂತರ ಎರಡು ವಿಧಾನಸಭೆ, ಒಂದು ಲೋಕಸಭೆ ಚುನಾವಣೆ, ವಿವಿಧ ಸ್ಥಳೀಯ ಸಂಸ್ಥೆ ಚುನಾವಣೆ ಎದುರಿಸಿ ಕೆಲಸ ಮಾಡಿದ್ದೇನೆ. ಲಕ್ಷಾಂತರ ಕಾರ್ಯಕರ್ತರು, ನಾಯಕರು ಸಹಕಾರ ಕೊಟ್ಟಿದ್ದಾರೆ ಎಲ್ಲರಿಗೂ ಕೃತಜ್ಞತೆ ಅರ್ಪಿಸುತ್ತೇನೆ ಎಂದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ನಂತರ ಸಾಮಾನ್ಯ ಜನತೆ ಸಂಕಷ್ಟಕ್ಕೀಡಾಗಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಕಿದ್ದ ತಳಪಾಯ ಅಲ್ಲಾಡುತ್ತಿದೆ. ಎನ್‌ಡಿಎ ಸರಕಾರ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣ ಮಾಡುವಲ್ಲಿ ವಿಫಲವಾಗಿದೆ ಎಂದು ಪರಮೇಶ್ವರ್ ದೂರಿದರು.

ಬಿಜೆಪಿ ನಾಯಕರು ಕೋಮುವಾದ ಪ್ರಚೋದಿಸುವ ಹಾಗೂ ಸಂವಿಧಾನ ಬದಲಿಸುವ ಮಾತುಗಳನ್ನಾಡುತ್ತಿದ್ದಾರೆ. ಇದು ಅತ್ಯಂತ ಖಂಡನೀಯ. ಇದರಿಂದ ಮುಕ್ತಿ ಸಿಗಬೇಕಾದರೆ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕು. ರಾಹುಲ್ ಪ್ರಧಾನಿಯಾಗಬೇಕು ಎಂದು ಅವರು ಆಶಿಸಿದರು.

ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಎಐಸಿಸಿ ಕಾರ್ಯದರ್ಶಿ ಸಲೀಮ್ ಅಹಮದ್, ಸಚಿವರಾದ ಡಿ.ಕೆ.ಶಿವಕುಮಾರ್, ಕೃಷ್ಣಭೈರೇಗೌಡ, ಸಂಸದ ಕೆ.ಎಚ್.ಮುನಿಯಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News