ನಮ್ಮ ಸೋಲಿಗೆ ಬಿಜೆಪಿ ಅಪಪ್ರಚಾರ ಕಾರಣ: ಮಾಜಿ ಸಿಎಂ ಸಿದ್ದರಾಮಯ್ಯ

Update: 2018-07-11 15:42 GMT

ಬೆಂಗಳೂರು, ಜು.11: ನುಡಿದಂತೆ ನಡೆದಿದ್ದೆವು. ಆದರೆ, ಜನ ಪೂರ್ಣ ಆಶೀರ್ವಾದ ಮಾಡಲಿಲ್ಲ. ಮುಖ್ಯವಾಗಿ ನಮ್ಮ ಸೋಲಿಗೆ ಬಿಜೆಪಿಯವರು ಮಾಡಿದ ಅಪಪ್ರಚಾರವೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬುಧವಾರ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಕೆಪಿಸಿಸಿ ನೂತನ ಅಧ್ಯಕ್ಷನಾಗಿ ದಿನೇಶ್ ಗುಂಡೂರಾವ್ ಹಾಗೂ ಕಾರ್ಯಾಧ್ಯಕ್ಷರಾಗಿ ಈಶ್ವರ್ ಖಂಡ್ರೆ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಳೆದ ಬಾರಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ್ದೇವೆ. ನನ್ನ ಮೇಲೆ ಹಾಗೂ ಪರಮೇಶ್ವರ್ ಮೇಲೆ ಅವರು ನಂಬಿಕೆ ಇಟ್ಟಿದ್ದರು. ಆದರೆ, ಅವರ ನಿರೀಕ್ಷೆಯಂತೆ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆಂದು ಇಟ್ಟಿದ್ದ ವಿಶ್ವಾಸ ಪೂರ್ಣವಾಗಲಿಲ್ಲ ಎಂದು ಅವರು ಹೇಳಿದರು.

ಪರಮೇಶ್ವರ್ ನೇತತ್ವದಲ್ಲಿ ಎರಡು ವಿಧಾನಸಭೆ, ಲೋಕಸಭೆ, ಜಿ.ಪಂ, ತಾ.ಪಂ ಚುನಾವಣೆ ಸೇರಿದಂತೆ ಅನೇಕ ಚುನಾವಣೆ ಎದುರಿಸಿದ್ದೇವೆ. ಅವರ ತಂಡ ಪಕ್ಷದ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಅವರೊಂದಿಗೆ ಒಟ್ಟಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಅದು ಹೆಗ್ಗಳಿಕೆಯ ವಿಚಾರ ಎಂದು ಸಿದ್ದರಾಮಯ್ಯ ಹೇಳಿದರು. ಚುನಾವಣೆ ವೇಳೆ ಸಂಘ ಪರಿವಾರ ಹಾಗೂ ಬಿಜೆಪಿಯವರು ಮನೆ ಮನೆಗೆ ಹೋಗಿ ಅಪಪ್ರಚಾರ ಮಾಡಿದರು. ಅವರು ಮಾಡಿದ ಅಪಪ್ರಚಾರವನ್ನು ಮತದಾರರಿಗೆ ತಿಳಿಸುವ ಗಟ್ಟಿಯಾದ ಕೆಲಸವನ್ನು ನಾವು ಮಾಡಲಿಲ್ಲ ಎಂದು ಸಿದ್ದರಾಮಯ್ಯ ವಿಶ್ಲೇಷಿಸಿದರು. 

ಧರ್ಮಸ್ಥಳಕ್ಕೆ ಚಿಕಿತ್ಸೆಗೆ ಹೋದಾಗ ವಿಧಾನಸಭೆ ಚುನಾವಣಾ ಫಲಿತಾಂಶದ ಕುರಿತು ಅನೇಕರನ್ನು ವಿಚಾರಿಸಿದೆ. ಹಿಂದುತ್ವದ ಬಗ್ಗೆ ಬಿಜೆಪಿಯವರು ಮಾಡಿದ ತಪ್ಪು ಪ್ರಚಾರವೆ ನಮ್ಮ ಸೋಲಿಗೆ ಕಾರಣ ಎಂದರು. ಮೂವತ್ತು ಮತದಾರರಿಗೆ ಒಬ್ಬರನ್ನು ನೇಮಿಸಿ ಪ್ರತಿದಿನ ಹಿಂದುತ್ವದ ಬಗ್ಗೆ ತಪ್ಪುಕಲ್ಪನೆ ಮೂಡಿಸಿದ್ದಾರೆ. ಅದಕ್ಕೆ ನಾವು ಕೌಂಟರ್ ಕೊಡುವಲ್ಲಿ ವಿಫಲರಾಗಿದ್ದೇವೆ ಎಂದು ಅವರು ಹೇಳಿದರು.

ಮುಂದಿನ ಲೋಕಸಭೆ ಚುನಾವಣೆ ನವೆಂಬರ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ಈ ಚುನಾವಣೆಯಲ್ಲಾದರೂ ಅವರ ಅಪ ಪ್ರಚಾರವನ್ನು ಖಂಡಿಸಿ, ಜನರಿಗೆ ಸತ್ಯಾಂಶವನ್ನು ತಿಳಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು. ದಿನೇಶ್ ಗುಂಡೂರಾವ್ ನೇತತ್ವದಲ್ಲಿ ಈ ಕೆಲಸ ಮಾಡೋಣ. ಜನರಿಗೆ ಮನವರಿಕೆ ಆಗಲಿದೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಜನ ತಕ್ಕ ಉತ್ತರ ಕೊಡುತ್ತಾರೆಂಬ ವಿಶ್ವಾಸವಿದೆ. ಆ ಚುನಾವಣೆಯಲ್ಲಿ ರಾಷ್ಟ್ರೀಯ ಸಮಸ್ಯೆ ಮುಖ್ಯವಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಪ್ರಧಾನಿ ನರೇಂದ್ರಮೋದಿ ಆಡಳಿತದ ಎಲ್ಲ ಹಂತಗಳಲ್ಲಿಯೂ ಸಂಪೂರ್ಣ ವಿಫಲವಾಗಿದ್ದಾರೆ. ಕೊಟ್ಟ ಭರವಸೆ ಈಡೇರಿಸದೆ ಬೇರೆ ಕಡೆ ಜನರ ಮನಸ್ಸು ತಿರುಗಿಸುತ್ತಿದ್ದಾರೆ. ಮತ್ತೆ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ ಎಂದು ಅವರು ಟೀಕಿಸಿದರು.

ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬಾರದು. ರಾಜ್ಯದ 28 ಲೋಕಸಭಾ ಸ್ಥಾನಗಳ ಪೈಕಿ ಕನಿಷ್ಠ 20 ಸ್ಥಾನಗಳಲ್ಲಾದರೂ ನಾವು ಗೆಲ್ಲಬೇಕು. ಬೇರು ಮಟ್ಟದಲ್ಲಿ ಪಕ್ಷವನ್ನು ಬಲಗೊಳಿಸಿ, ಬಿಜೆಪಿಯ ಸುಳ್ಳನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು. ಸಮಾಜ ಒಡೆಯುವ ವಿಷಯ ಬಿಟ್ಟು ಬಿಜೆಪಿ ಬಳಿ ಏನು ಇಲ್ಲ. ಕಾಂಗ್ರೆಸ್ ಬಳಿ ನಾಯಕತ್ವ, ಸಿದ್ಧಾಂತವಿದೆ. ಲೋಕಸಭೆ ಚುನಾವಣೆಯಲ್ಲಿ ಜಾತ್ಯತೀತ ಶಕ್ತಿಗಳು ಒಂದಾಗಿ ಕೋಮುವಾದಿ ಬಿಜೆಪಿಯನ್ನು ಸೋಲಿಸುತ್ತವೆ. ರಾಹುಲ್ ಗಾಂಧಿ ಪ್ರಧಾನಿಯಾಗುವ ಎಲ್ಲ ಲಕ್ಷಣ ಗೋಚರಿಸುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಅನ್ನಭಾಗ್ಯ ಅಕ್ಕಿ ಹೆಚ್ಚಳಕ್ಕೆ ಸಿಎಂಗೆ ಪತ್ರ
ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡುದಾರರಿಗೆ ನೀಡುತ್ತಿದ್ದ ತಲಾ 7 ಕೆಜಿ ಅಕ್ಕಿಯನ್ನು ಬಜೆಟ್‌ನಲ್ಲಿ 5 ಕೆಜಿಗೆ ಇಳಿಕೆ ಮಾಡಿದ್ದಾರೆ. ಅಲ್ಲದೆ, ಪೆಟ್ರೋಲ್ ಹಾಗೂ ಡಿಸೇಲ್ ಮೇಲೆ ಹೆಚ್ಚುವರಿ ತೆರಿಗೆ ಹಾಕಲಾಗಿದೆ. ಅಕ್ಕಿಯನ್ನು ಮೊದಲಿನಂತೆ 7 ಕೆಜಿಗೆ ಹೆಚ್ಚಳ ಮಾಡಬೇಕು ಹಾಗೂ ಇಂಧನ ಬೆಲೆ ಏರಿಕೆ ವಿರೋಧಿಸಿ ನಾವು ರಾಷ್ಟ್ರವ್ಯಾಪಿ ಹೋರಾಟ ಮಾಡುತ್ತಿರುವುದರಿಂದ ತೆರಿಗೆಯನ್ನು ಇಳಿಸುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News