ಡಿ.ಜಿ. ವಂಝಾರ ಸೊಹ್ರಾಬುದ್ದೀನ್ ಎನ್‍ಕೌಂಟರ್ ನ 'ಮಾಸ್ಟರ್ ಮೈಂಡ್': ವಕೀಲರ ಆರೋಪ

Update: 2018-07-12 08:24 GMT

ಮುಂಬೈ, ಜು.12: ಗುಜರಾತ್ ನ ಮಾಜಿ ಎಟಿಎಸ್ ಮುಖ್ಯಸ್ಥ ಡಿ.ಜಿ. ವಂಝಾರ ಅವರು ಸೊಹ್ರಾಬುದ್ದೀನ್ ಶೇಖ್, ಆತನ ಪತ್ನಿ ಕೌಸರ್ ಬೀ ಹಾಗೂ ಸಹವರ್ತಿ ತುಳಸೀರಾಂ ಪ್ರಜಾಪತಿ 'ನಕಲಿ ಎನ್‍ಕೌಂಟರ್'ಗಳ `ರೂವಾರಿ' ಎಂದು ಸೊಹ್ರಾಬುದ್ದೀನ್ ಸೋದರ ರುಬಾಬುದ್ದೀನ್ ಶೇಖ್ ಪರ ವಕೀಲ ಬುಧವಾರ ಬಾಂಬೆ ಹೈಕೋರ್ಟಿನ ಮುಂದೆ ಆರೋಪಿಸಿದ್ದಾರೆ.

ಹಿರಿಯ ಐಪಿಎಸ್ ಅಧಿಕಾರಿಗಳಾದ ದಿನೇಶ್ ಎಂ ಎನ್. ರಾಜಕುಮಾರ್ ಪಾಂಡ್ಯನ್ ಹಾಗೂ ವಂಝಾರ ಅವರ ವಿರುದ್ಧದ ನಕಲಿ ಎನ್‍ಕೌಂಟರ್ ಪ್ರಕರಣದ ಆರೋಪಗಳನ್ನು ಕೈಬಿಡುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅಪೀಲಿನ ಮೇಲಿನ ವಿಚಾರಣೆ ವೇಳೆ ಮೇಲಿನ ಆರೋಪ ವಕೀಲರಾದ ಗೌತಮ್ ತಿವಾರಿಯವರಿಂದ ಬಂದಿದೆ.

"ವಂಝಾರ ಅವರು ಸೊಹ್ರಾಬುದ್ದೀನ್ ಮತ್ತಿತರರನ್ನು ಅಪಹರಿಸಿ ಕೊಂದ ಎಟಿಎಸ್ ನ ಅಂದಿನ ಮುಖ್ಯಸ್ಥರಾಗಿದ್ದರು. ಅವರ ಅಪಹರಣ ಹಾಗೂ ಹತ್ಯೆಯ ಸಂದರ್ಭ ವಂಝಾರ ಹಾಜರಿರದೇ ಇದ್ದರೂ ಅವರ ಸೂಚನೆಯಂತೆಯೇ ಎಲ್ಲವೂ ನಡೆದಿತ್ತು" ಎಂದು ತಿವಾರಿ ಹೇಳಿದ್ದಾರೆ.

ಸೊಹ್ರಾಬುದ್ದೀನ್ ಶೇಖ್ ಮತ್ತು ಕೌಸರ್ ಬೀ ಹತ್ಯೆಗಳಿಗೆ ಸಾಕ್ಷಿಯಾಗಿದ್ದ ಪ್ರಜಾಪತಿ ಎಲ್ಲ ಮಾಹಿತಿಯನ್ನು ಹಲವಾರು ಪ್ರಾಸಿಕ್ಯೂಶನ್ ಸಾಕ್ಷಿಗಳಿಗೆ ವಿವರಿಸಿದ್ದ ಎಂದೂ ವಕೀಲರು ತಿಳಿಸಿದ್ದಾರೆ.

2006ರಲ್ಲಿ ಪ್ರಜಾಪತಿಯಿದ್ದ ಉದಯಪುರ ಕೇಂದ್ರ ಕಾರಾಗೃಹದಲ್ಲಿ ಪ್ರಜಾಪತಿ ಸಹಕೈದಿಗಳಾಗಿದ್ದ ಹಲವರು ನೀಡಿದ್ದ ಹೇಳಿಕೆಗಳನ್ನು ತಿವಾರಿ ಓದಿ ಹೇಳಿದ್ದರು. ಇವರನ್ನೆಲ್ಲಾ ಸಿಬಿಐ ಪ್ರಾಸಿಕ್ಯೂಶನ್ ಸಾಕ್ಷಿಗಳನ್ನಾಗಿಸಿತ್ತು. ಈ ಹೇಳಿಕೆಗಳನ್ನು  ಪ್ರಜಾಪತಿಯ ಸಾವಿನ ಮುಂಚಿನ ಹೇಳಿಕೆಯೆಂದು ಪರಿಗಣಿಸಬೇಕೆಂದು ವಕೀಲರು ಆಗ್ರಹಿಸಿದ್ದಾರೆ.

ಸೊಹ್ರಾಬುದ್ದೀನ್ ಶೇಖ್  ಎನ್‍ಕೌಂಟರ್ ಪ್ರಕರಣದಲ್ಲಿ ಸಿಬಿಐ 38 ಮಂದಿ ಆರೋಪಿಗಳನ್ನು ಗುರುತಿಸಿದ್ದರೂ ಆಗಸ್ಟ್ 2016 ಹಾಗೂ ಸೆಪ್ಟೆಂಬರ್ 2017ರ ನಡುವೆ ನಡೆದ  ವಿಚಾರಣೆ ವೇಳೆ ಮುಂಬೈಯ ವಿಚಾರಣಾ ನ್ಯಾಯಾಲಯ 15 ಆರೋಪಿಗಳನ್ನು ಖುಲಾಸೆಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News