15 ದಿನಗಳಲ್ಲಿ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ: ಸಚಿವ ಎನ್.ಮಹೇಶ್

Update: 2018-07-12 14:21 GMT

ಬೆಂಗಳೂರು, ಜು.12: ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಾಲಾ ಕಾಲೇಜುಗಳ ಶಿಕ್ಷಕರ, ಉಪನ್ಯಾಸಕರ ವರ್ಗಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ 15 ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಭರವಸೆ ನೀಡಿದ್ದಾರೆ.

ಗುರುವಾರ ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯೆ ತಾರಾ ಅನೂರಾಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶಿಕ್ಷಕರ, ಉಪನ್ಯಾಸಕರ ವರ್ಗಾವಣಾ ಪ್ರಕ್ರಿಯೆಯನ್ನು ಕೌನ್ಸಿಲಿಂಗ್ ಮೂಲಕ ನಡೆಸಲು 2018ರ ಜನವರಿಯಲ್ಲಿ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು. ಆದರೆ, ಸಾರ್ವತ್ರಿಕ ವಿಧಾನಸಭೆ ಚುನಾವಣೆ ಬಂದಿದ್ದರಿಂದ ವರ್ಗಾವಣೆ ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು. ಮುಂದಿನ 15 ದಿನಗಳಲ್ಲಿ ವರ್ಗಾವಣಾ ಪ್ರಕ್ರಿಯೆಗೆ ಚಾಲನೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಪದವಿ ಪೂರ್ವ ಉಪನ್ಯಾಸಕರ ಕೌನ್ಸೆಲಿಂಗ್ ಸಂಬಂಧಪಟ್ಟಂತೆ ಎ, ಬಿ, ಸಿ ವಲಯಗಳ ಗುರುತಿಸುವಿಕೆಗೆ ತಿದ್ದುಪಡಿ ಮಾಡಲು ಕ್ರಮ ವಹಿಸಿರುವುದರಿಂದಲೂ ಪ್ರಕ್ರಿಯೆಗೆ ವಿಳಂಬವಾಗಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ(ಶಿಕ್ಷಕರ ವರ್ಗಾವಣಾ ನಿಯಂತ್ರಣ) (ತಿದ್ದುಪಡಿ) ನಿಯಮಗಳು 2017ರ ಅನ್ವಯ ಒಂದು ಘಟಕದ ಒಳಗೆ ಕೋರಿಕೆ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಕನಿಷ್ಠ ಸೇವಾವಧಿ 5 ವರ್ಷಗಳನ್ನು ನಿಗದಿಪಡಿಸಿರುವುದನ್ನು 3 ವರ್ಷಗಳಿಗೆ ನಿಗದಿಪಡಿಸುವುದು. ಕಡ್ಡಾಯ ವರ್ಗಾವಣೆಯಲ್ಲಿ ಕ್ಯಾನ್ಸರ್ ಮತ್ತು ಡಯಾಲಿಸಿಸ್‌ಗೆ ಒಳಗಾಗಿರುವವರಿಗೆ ವಿನಾಯಿತಿ ನೀಡಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News