‘ಚಾರಿತ್ರ್ಯವಧೆ’ ಮಾಡುವುದನ್ನು ಸಹಿಸುವುದಿಲ್ಲ: ಸದಸ್ಯರಿಗೆ ಸ್ಪೀಕರ್ ರಮೇಶ್‌ ಕುಮಾರ್ ಎಚ್ಚರಿಕೆ

Update: 2018-07-12 14:49 GMT

ಬೆಂಗಳೂರು, ಜು. 12: ಅಧಿವೇಶನ ಕಲಾಪದಲ್ಲಿ ಯಾರೊಬ್ಬರ ಚಾರಿತ್ರ್ಯವಧೆ ಮಾಡುವ ಕೆಲಸಕ್ಕೆ ಮುಂದಾದರೆ ಸಹಿಸುವುದಿಲ್ಲ ಎಂದು ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಎಲ್ಲ ಸದಸ್ಯರಿಗೆ ಎಚ್ಚರಿಕೆ ನೀಡಿದರು.

ಗುರುವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಎಸ್.ಎ.ರಾಮದಾಸ್ ಬಜೆಟ್ ಮೇಲಿನ ಚರ್ಚೆ ವೇಳೆ ಇಂದಿರಾ ಕ್ಯಾಂಟಿನ್ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ವಿಚಾರ ಪ್ರಸ್ತಾಪಿಸಿದ್ದನ್ನು ಸದನದ ಗಮನಕ್ಕೆ ತಂದ ಸಂದರ್ಭದಲ್ಲಿ ಸ್ಪೀಕರ್ ಎಚ್ಚರಿಸಿದರು.

ವಿಧಾನಸಭೆಯಲ್ಲಿ ಯಾರೂ ‘ಹಿಟ್ ಅಂಡ್ ರನ್’ಗೆ ಅವಕಾಶ ನೀಡಬಾರದು. ಯಾವುದೇ ಆರೋಪ ಮಾಡಬೇಕಿದ್ದರೂ ದಾಖಲೆ ಕೊಟ್ಟು ಕಲಾಪದ ನಿಯಮಾವಳಿ ಪ್ರಕಾರ ನೋಟಿಸ್ ನೀಡಿದರೆ ಪರಿಶೀಲಿಸಿ ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಅವರು ನಿರ್ದೇಶನ ನೀಡಿದರು. ಚಾರಿತ್ರ್ಯವಧೆ ನೋವನ್ನು ನಮ್ಮ ಇಡೀ ಕುಟುಂಬವೂ ಅನುಭವಿಸಿದೆ. ನಿಮ್ಮ ಬಳಿ ಅಗತ್ಯ ಸಾಕ್ಷಾಧಾರಗಳಿದ್ದರೆ, ನಿಯಮಾವಳಿಗಳ ಪ್ರಕಾರ ನೋಟಿಸ್ ಕೊಟ್ಟರೆ ಅವಕಾಶ ನೀಡಲಾಗುವುದು ಎಂದ ಅವರು, ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಕಾನೂನು ಸಚಿವ ಕೃಷ್ಣಭೈರೇಗೌಡ, ‘ನಿರ್ದಿಷ್ಟ ಆರೋಪ ಮಾಡುವ ವೇಳೆ ಸೂಕ್ತ ದಾಖಲೆಗಳನ್ನು ಒದಗಿಸಿ, ನಿಯಮಾವಳಿಗಳ ಪ್ರಕಾರ ಚರ್ಚೆ ಮಾಡುವುದಾದರೆ ಸರಕಾರ ಉತ್ತರ ನೀಡಲು ಸಿದ್ಧ. ಯಾವುದೇ ತಪ್ಪು ಮಾಡಿದ್ದರೂ ಶಿಕ್ಷೆ ಕೊಡಿಸಲು ಸಿದ್ದ. ಒಂದು ವೇಳೆ ಶಾಸಕರು ಮಾಡಿದ ಆರೋಪ ಸಾಬೀತಾದರೆ, ಆರೋಪಿತರಿಗೆ ಶಿಕ್ಷೆಯಾದರೆ ನಿಮಗೆ ಲಾಭವಾಗಲಿದೆ’ ಎಂದು ಪ್ರತಿಕ್ರಿಯಿಸಿದರು.

ಚರ್ಚೆಗೆ ಪಟ್ಟು: ಈ ಹಂತದಲ್ಲಿ ಎದ್ದುನಿಂತ ರಾಮದಾಸ್, ಇಂದಿರಾ ಕ್ಯಾಂಟಿನ್‌ನಲ್ಲಿ ಕಳಪೆ ಆಹಾರ ನೀಡಲಾಗಿದೆ. ಕೇವಲ 120 ಮಂದಿಗಷ್ಟೇ ತಿಂಡಿ ನೀಡಿ 500 ಮಂದಿಗೆ ನೀಡಿದ ದಾಖಲೆ ಸೃಷ್ಟಿಸಲಾಗಿದೆ. ಈ ಬಗ್ಗೆ ನನ್ನ ಬಳಿ ದಾಖಲೆಗಳಿದ್ದು, ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಇದರಿಂದ ಸದನದಲ್ಲಿ ಕೆಲಕಾಲ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪವೂ ನಡೆಯಿತು. ಸ್ಪೀಕರ್ ಪೀಠದಲ್ಲಿದ್ದ ಉಪ ಸಭಾಧ್ಯಕ್ಷ ಎಂ.ಕೃಷ್ಣರೆಡ್ಡಿ ಸದಸ್ಯರನ್ನು ಸಮಾಧಾನ ಪಡಿಸಲು ಯತ್ನಿಸಿದರೂ, ಯಾರೊಬ್ಬರು ಅವರ ಮಾತುಗಳನ್ನು ಆಲಿಸುವ ಸ್ಥಿತಿಯಲ್ಲಿ ಇರಲಿಲ್ಲ. ಆ ಬಳಿಕ ಬಜೆಟ್ ಮೇಲಿನ ಚರ್ಚೆ ಮುಂದುವರೆಸಲು ಅವಕಾಶ ನೀಡಬೇಕೆಂದು ಹಾಗೂ ಕಾನೂನು ಸಚಿವ ಕೃಷ್ಣಭೈರೇಗೌಡ ಬಳಸಿದ ಶಬ್ದವನ್ನು ಕಡತದಿಂದ ತೆಗೆದು ಹಾಕಬೇಕೆಂದು ಒತ್ತಾಯಿಸಿ ರಾಮ್‌ದಾಸ್ ಕೆಲಕಾಲ ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News