ರಾಜ್ಯದ ಜನತೆಯ ಶಾಪಕ್ಕೆ ಗುರಿಯಾಗಿದ್ದೀರಿ: ಶಾಸಕ ಜೆ.ಸಿ.ಮಾಧುಸ್ವಾಮಿ
ಬೆಂಗಳೂರು, ಜು. 12: ‘ರೈತರ ಸಾಲಮನ್ನಾಕ್ಕೆ ಪರ್ಯಾಯ ಸಂಪನ್ಮೂಲ ಕ್ರೋಡೀಕರಣಕ್ಕೆ ಗಮನಹರಿಸದೆ ಪೆಟ್ರೋಲ್, ಡಿಸೇಲ್, ವಿದ್ಯುತ್ ಬೆಲೆ ಏರಿಕೆ ಹೊರೆ ಹೇರುವ ಮೂಲಕ ರಾಜ್ಯದ ಜನತೆ ಶಾಪಕ್ಕೆ ಗುರಿಯಾಗಿದ್ದೀರಿ’ ಎಂದು ಬಿಜೆಪಿ ಸದಸ್ಯ ಜೆ.ಸಿ.ಮಾಧುಸ್ವಾಮಿ ಟೀಕಿಸಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ರೈತರ ಮುಖ ತೋರಿಸಿ ಜನರ ಬದುಕಿನ ಮೇಲೆ ಹೊರೆ ಹೇರಿದ್ದು ಸಲ್ಲ. ರೈತರಿಗೆ ನೀವು ಕೊಡುವುದು 15-20 ಸಾವಿರ ರೂ.ಗಳಷ್ಟೇ. ಆದರೆ ನೀವು ಪ್ರಚಾರ ಪಡೆಯುತ್ತಿರುವುದು ನೋಡಿದರೆ ಅಚ್ಚರಿಯಾಗುತ್ತಿದೆ ಎಂದರು.
ಯಾರದ್ದೊ ಇಚ್ಛೆಗೆ, ಮತ್ಯಾರದ್ದೋ ಪ್ರಣಾಳಿಕೆಗೆ ಬಜೆಟ್ ಮಂಡನೆ ಮಾಡುವ ಮೂಲಕ ಸಾಲದ ಬಿಕ್ಕಟ್ಟಿನಲ್ಲಿದ್ದ ಜನರಿಗೆ ಮತ್ತೊಂದು ಸಾಲದ ಬಿಕ್ಕಟ್ಟು ಸೃಷ್ಟಿಸುವ ಅಗತ್ಯವಿತ್ತೇ ಎಂದು ಪ್ರಶ್ನಿಸಿದ ಅವರು, 900 ಕೋಟಿ ರೂ.ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು ಬಳಕೆ ಮಾಡಿಲ್ಲ. ಶಾಸಕರ ಹಣೆಬರಹವೇ ಹೀಗಾದರೆ ಇನ್ನು ಜನ ಕಲ್ಯಾಣ ಹೇಗೆ? ಎಂದರು.
ಹೇಮಾವತಿ ಯೋಜನೆಗೆ ಇನ್ನೂ ಸಂಪೂರ್ಣ ಭೂಸ್ವಾಧೀನವೇ ಆಗಿಲ್ಲ. ಆಗಲೇ ಕೆರೆಗಳಿಗೆ ನೀರು ತುಂಬಿಸಲಾಗಿದೆ ಎಂದು ಬೋರ್ಡ್ ಹಾಕಿಕೊಂಡಿದ್ದಾರೆಂದು ಟೀಕಿಸಿದ ಅವರು, ಸರಕಾರದ ವಿಳಂಬ ನೀತಿಯಿಂದ ಭೂಸ್ವಾಧೀನಕ್ಕೆ ಹಣ ನಾಲ್ಕೈದು ಪಟ್ಟು ಹೆಚ್ಚಾಗಿದೆ ಎಂದು ಆಕ್ಷೇಪಿಸಿದರು.
ರೈತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಯೋಜನೆಗಳನ್ನು ರೂಪಿಸಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಕಡಿಮೆ ಬಡ್ಡಿ ದರದಲ್ಲಿ ಅಪೆಕ್ಸ್ ಬ್ಯಾಂಕ್ ಮೂಲಕವೇ ರೈತರಿಗೆ ಸಾಲ ಸೌಲಭ್ಯ ಕಲ್ಪಿಸಬೇಕೆಂದ ಅವರು, ಗ್ರಾಮೀಣ ರಸ್ತೆಗಳ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಿ ಎಂದರು.
12 ಸಾವಿರ ಕೋಟಿ ರೂ.ಬೃಹತ್ ಮೊತ್ತದ ವಹಿವಾಟು ನಡೆಸುವ ಕೆಎಂಎಫ್‌ಗೆ ಕಾರ್ಯನಿರ್ವಹಣಾಧಿಕಾರಿ, ಅಧ್ಯಕ್ಷರೂ ಇಲ್ಲ. ಇದು ರಾಜ್ಯ ನಡೆಸುವ ಕ್ರಮವೇ ಎಂದು ಕೇಳಿದ ಅವರು, ಮಂಡಳಿಯಲ್ಲಿ 4ರಿಂದ 5ರಷ್ಟು ಹೆಚ್ಚುವರಿ ನೇಮಕ ಮಾಡಲಾಗಿದೆ. ವಾರ್ಷಿಕ 96ಲಕ್ಷ ರೂ.ವೇತನ ನೀಡಿ ಸಲಹೆಗಾರರೊಬ್ಬರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇವರೆಲ್ಲ ಸರಕಾರದ ಹಣದಲ್ಲಿ ಮೋಜು ಮಾಡುತ್ತಿದ್ದಾರೆಂದು ಟೀಕಿಸಿದರು.
ಹಾಲು ಉತ್ಪಾದಕರಿಂದ ಲೀಟರ್ 21 ರೂ.ಗಳಿಗೆ ಹಾಲನ್ನು ಖರೀದಿಸಿ ಕೆಎಂಎಫ್ 36 ರೂ.ಗಳಿಗೆ 15 ರೂ.ಗಳ ಅಂತರವಿದೆ. ಆದರೆ, ಖಾಸಗಿಯವರು 28 ರೂ.ಗಳಿಗೆ ಹಾಲನ್ನು ಖರೀದಿಸುತ್ತಿದ್ದು, ಕೆಎಂಎಫ್ ರೈತರಿಗೆ ಭಾರಿ ವಂಚನೆ ಮಾಡುತ್ತಿದ್ದು, ಇದನ್ನು ತಪ್ಪಿಸಲು ಸರಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
‘ಸಂಬಂಧಿಕರಲ್ಲದಿದ್ದರೆ ಶಿಕ್ಷೆ ಕೊಡಿ-ಬಲಿ ಹಾಕಿ ಅಂತೀರಿ. ರೈತರು ಅಸಂಘಟಿತರು ಅವರು ಯೂನಿಯನ್ ಮಾಡಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಅವರ ಶೋಷಣೆ ಮಿತಿ ಮೀರಿದೆ. ರೈತರಿಗೆ ಯಾವುದೇ ಸಬ್ಸಿಡಿ ನೀಡುವುದು ಬೇಡ. ಅವರಿಗೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಅದನ್ನು ಪ್ರೋತ್ಸಾಹ ಧನ ಎಂದು ಹೇಳಿ’
-ಕೆ.ಆರ್.ರಮೇಶ್ ಕುಮಾರ್ ಸ್ಪೀಕರ್‘ಹಾಲು ಉತ್ಪಾದಕರಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು ರೈತರ ಹೆಸರಿನಲ್ಲಿ ಕೆಲವರು ಕಬಳಿಸುತ್ತಿದ್ದು, ಮಧ್ಯವರ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ತಪ್ಪಿತಸ್ಥರನ್ನು ಬಲಿ ಹಾಕಲು ನಮ್ಮದೇನು ಅಭ್ಯಂತರವಿಲ್ಲ. ಪಶು ಆಹಾರ ಖರೀದಿಯಲ್ಲಿಯೂ ಲೂಟಿ ನಡೆಯುತ್ತಿದ್ದು, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು’
-ಎಚ್.ಡಿ.ರೇವಣ್ಣ ಲೋಕೋಪಯೋಗಿ ಸಚಿವ