ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಿಸಿ: ಶಾಸಕ ರಾಜೂಗೌಡ

Update: 2018-07-12 15:08 GMT

ಬೆಂಗಳೂರು, ಜು. 12: ಪರಿಶಿಷ್ಟ ಪಂಗಡದ(ಎಸ್ಟಿ) ಜನಸಂಖ್ಯೆಗೆ ಅನುಗುಣವಾಗಿ ಶೇ.7ರಷ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಬಿಜೆಪಿ ಸದಸ್ಯ ರಾಜೂಗೌಡ(ನರಸಿಂಹ ನಾಯಕ್) ಇಂದಿಲ್ಲಿ ಆಗ್ರಹಿಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಎಸ್ಟಿಗೆ ಹೊಸದಾಗಿ ಕೆಲ ಸಮುದಾಯಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಇದಕ್ಕೆ ತಮ್ಮ ಆಕ್ಷೇಪವಿಲ್ಲ. ಆದರೆ, ಮೀಸಲಾತಿ ಪ್ರಮಾಣ ಹೆಚ್ಚಳ ಮಾಡದಿರುವುದನ್ನು ನೋಡಿದರೆ ‘ಬೇಡಿ ತಿನ್ನುವವರನ್ನು ಕಾಡಿ ತಿಂದರು’ ಎಂಬಂತೆ ಆಗಿದೆ ನಮ್ಮ ಸ್ಥಿತಿ ಎಂದು ವಿವರಿಸಿದರು.

ನಿಷೇಧ ಹಿಂಪಡೆಯಿರಿ: ನಾರಾಯಣಪುರ ಎಡದಂಡೆ, ಬಲದಂಡೆ ನಾಲಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಬೆಳೆ ನಿಷೇಧಿಸಲಾಗಿದೆ. ಒಂದು ವೇಳೆ ಭತ್ತ ಬೆಳೆದರೆ ಅಧಿಕಾರಿಗಳು ಭತ್ತದ ಮೌಲ್ಯಕ್ಕಿಂತಲೂ ದುಬಾರಿ ದಂಡ ವಿಧಿಸುತ್ತಿದ್ದಾರೆ. ಕೂಡಲೇ ಈ ನಿಷೇಧವನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು.

ವಸತಿ ಇಲಾಖೆಯಲ್ಲಿ ಮನೆಗಳ ನಿರ್ಮಾಣದ ಪ್ರಗತಿ ಪರಿಶೀಲಿಸಲು ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ನೇಮಿಸಿದ್ದ ನೋಡಲ್ ಅಧಿಕಾರಿಗಳಿಗೆ 2 ವರ್ಷದಿಂದ ವೇತನ ನೀಡಿಲ್ಲ. ಹೀಗಾಗಿ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದುದರಿಂದ ಕೂಡಲೇ ಅವರಿಗೆ ವೇತನ ನೀಡಬೇಕು ಎಂದು ಆಗ್ರಹಿಸಿದರು.

ಗ್ರಾಮೀಣ ಪ್ರದೇಶದ ಮಹಿಳೆಯರ ಗೌರವಯುತ ಬದುಕಿಗೆ ವೈಯಕ್ತಿಕ ಮತ್ತು ಸಾಮೂಹಿಕ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಬೇಕೆಂದು ಆಗ್ರಹಿಸಿದ ಅವರು, ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕದ ನೆಪದಲ್ಲಿ ಹೈದರಾಬಾದ್ ಕರ್ನಾಟಕ ಮರೆತಿದ್ದು, ನಾವು ನಿಮ್ಮ ಕರ್ನಾಟಕದಲ್ಲೆ ಇದ್ದೇವೆ ಎಂದು ಚಟಾಕಿ ಹಾರಿಸಿದರು.

ಜೆಡಿಎಸ್‌ನವರು ನಿಜವಾದ ಹಿಂದುತ್ವವಾದಿಗಳು
‘ಬಿಜೆಪಿಯವರು ಹಿಂದುತ್ವವಾದಿಗಳೆಂದು ಹೇಳಿಕೊಳ್ಳುತ್ತಾರೆ. ಆದರೆ, ಜೆಡಿಎಸ್‌ನವರು ನಿಜವಾದ ಹಿಂದುತ್ವವಾದಿಗಳು. ನಾವು ಬಿಎಸ್‌ವೈ ಅವರನ್ನು ಸಿಎಂ ಮಾಡಲು ತುಂಬಾ ಪ್ರಯತ್ನ ಪಟ್ಟರೂ ಆಗಲಿಲ್ಲ. ಏಕೆಂದರೆ ರೇವಣ್ಣ ಮಾಡಿದ ಯಜ್ಞ-ಯಾಗಾದಿಗಳ ಫಲದಿಂದ ಕುಮಾರಸ್ವಾಮಿ ಸಿಎಂ ಆದರು. ಹೀಗಾಗಿ ಹವನ- ಹೋಮಕ್ಕೆ ಹಣ ಮೀಸಲಿಡಬೇಕು’
-ರಾಜೂಗೌಡ ಬಿಜೆಪಿ ಶಾಸಕ

‘ಏನ್ ರೀ ರಾಜೂಗೌಡ ಅಲಿಯಾಸ್ ಹೆಲಿಕಾಫ್ಟರ್ ಗೌಡ. ನಿಮ್ಮ ಎಲ್ಲ ಸಲಹೆಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಲಿದೆ. ಅತ್ಯಂತ ಸೂಕ್ಷ್ಮವಾಗಿ ಉತ್ತಮ ಸಲಹೆ ನೀಡಿದ್ದೀರಿ, ಧನ್ಯವಾದಗಳು’
-ರಮೇಶ್‌ಕುಮಾರ್ ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News