ಸಹಕಾರಿ ಬ್ಯಾಂಕುಗಳಲ್ಲಿನ ಒಂದು ಲಕ್ಷ ರೂ.ವರೆಗಿನ ಸಾಲ ಮನ್ನಾ: ಸಿಎಂ ಕುಮಾರಸ್ವಾಮಿ

Update: 2018-07-12 15:23 GMT

ಬೆಂಗಳೂರು, ಜು.12: ರೈತರು ಸಹಕಾರಿ ಬ್ಯಾಂಕುಗಳಲ್ಲಿ ಪಡೆದಿರುವ ಒಂದು ಲಕ್ಷ ರೂ.ವರೆಗಿನ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಎರಡು ಲಕ್ಷ ರೂ.ವರೆಗಿನ ಸಾಲವನ್ನು ಮನ್ನಾ ಮಾಡಲು ಸಮ್ಮಿಶ್ರ ಸರಕಾರ ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಕಟಿಸಿದರು.

ಗುರುವಾರ ವಿಧಾನಸಭೆಯಲ್ಲಿ ರಾಜ್ಯ ಬಜೆಟ್ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಅವರು, ಸಾಲ ಮನ್ನಾ ಮಾಡುವುದರ ಜೊತೆಗೆ ಒಂದು ತಿಂಗಳಲ್ಲಿ ರೈತರಿಗೆ ಋಣಮುಕ್ತ ಪತ್ರ ಹಾಗೂ ಹೊಸ ಸಾಲ ಪಡೆಯಲು ಅವಕಾಶ ಕಲ್ಪಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗಿದೆ. ಈ ಸಂಬಂಧ ಬ್ಯಾಂಕುಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದರು.

ಸಹಕಾರಿ ಸಂಘಗಳಲ್ಲಿನ ಚಾಲ್ತಿ ಸಾಲ ಒಂದು ಲಕ್ಷ ರೂ.ವರೆಗೂ ಮನ್ನಾ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಇದಕ್ಕಾಗಿ 10,700 ಕೋಟಿ ರೂ.ಹೊರೆಯಲಾಗಲಿದೆ. ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ ನೀಡುವ 5 ಕೆ.ಜಿ.ಅಕ್ಕಿಯನ್ನು 7 ಕೆ.ಜಿ.ಗೆ ಹೆಚ್ಚಿಸಲು ಎರಡೂವರೆ ಸಾವಿರ ಕೋಟಿ ರೂ ಹೊರೆಯಾಗಲಿದೆ. ಈ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ನಮ್ಮ ಸಾಲ ಮನ್ನಾ ಯೋಜನೆಯಿಂದಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ 29,279 ಕೋಟಿ ರೂ.ಸಾಲ ಮನ್ನಾ ಆಗಲಿದೆ. ಪ್ರತಿ ವರ್ಷ ರಾಷ್ಟ್ರೀಕೃತ ಬ್ಯಾಂಕುಗಳಿಗೆ 6,500 ಕೋಟಿ ರೂ.ಪಾವತಿ ಮಾಡಲಾಗುತ್ತದೆ. ಈ ಕುರಿತಂತೆ ಸಮಗ್ರವಾಗಿ ಚರ್ಚೆ ಮಾಡಿದ್ದೇವೆ. ಈ ಸರಕಾರ ಐದು ವರ್ಷಗಳ ಕಾಲ ಮುಂದುವರೆಯಲಿದ್ದು, ಹಿಂದಿನ ಸರಕಾರದ ಎಲ್ಲ ಕಾರ್ಯಕ್ರಮಗಳನ್ನು ಮುಂದುವರೆಸಲಾಗುವುದು ಎಂದು ಅವರು ತಿಳಿಸಿದರು. ಈ ಬಜೆಟ್ ಕೇವಲ ಕೆಲವು ಜಿಲ್ಲೆಗಳಿಗೆ ಸೀಮಿತವಾದ ಬಜೆಟ್ ಅಲ್ಲ. ಸಮಗ್ರ ಕರ್ನಾಟಕದ ಅಭಿವೃದ್ಧಿ ನಮ್ಮ ಆದ್ಯತೆ. ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ರೈತರ ಸಾಲ ಮನ್ನಾ ಮಾಡುವ ಸವಾಲನ್ನು ನಾನು ಸ್ವೀಕರಿಸಿದ್ದೇನೆ. ಇದಕ್ಕಾಗಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ನನಗೆ ಸಹಕಾರ ನೀಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಸಾಲ ಮನ್ನಾ ಯೋಜನೆಯಿಂದಾಗಿ ಬೆಳಗಾವಿ ಜಿಲ್ಲೆಗೆ 2,670 ಕೋಟಿ ರೂ, ಬಾಗಲಕೋಟೆಗೆ 1,820 ಕೋಟಿ ರೂ, ವಿಜಯಪುರ 1,510 ಕೋಟಿ ರೂ, ಧಾರವಾಡಕ್ಕೆ 1,026 ಕೋಟಿ ರೂ, ಹಾವೇರಿಗೆ 1,036 ಕೋಟಿ ರೂ., ಗದಗ 722 ಕೋಟಿ ರೂ, ಉತ್ತರ ಕನ್ನಡ 407 ಕೋಟಿ ರೂ, ದಾವಣಗೆರೆ 1,212 ಕೋಟಿ ರೂ, ತುಮಕೂರು 1,185 ಕೋಟಿ ರೂ.ಗಳ ಪ್ರಯೋಜನವಾಗಲಿದೆ ಎಂದು ಅವರು ಹೇಳಿದರು.

ಶಿವಮೊಗ್ಗ 988 ಕೋಟಿ ರೂ, ಚಿತ್ರದುರ್ಗ 918 ಕೋಟಿ ರೂ, ಬೆಂಗಳೂರು ಗ್ರಾಮಾಂತರ 731 ಕೋಟಿ ರೂ, ರಾಮನಗರ 630 ಕೋಟಿ ರೂ.ಗಳ ಪ್ರಯೋಜನವಾಗಲಿದೆ. ಇದರಡಿಯಲ್ಲಿ ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಿಗಿಂತ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹೆಚ್ಚಿನ ಲಾಭ ಆಗಲಿದೆ ಎಂದು ಅವರು ಅಂಕಿ ಅಂಶಗಳ ಸಮೇತ ಸಮರ್ಥಿಸಿಕೊಂಡರು.

ಈ ಬಜೆಟ್ ಮಂಡನೆ ಮಾಡಿ ದೊಡ್ಡ ಮಟ್ಟಿಗೆ ಟೀಕೆಗೆ ಗುರಿಯಾದ ಹಣಕಾಸು ಸಚಿವ ನಾನು. ಮಾಧ್ಯಮಗಳು ಬಜೆಟ್ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಕೆಲವರು ಅಪ್ಪ-ಮಕ್ಕಳ ಬಜೆಟ್, ಅಣ್ಣ-ತಮ್ಮ ಬಜೆಟ್ ಎಂದು ಟೀಕಿಸಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ, ವಿದ್ಯುತ್ ಹಾಗೂ ಮದ್ಯದ ದರ ಹೆಚ್ಚಳವನ್ನು ಸಮರ್ಥಿಸಿಕೊಂಡ ಕುಮಾರಸ್ವಾಮಿ, ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 83.12 ರೂ., ಮಧ್ಯಪ್ರದೇಶ 81.14, ಬಿಹಾರ 81.04, ಆಂಧ್ರಪ್ರದೇಶ 80 ರೂ., ಕೇರಳ 78 ರೂ., ತಮಿಳುನಾಡು 78.04 ರೂ, ರಾಜಸ್ಥಾನ 78.27 ರೂ.ಗಳಷ್ಟಿದೆ. ನಮ್ಮ ರಾಜ್ಯದಲ್ಲಿ ಈಗ ತೆರಿಗೆ ಹೆಚ್ಚಳ ನಂತರ 77.97 ಆಗಿರಲಿದೆ ಎಂದರು.

ಜಿಎಸ್‌ಟಿ ಜಾರಿಯಾದ ನಂತರ ತೆರಿಗೆ ಸಂಗ್ರಹ ಮಾಡಲು ರಾಜ್ಯ ಸರಕಾರಕ್ಕೆ ಇತಿಮಿತಿಗಳು ತುಂಬಾ ಕಡಿಮೆ ಇದೆ. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಲು ವ್ಯಾಟ್ ಅನ್ನು ಶೇ.05ರಷ್ಟು ಹೆಚ್ಚಳ ಮಾಡಲಿಲ್ಲವೇ? 34 ಸಾವಿರ ಕೋಟಿ ರೂ.ಸಾಲ ಮನ್ನಾ ಎಂದು ಘೋಷಿಸಿ ರೈತರಿಗೆ ಟೋಪಿ ಹಾಕಲು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ. ಬ್ಯಾಂಕುಗಳ ಮುಖ್ಯಸ್ಥರೊಂದಿಗೆ ನಡೆದ ಮೂರು ಸಭೆಗಳ ಬಳಿಕವೇ ನಾನು ಸಾಲ ಮನ್ನಾ ಮಾಡುವ ಘೋಷಣೆ ಮಾಡಿರುವುದು ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಭಾಷಣಕ್ಕೆ ಸ್ಪಷ್ಟಣೆ ಕೇಳಿದ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ, ನಾಲ್ಕು ಕಂತುಗಳಲ್ಲಿ ಸಾಲ ಮನ್ನಾ, ಋಣಮುಕ್ತ ಪತ್ರ ನೀಡುವುದು, ಸ್ತ್ರೀಶಕ್ತಿ ಸಂಘಗಳು, ನೇಕಾರರ ಸಾಲ ಮನ್ನಾ ಸೇರಿದಂತೆ ಹಲವು ವಿಚಾರಗಳಲ್ಲಿ ಸ್ಪಷ್ಟನೆ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ರೈತರ ಸಾಲ ಮನ್ನಾ ಮಾಡುವುದು ನಮ್ಮ ಬದ್ಧತೆ. ಜೀವ ಕೊಟ್ಟಾದರೂ ರೈತರ ಸಾಲ ಮನ್ನಾ ಮಾಡುತ್ತೇವೆ. ಇದಕ್ಕೆ ಅಗತ್ಯವಿರುವ ಎಲ್ಲ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದುದರಿಂದ, ಈ ವಿಚಾರದಲ್ಲಿ ಯಾರೂ ಅನುಮಾನ ಪಡುವುದು ಬೇಡ ಎಂದರು.

ಮಹಾದಾಯಿ ಯೋಜನೆಗೆ ಸಂಬಂಧಿಸಿದಂತೆ ನ್ಯಾಯಾಧೀಕರಣ ಆಗಸ್ಟ್‌ನಲ್ಲಿ ತೀರ್ಪು ನೀಡಲಿದೆ. ತೀರ್ಪು ಬಂದ ಕೂಡಲೆ ಅಲ್ಲಿ ಸ್ಥಳೀಯವಾಗಿ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿ ಬಜೆಟ್‌ಗೆ ಒಪ್ಪಿಗೆ ನೀಡುವಂತೆ ಮನವಿ ಮಾಡಿದರು.

ಮುಖ್ಯಮಂತ್ರಿಯ ಉತ್ತರದಿಂದ ತೃಪ್ತರಾಗದ ಬಿಜೆಪಿ ಸದಸ್ಯರು, ಯಡಿಯೂರಪ್ಪ ನೇತೃತ್ವದಲ್ಲಿ ಸಭಾತ್ಯಾಗ ಮಾಡಿದರು. ಇದೇ ವೇಳೆ ಸ್ಪೀಕರ್ ರಮೇಶ್‌ ಕುಮಾರ್, 2018ನೆ ಸಾಲಿನ ಧನ ವಿನಿಯೋಗ(ಸಂಖ್ಯೆ 2) ವಿಧೇಯಕ, ರಾಜ್ಯ ಮೌಲ್ಯ ವರ್ಧಿತ ತೆರಿಗೆ(ತಿದ್ದುಪಡಿ) ವಿಧೇಯಕ ಹಾಗೂ ರಾಜ್ಯ ವಿದ್ಯುತ್‌ಚ್ಛಕ್ತಿ(ಬಳಕೆ ಅಥವಾ ಮಾರಾಟದ ಮೇಲೆ ತೆರಿಗೆ ನಿರ್ಧರಣೆ)(ತಿದ್ದುಪಡಿ) ವಿಧೇಯಕವನ್ನು ಮಂಡಿಸಲು ಅವಕಾಶ ಕಲ್ಪಿಸಿದರು. ಸದನವು ಈ ವಿಧೇಯಕಗಳಿಗೆ ಅನುಮೋದನೆ ನೀಡಿತು.

ಅಲ್ಪಸಂಖ್ಯಾತರ ಕಡೆಗಣನೆ ಇಲ್ಲ
ರಾಜ್ಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಸಮುದಾಯವನ್ನು ಕಡೆಗಣಿಸಲಾಗಿಲ್ಲ. ಸಿದ್ದರಾಮಯ್ಯನವರು ಈ ಹಿಂದೆ ಮಂಡಿಸಿರುವ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗಾಗಿ ಘೋಷಿಸಿರುವ ಕಾರ್ಯಕ್ರಮಗಳು, ಯೋಜನೆಗಳು ಮುಂದುವರೆಯಲಿವೆ. ಈ ಸರಕಾರವು ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ವರ್ಗಗಳ ಹಿತರಕ್ಷಣೆಗೆ ಬದ್ಧವಾಗಿದೆ.
-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News