ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಬೇಡ: ಯಡಿಯೂರಪ್ಪ

Update: 2018-07-12 15:26 GMT

ಬೆಂಗಳೂರು, ಜು.12: ಸಂಪೂರ್ಣವಾಗಿ ಸಾಲದ ಮೊತ್ತ ಪಾವತಿಯಾಗದೆ ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳು ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ನೀಡಲು ಸಾಧ್ಯವಿಲ್ಲ. ಸರಕಾರ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.

ಗುರುವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉತ್ತರ ನೀಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಅವರು, ಸಹಕಾರಿ ಸಂಘಗಳ ಮೇಲೆ ರಾಜ್ಯ ಸರಕಾರದ ನಿಯಂತ್ರಣವಿರುತ್ತದೆ. ಆದರೆ, ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಪಾವತಿಯಾಗದೆ ಹೇಗೆ ರೈತರಿಗೆ ಋಣ ಮುಕ್ತ ಪತ್ರ ನೀಡಲು ಸಾಧ್ಯ ಎಂದು ಪ್ರಶ್ನಿಸಿದರು.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ 29 ಸಾವಿರ ಕೋಟಿ ರೂ.ಸಾಲವಿದೆ, ನೀವು ಅದನ್ನು ನಾಲ್ಕು ಕಂತುಗಳಲ್ಲಿ ಪಾವತಿಸುವುದಾಗಿ ಹೇಳಿದ್ದೀರಾ. ಈ ವರ್ಷ 6500 ಕೋಟಿ ರೂ.ಗಳನ್ನು ಮಾತ್ರ ಒದಗಿಸಲಾಗಿದೆ. ಹೀಗಿರುವಾಗ ಪೂರ್ಣ ಪ್ರಮಾಣದ ಸಾಲ ಮರುಪಾವತಿಯಾಗದೆ ರಾಷ್ಟ್ರೀಕೃತ ಬ್ಯಾಂಕುಗಳು ಋಣಮುಕ್ತ ಪ್ರಮಾಣ ಪತ್ರ ನೀಡಲು ಸಾಧ್ಯವಿಲ್ಲ. ಇದು ಯಾರು ನಂಬಲು ಸಾಧ್ಯವಿಲ್ಲದ್ದಂತಹ, ಅಸಾಧ್ಯವಾದದ ಮಾತು ಎಂದು ಯಡಿಯೂರಪ್ಪ ಹೇಳಿದರು.

ನಂತರ ಮಾತು ಮುಂದುವರೆಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಅವರಿಗೆ ಅಸಾಧ್ಯವಾದದ್ದು, ನಮಗೆ ಸಾಧ್ಯ ಎಂದಾಗ ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು. ರೈತರ ಬಗ್ಗೆ ಬದ್ಧತೆ ನಿಮಗೇ ಅಲ್ಲ, ನಮಗೂ ಇದೆ ಎಂದು ಯಡಿಯೂರಪ್ಪಗೆ ತಿರುಗೇಟು ನೀಡಿದರು.

ಮಂಡ್ಯ ಜಿಲ್ಲೆ ಕಳೆದ 25-30 ವರ್ಷಗಳ ಹಿಂದೆ ಹೇಗಿತ್ತೋ ಹಾಗೆಯೇ ಇದೆ, ಆ ಜಿಲ್ಲೆಯ ಅಭಿವೃದ್ಧಿಗಾಗಿ 50 ಕೋಟಿ ರೂ.ಗಳನ್ನು ನೀಡಿದ್ದನ್ನೆ ದೊಡ್ಡದು ಎಂದು ಟೀಕೆ ಮಾಡಲಾಗಿದೆ. ರಾಜ್ಯದಲ್ಲಿ 85 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಾಸನದಲ್ಲಿ ಮೆಗಾಡೈರಿ ನಿರ್ಮಾಣ ಮಾಡಲು ಅನುದಾನ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಮಾಧುಸ್ವಾಮಿ, ವಾಸ್ತವವಾಗಿ ರಾಜ್ಯದಲ್ಲಿ ಅತೀ ಹೆಚ್ಚು ಹಾಲು ಉತ್ಪಾದನೆ ಮಾಡುತ್ತಿರುವ ಕೋಲಾರ ಜಿಲ್ಲೆಯಲ್ಲಿ ಮೆಗಾಡೈರಿ ಸ್ಥಾಪನೆ ಮಾಡಬೇಕಿತ್ತು ಎಂದರು. ಇದಕ್ಕೆ ಸ್ಪಂದಿಸಿದ ಕುಮಾರಸ್ವಾಮಿ, ಕೋಲಾರ ಜಿಲ್ಲೆಯಲ್ಲೂ ಮೆಗಾಡೈರಿ ನಿರ್ಮಾಣ ಸಂಬಂಧ ಈ ವರ್ಷದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದರು.

ಬೆಂಗಳೂರಿನ ಅಭಿವೃದ್ಧಿ ಕುರಿತು ಶಾಸಕರ ಸಭೆ ಕರೆದು ಚರ್ಚೆ ನಡೆಸಲಾಗುವುದು. ರಾಜ್ಯದಲ್ಲಿ ಇಸ್ರೇಲ್ ಮಾದರಿಯಲ್ಲಿ ಹೊಸ ಕೃಷಿ ಪದ್ಧತಿಗೆ ತಮ್ಮನ್ನು ಬದಲಾಯಿಸಿಕೊಳ್ಳಲು ರೈತರಿಗೆ ತಿಳುವಳಿಕೆ ನೀಡುವ ಅಗತ್ಯವಿದೆ. ಅದಕ್ಕಾಗಿ, ಎಲ್ಲ ಶಾಸಕರು ತಿಂಗಳಲ್ಲಿ ಒಂದು ದಿನ ಇದಕ್ಕಾಗಿ ಮೀಸಲಿಡಬೇಕು. ಆಧುನಿಕ ಕೃಷಿ ಪದ್ಧತಿಗಾಗಿ ಎಷ್ಟೇ ಹಣ ಖರ್ಚಾದರೂ ಸರಕಾರ ಸಿದ್ಧವಿದೆ ಎಂದು ಕುಮಾರಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News