ಸದನದೊಳಗೆ ಬಿಜೆಪಿ-ಕಾಂಗ್ರೆಸ್ ಜಟಾಪಟಿ

Update: 2018-07-12 15:31 GMT

ಬೆಂಗಳೂರು, ಜು. 12: ಕಾಂಗ್ರೆಸ್ ನಡಿಗೆ ಕೃಷ್ಣಾದ ಕಡೆಗೆ ಎಂಬ ಕೈ ಪಾದಯಾತ್ರೆ ವೇಳೆ ಕೃಷ್ಣಾ ಮೇಲ್ದಂಡೆ ಯೋಜನೆಗೆ ವಾರ್ಷಿಕ 10ಸಾವಿರ ಕೋಟಿ ರೂ.ನಂತೆ 5ವರ್ಷಗಳಲ್ಲಿ 50 ಸಾವಿರ ಕೋಟಿ ರೂ.ಭರವಸೆ ನೀಡಿತ್ತೆಂಬ ಬಿಜೆಪಿ ಸದಸ್ಯರ ಆಕ್ಷೇಪ ಸದನದಲ್ಲಿ ಕೆಲಕಾಲ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ಗುರುವಾರ ವಿಧಾನಸಭೆಯಲ್ಲಿ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಆಕ್ಷೇಪಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ನಾವು ನೀರಾವರಿ ಯೋಜನೆಗಳಿಗೆ 50 ಸಾವಿರ ಕೋಟಿ ರೂ.ವೆಚ್ಚ ಮಾಡುವ ಭರವಸೆ ನೀಡಿದ್ದು, 5 ವರ್ಷಗಳಲ್ಲಿ 58ಸಾವಿರ ಕೋಟಿ ರೂ.ಗಳಿಗೆ ಮಂಜೂರಾತಿ ನೀಡಿ, 47ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಿದ್ದೇವೆ. ಆದರೆ ನಿಮ್ಮ(ಬಿಜೆಪಿ) ಸರಕಾರದ ಅವಧಿಯಲ್ಲಿ ಕೇವಲ 18 ಸಾವಿರ ಕೋಟಿ ರೂ.ಖರ್ಚು ಮಾಡಿದ್ದೀರಿ ಎಂದು ಛೇಡಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಬಸವರಾಜ ಬೊಮ್ಮಾಯಿ, ಆಗಿನ ಬಜೆಟ್‌ನ ಇತಿಮಿತಿಯಲ್ಲಿ ನಮ್ಮ ಸರಕಾರದಲ್ಲಿ ನೀರಾವರಿಗೆ ಹಣ ಖರ್ಚು ಮಾಡಿದೆ. ಆ ಸಂದರ್ಭದಲ್ಲಿ ಕೃಷ್ಣಾ ನ್ಯಾಯಾಧೀಕರಣದ ತೀರ್ಪು ಬಂದಿರಲಿಲ್ಲ. ನೀವು ಪ್ರಣಾಳಿಕೆಯಲ್ಲಿ ಭರವಸೆ ನೀಡಿ ಮಾತು ತಪ್ಪಿದ್ದೀರಿ ಎಂದು ಪ್ರಣಾಳಿಕೆ ಪ್ರದರ್ಶಿಸಿದರು.

ಇದರಿಂದ ಆಕ್ರೋಶಗೊಂಡ ಮಾಜಿ ಸಚಿವ ಎಂ.ಬಿ.ಪಾಟೀಲ್, ನಮ್ಮ ಪಕ್ಷದ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಎರಡು ಪ್ರಣಾಳಿಕೆಗಳಿವೆ. ಒಂದರಲ್ಲಿ ಟೈಪಿಂಗ್ ದೋಷವಾಗಿದೆ ತಪ್ಪಾಗಿದೆ. ಅದನ್ನು ನಾನು ನಿಮಗೆ ವಿವರಿಸಲು ಸಿದ್ಧ ಎಂದು ತಿರುಗೇಟು ನೀಡಿದರು.

ಬಸವರಾಜ ಬೊಮ್ಮಾಯಿ ಮಾತನಾಡಿ, ನೀವು ಎರಡು ರೀತಿಯ ಪ್ರಣಾಳಿಕೆ ಬರೆದಿದ್ದೀರಾ? ಜನರಿಗೆ ಒಂದು ತೋರಿಸೋದು ಮತ್ತೊಂದು ಅನುಷ್ಠಾನ ಮಾಡೋದೇ. ಕನ್ನಡ ಶಾಲೆಯ ಮಕ್ಕಳಿಗೆ ಕೊಟ್ಟರೂ ಹೇಳುತ್ತಾರೆಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ಕ್ಷಮೆ ಕೇಳಲು ಸಿದ್ಧ: ‘ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ನೀವು ಘೋಷಿಸಿದ ಬಗ್ಗೆ ನಮ್ಮಲ್ಲಿ ದಾಖಲೆ ಇಲ್ಲಾ ಅಂತಾದರೆ ನಾವು ನಿಮ್ಮ ಕ್ಷಮೆ ಕೇಳಲು ಸಿದ್ಧ’ ಎಂದು ಯಡಿಯೂರಪ್ಪ, ಸಿದ್ಧರಾಮಯ್ಯನವರ ವಿರುದ್ಧ ವಾಗ್ಬಾಣ ಪ್ರಯೋಗಿಸಿದರು. ‘ಕುಳಿತುಕೊಳ್ಳಿ ಯಡಿಯೂರಪ್ಪನವರೇ ನೀವು ಕ್ಷಮೆ ಎಲ್ಲ ಕೇಳಬೇಡಿ. ನಿಮಗೆ ವಯಸ್ಸಾಯ್ತು’ ಎಂದು ಸಿದ್ದರಾಮಯ್ಯ ಹೇಳಿದರು.

‘ಎಲ್ಲ ಯೋಜನೆಗಳನ್ನು ಈ ಭಾಗಕ್ಕೆ ನೀಡಿದ್ದೀರಿ ಎಂದರೆ ನಿಮಗೆ (ಉಡುಪಿ) ಅಷ್ಟ ಮಠಗಳನ್ನು ನೀಡಿಲ್ಲವೇ..? ಆ ಮಠಗಳನ್ನು ಇವರಿಗೆ ಬಿಟ್ಟುಕೊಡಿ’
-ರಮೇಶ್‌ ಕುಮಾರ್ ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News