ಪ್ರತ್ಯೇಕತೆಯ ಬೀಜಾಂಕುರಕ್ಕೆ ಎಚ್‌ಡಿಕೆ ಕಾರಣ: ಶಾಸಕ ಯತ್ನಾಳ್ ಆರೋಪ
ಬೆಂಗಳೂರು, ಜು. 12: ಪ್ರತ್ಯೇಕತೆಯ ಬೀಜ ಅಂಕುರಿಸಲು ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರೇ ಕಾರಣ ಎಂದು ಗಂಭೀರ ಆರೋಪ ಮಾಡಿದ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್, ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ತಾರತಮ್ಯ ಮಾಡಿದ್ದಾರೆ ಎಂದು ದೂರಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದ ನಿರುದ್ಯೋಗ ನಿವಾರಣೆಗೆ ಕೈಗಾರಿಕೆಗಳನ್ನು ಸ್ಥಾಪಿಸದೆ ಅಲ್ಲಿನ ಪರಿಸರ ಹದಗೆಡಿಸುವ ಘಟಕಗಳ ಸ್ಥಾಪಿಸುವ ಘೋಷಣೆ ಮಾಡಲಾಗಿದೆ ಎಂದು ಟೀಕಿಸಿದರು.
ಹಾಸನ, ಮಂಡ್ಯ, ರಾಮನಗರಕ್ಕೆ 462 ಕೋಟಿ ರೂ.ಗಳಷ್ಟು ಯೋಜನೆಗಳನ್ನು ನೀಡಲಾಗಿದೆ. ಚುನಾವಣಾ ದ್ವೇಷದಿಂದ ಉತ್ತರ ಕರ್ನಾಟಕಕ್ಕೆ ಯಾವುದೇ ಯೋಜನೆ ನೀಡಿಲ್ಲ ಎಂದ ಅವರು, ಸಾಲಮನ್ನಾಕ್ಕಿಂತಲೂ ಕೃಷಿ ಉತ್ಪನ್ನಗಳಿಗೆ ಸರಕಾರ ವೈಜ್ಞಾನಿಕ ಬೆಲೆ ಕೊಡಿಸಬೇಕು ಎಂದು ಸಲಹೆ ನೀಡಿದರು.
ಕೃಷ್ಣ ಮೇಲ್ದಂಡೆ ಮೂರನೆ ಹಂತದ ಯೋಜನೆಗಳ ಕಾಮಗಾರಿಗೆ ಕನಿಷ್ಠ 1ಲಕ್ಷ ಕೋಟಿ ರೂ.ಅನುದಾನ ಮೀಸಲಿಡಬೇಕು ಎಂದ ಆಗ್ರಹಿಸಿದ ಅವರು, ಉತ್ತರ ಕರ್ನಾಟಕದ ಜನರ ಭಾವನೆಗಳಿಗೆ ಸ್ಪಂದಿಸುವಲ್ಲಿ ಆ ಭಾಗದ ಜನಪ್ರತಿನಿಧಿಗಳು ನಾವೆಲ್ಲರೂ ವಿಫಲವಾಗಿದ್ದೇವೆ ಎಂದು ಒಪ್ಪಿಕೊಂಡರು.
ಎಸ್ಸಿ-ಎಸ್ಟಿ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ತಪ್ಪಿಸಿ ಎಲ್ಲ ಮಕ್ಕಳು ಒಟ್ಟಿಗೆ ಶಿಕ್ಷಣ ಕಲಿಯುವ ವ್ಯವಸ್ಥೆ ರೂಪಿಸುವ ಮೂಲಕ ಜಾತೀಯತೆ ತೊಡೆದು ಸಮಾನತೆ ಕಲ್ಪಿಸಲು ಮುಂದಾಗಬೇಕೆಂದು ಅವರು ಇದೇ ವೇಳೆ ಸಲಹೆ ನೀಡಿದರು.