ಅಪಾಯದ ಅಂಚಿನಲ್ಲಿ ಭಾರತದ ಸಾರ್ವಜನಿಕ ಉನ್ನತ ಶಿಕ್ಷಣ ವ್ಯವಸ್ಥೆ!

Update: 2018-07-12 18:51 GMT

ಭಾಗ-1

ಒಂದು ದೇಶದ ಮಾನವ ಸಂಪನ್ಮೂಲವನ್ನು ಪ್ರಯೋಜನಕಾರಿಯನ್ನಾಗಿ ಮಾರ್ಪಾಟು ಮಾಡುವಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆಯ ಪಾತ್ರ ಬಹುಮುಖ್ಯವಾಗಿರುತ್ತದೆ. ಆದರೆ 2014ರಲ್ಲಿ ಬಿಜೆಪಿಯು ಸಂಪೂರ್ಣ ಬಹುಮತದೊಂದಿಗೆ ಕೇಂದ್ರದಲ್ಲಿ ಸರಕಾರ ರಚನೆ ಮಾಡಿದಾಗಿನಿಂದಲೂ ಸಾರ್ವಜನಿಕ ಉನ್ನತ ಶಿಕ್ಷಣ ಸಂಸ್ಥೆಗಳ ಮೇಲಿನ ಅನಾವಶ್ಯಕವಾದ ನಿಯಂತ್ರಣವು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಸರಕಾರಿ ಸ್ವಾಮ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಸಂಶೋಧನೆಗಳು ಯುವ ಪೀಳಿಗೆಯನ್ನು ಮೇಧಾವಿ ವರ್ಗವನ್ನಾಗಿ ಪರಿವರ್ತನೆಗೊಳಿಸುತ್ತಿರುವ ಪ್ರಕ್ರಿಯೆಯು ರಾಷ್ಟ್ರ ನಿರ್ಮಾಣದಲ್ಲಿ ಕಡೆಗಣಿಸಲಾಗದ ಕೊಡುಗೆ ನೀಡುತ್ತಾ ಬಂದಿರುತ್ತದೆ. ಶ್ರೇಣೀಕೃತ ವ್ಯವಸ್ಥೆಯನ್ನು ಬುಡಮೇಲು ಮಾಡುವ ಸಂಶೋಧನೆಗಳು ಮತ್ತು ಪಟ್ಟಭದ್ರ ಹಿತಾಸಕ್ತಿಗಳ ಸ್ಥಾನಕ್ಕೆ ಧಕ್ಕೆ ತರುವ ಮೇಧಾವಿ ವರ್ಗಗಳ ಬಗ್ಗೆ ಹೊಂದಿರುವ ಅಂತರ್ಗತ ದಿಗಿಲು, ಕೇಂದ್ರ ಸರಕಾರವನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗಗಳ ಮುಖಾಂತರ ಸಾರ್ವಜನಿಕ ಉನ್ನತ ಶಿಕ್ಷಣ ಸಂಸ್ಥೆಗಳನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಳ್ಳುವಂತೆ ಮಾಡುತ್ತಿದೆ.

ಈ ನಿಯಂತ್ರಣದಿಂದಾಗಿ ಬಿಜೆಪಿಯು ತನ್ನ ಹಿಂದುತ್ವ ಅಜೆಂಡಾಕ್ಕೆ ಧಕ್ಕೆ ತರುವಂತಹ ಯಾವುದೇ ರೀತಿಯ ಸಂಭಾವ್ಯ ಶಕ್ತಿಗಳು ಬೆಳೆಯದಂತೆ ಕಾಳಜಿ ವಹಿಸುವುದು ಹಾಗೂ ನಯವಾಗಿ ಸಾರ್ವಜನಿಕ ಉನ್ನತ ಶಿಕ್ಷಣವನ್ನು ಗುಣಮಟ್ಟ ಹೆಚ್ಚಿಸುವ ನೆಪದಲ್ಲಿ ಖಾಸಗೀಕರಣಗೊಳಿಸುವ ಹಾಗೂ ಮೀಸಲಾತಿಯನ್ನು ಇಲ್ಲದಂತಾಗಿಸುವ ರಹಸ್ಯ ಕಾರ್ಯಸೂಚಿಯನ್ನು ಹೊಂದಿದೆ. ಕೇಂದ್ರಸರಕಾರವು ಸಾರ್ವಜನಿಕ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿರುವುದು ಸಂವಿಧಾನ ವಿರೋಧಿ ಧೋರಣೆಯಾಗಿದೆ. ಮನುಸ್ಮತಿಗೆ ವಿರುದ್ಧವಾದ ಮಾನವತಾವಾದಿ ಭಾರತದ ಸಂವಿಧಾನದ ಫಲವಾಗಿ ಇಲ್ಲಿಯವರೆಗೆ ಕೆಲವೇ ಬಲಿತ ಜಾತಿಗಳಿಗೆ ಸೀಮಿತವಾಗಿದ್ದ ಶಿಕ್ಷಣವು ಎಲ್ಲಾ ಸ್ಥಳದ ಸಮುದಾಯಗಳಿಗೆ ದೊರೆಯುವಂತಾಗಿದೆ. ವಿದ್ಯಾರ್ಹತೆಗೆ ತಕ್ಕ ಉದ್ಯೋಗ ನೀಡುವಲ್ಲಿ ಈವರೆಗಿನ ಎಲ್ಲಾ ಸರಕಾರಗಳು ವಿಫಲವಾಗಿವೆೆ. ಈಗಾಗಲೇ ಸರಕಾರಿ ನೌಕರಿಯ ಪ್ರಮಾಣವನ್ನು ಖಾಸಗೀಕರಣದ ಮುಖಾಂತರ ಉದ್ದೇಶಪೂರ್ವಕವಾಗಿ ಮೀಸಲಾತಿಯನ್ನು ಕೊನೆಗಾಣಿಸಲಾಗಿದೆ. ಸದರಿ ಕಾರ್ಯ ಯೋಜನೆಯನ್ನು ಸಾರ್ವಜನಿಕ ಉನ್ನತ ಶಿಕ್ಷಣಕ್ಕೂ ಸಹ ವಿಸ್ತರಿಸುವ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ. ಕೆಲವು ಪ್ರಮುಖ ಘಟನಾವಳಿಗಳ ಅವಲೋಕನವು ಕೇಂದ್ರಸರಕಾರದ ಅಂತರಂಗ ಮತ್ತು ಆಲೋಚನಾ ಕ್ರಮವನ್ನು ಬಹಿರಂಗಪಡಿಸುತ್ತದೆ.

  ಎಫ್‌ಟಿಐಐ (ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ)ನ ನಿರ್ದೇಶಕರಾಗಿ ಬಿಜೆಪಿಯ ಗಜೇಂದ್ರ ಚೌಹಾನ್ ನೇಮಕ ಪ್ರತಿಷ್ಠಿತ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ ನಿರ್ದೇಶಕರಾಗಿ ಬಿಜೆಪಿಯ ಗಜೇಂದ್ರ ಚೌಹಾನ್‌ರನ್ನು ನೇಮಕ ಮಾಡಿದ್ದು, ವಿವಾದಕ್ಕೆ ಕಾರಣವಾಗಿತ್ತು. ಇವರು 1988ರಿಂದ 1990ರವರೆಗೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ಮಹಾಭಾರತ’ ಧಾರಾವಾಹಿಯಲ್ಲಿ ಯುದಿಷ್ಠಿರ ಪಾತ್ರದ ಮೂಲಕ ಪ್ರಖ್ಯಾತಿ ಹೊಂದಿದ್ದು, 2004ರಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡು ಹರ್ಯಾಣದಲ್ಲಿ ಬಿಜೆಪಿಯನ್ನು ಬಲಪಡಿಸುವಲ್ಲಿ ಬಹುಮುಖ್ಯ ಪಾತ್ರವಹಿಸಿರುತ್ತಾರೆ. ಈ ಹಿಂದೆ ಸಂಸ್ಥೆಯ ನಿರ್ದೇಶಕರಾಗಿ ಅಂತರ್‌ರಾಷ್ಟ್ರೀಯ ಖ್ಯಾತಿಯ, ಭಾರತೀಯ ರಂಗಭೂಮಿ, ಚಲನಚಿತ್ರ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ ಗಣ್ಯರು ಸಂಸ್ಥೆಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿರುತ್ತಾರೆ. ಇಂತಹ ಜವಾಬ್ದಾರಿಯುತವಾದ ಸ್ಥಾನಕ್ಕೆ ಗಜೇಂದ್ರ ಚೌಹಾನ್‌ರನ್ನು ನೇಮಿಸಿದ್ದು, ರಾಜಕೀಯ ಪ್ರೇರಿತವಾಗಿತ್ತಲ್ಲದೆ, ಬಲಪಂಥೀಯ ಆಲೋಚನಾಕ್ರಮವನ್ನು ಸಂಸ್ಥೆಯ ಮೇಲೆ ಹೇರುವ ಪ್ರಯತ್ನವಾಗಿತ್ತು. ಕೇಂದ್ರ ಸರಕಾರದ ಈ ಕ್ರಮವನ್ನು ವಿರೋಧಿಸಿ ಸಂಸ್ಥೆಯ ವಿದ್ಯಾರ್ಥಿಗಳು ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿದ್ದರು.

ಅಂಬೇಡ್ಕರ್ - ಪೆರಿಯಾರ್ ವಿದ್ಯಾರ್ಥಿ ಸಂಘಟನೆಯ ಮೇಲೆ ನಿಷೇಧ. 

ಡಾ. ಬಿ.ಆರ್. ಅಂಬೇಡ್ಕರ್-ಪೆರಿಯಾರ್‌ರವರ ಸಿದ್ಧಾಂತಗಳಿಂದ ಪ್ರಭಾವಿತರಾಗಿದ್ದ ಮದರಾಸ್ ಐಐಟಿಗೆ ಸೇರಿದ ಕೆಲವು ವಿದ್ಯಾರ್ಥಿಗಳು ಕೇಂದ್ರ ಸರಕಾರದ ಜನವಿರೋಧಿ ನೀತಿಗಳ ಬಗ್ಗೆ ಚರ್ಚೆಗಳನ್ನು ಏರ್ಪಡಿಸುತ್ತಿದ್ದರು. ಅಂಬೇಡ್ಕರ್ ಪೆರಿಯಾರ್ ಸ್ಟಡಿ ಸರ್ಕಲ್ ಎಂಬ ಹೆಸರಿನಡಿಯಲ್ಲಿದ್ದ ಈ ವಿದ್ಯಾರ್ಥಿ ಸಂಘಟನೆಯು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮೇಲೆ ದ್ವೇಷ ಹುಟ್ಟು ಹಾಕುತ್ತಿದೆಯೆಂದು ಆರೋಪಿಸಿದ ಅನಾಮಧೇಯ ಪತ್ರಕ್ಕೆ ಸ್ಪಂದಿಸಿದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಕೂಡಲೇ ಈ ವಿದ್ಯಾರ್ಥಿ ಸಂಘಟನೆಯನ್ನು ನಿಷೇಧಿಸಬೇಕೆಂದು ಸಂಸ್ಥೆಯ ನಿರ್ದೇಶಕರಿಗೆ ಸೂಚಿಸಿತ್ತು. ಇದರಂತೆ ಸಂಸ್ಥೆಯ ನಿರ್ದೇಶಕರು ಈ ಸಂಘಟನೆಯನ್ನು ನಿಷೇಧಿಸಿದ್ದರು. ಈ ಸಂಬಂಧ ಸರಿಯಾದ ವಿಚಾರಣೆ ಮಾಡದ ಏಕಪಕ್ಷೀಯ ಧೋರಣೆಯು ಅಂಬೇಡ್ಕರ್ - ಪೆರಿಯಾರ್ ಸಿದ್ಧಾಂತಗಳನ್ನು ವಿದ್ಯಾರ್ಥಿಗಳು ಓದದಂತೆ ಮಾಡುವುದಲ್ಲದೆ, ಪ್ರಜಾಪ್ರಭುತ್ವದ ಬಹುಮುಖ್ಯ ಲಕ್ಷಣವಾದ ಪ್ರಶ್ನಿಸುವ ಹಕ್ಕನ್ನು ಕಸಿದುಕೊಳ್ಳುವುದಾಗಿತ್ತು. ಸಂಸ್ಥೆಯ ಈ ಕ್ರಮದ ವಿರುದ್ಧ ದೇಶವ್ಯಾಪಿ ಪ್ರತಿಭಟನೆಗಳು ನಡೆದು ಪ್ರತಿಭಟನೆಯ ಕಾವು ಹೆಚ್ಚುತ್ತಿದ್ದಂತೆ ತಪ್ಪಿನ ಅರಿವಾದ ಐಐಟಿ-ಮದ್ರಾಸ್ ನಿರ್ದೇಶಕರು ಕೂಡಲೇ ನಿಷೇಧವನ್ನು ತೆರವುಗೊಳಿಸಿದ್ದರು.

ರೋಹಿತ್ ವೇಮುಲಾರ ಸಾಂಸ್ಥಿಕ ಹತ್ಯೆ: 

ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಅಂಬೇಡ್ಕರ್ ವಿದ್ಯಾರ್ಥಿ ಸಂಘವು ಮರಣದಂಡನೆಯಂತಹ ಕಠಿಣ ಶಿಕ್ಷೆಯ ವಿರುದ್ಧ ಪ್ರತಿಭಟನೆ ಹಾಗೂ ‘ಮುಝಪ್ಫರ್ ನಗರ್ ಬಾಕಿ ಹೈ’ ಎಂಬ ಕಿರುಚಿತ್ರ ಪ್ರದರ್ಶನ ಮಾಡಿತ್ತು ಇದನ್ನು ವಿರೋಧಿಸಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಅಧ್ಯಕ್ಷ ಸುಶೀಲ್ ಕುಮಾರ್ ವಿವಿಯಲ್ಲಿ ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆೆಯು ದೇಶದ್ರೋಹಿ ಚಟುವಟಿಕೆ ನಡೆಸುತ್ತಿದೆಯೆಂದು ಆರೋಪಿಸಿದ್ದರಿಂದಾಗಿ ವಿದ್ಯಾರ್ಥಿಗಳ ನಡುವೆ ನಡೆದ ವಾಗ್ವಾದಗಳನ್ನು ಸರಿಪಡಿಸುವ ಬದಲಾಗಿ ಕೇಂದ್ರ ಮಂತ್ರಿಯಾದ ಬಂಡಾರು ದತ್ತಾತ್ರೇಯ ಮತ್ತು ಎಂಎಲ್‌ಸಿ ರಾಮಚಂದ್ರರಾವ್, ವಿವಿಯಲ್ಲಿ ದೇಶದ್ರೋಹಿ ಚಟುವಟಿಕೆಗಳು ಹೆಚ್ಚುತ್ತಿವೆ ಎಂದು ಆರೋಪಿಸಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಪತ್ರ ಬರೆದರು. ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಮೊದಲ ತಲೆಮಾರಿನ ದಲಿತ ವಿದ್ಯಾರ್ಥಿಗಳಾದ ರೋಹಿತ್ ವೇಮುಲಾ ಸೇರಿ ಐದು ಮಂದಿಯ ಮೇಲೆ ಕ್ರಮ ಕೈಗೊಳ್ಳಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆಯಾಗಿದ್ದ ಸ್ಮತಿ ಇರಾನಿ, ವಿವಿಯ ಉಪಕುಲಪತಿಯಾದ ಪೊದಿಲೆ ಅಪ್ಪಾರಾವ್ ಮೇಲೆ ಒತ್ತಡ ಹಾಕಿ, ಸದರಿ ವಿದ್ಯಾರ್ಥಿಗಳನ್ನು ವಿವಿಯಿಂದ ಅಮಾನತುಗೊಳಿಸಲಾಯಿತು.

ಪ್ರಕರಣದ ಬಗ್ಗೆ ನ್ಯಾಯ ಸಮ್ಮತವಾದ ತನಿಖೆ ನಡೆಸದೆ ಜಾತಿ ತಾರತಮ್ಯದಿಂದ ರೋಹಿತ್ ವೇಮುಲಾರ ಆತ್ಮಹತ್ಯೆಗೆ ಕಾರಣವಾಯಿತು. ಜಾತಿವಾದಿ ಮನಸ್ಸುಗಳು ರೋಹಿತ್ ವೇಮಲಾ ದಲಿತನಲ್ಲ ಎಂಬುದನ್ನು ಸಾಬೀತು ಪಡಿಸಲು ಹಂಬಲಿಸಿದವೇ ಹೊರತು, ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಜಾತಿ ಕಿರುಕುಳದ ಬಗ್ಗೆ ಪಶ್ಚಾತ್ತಾಪ ಪಡಲಿಲ್ಲ. 21ನೇ ಶತಮಾನದಲ್ಲಿ ಜಾತಿ ತಾರತಮ್ಯವೇ ಇಲ್ಲ ಎಂದು ಜಾಣ ಕುರುಡುತನ ತೋರುತ್ತಿದ್ದವರಿಗೆ ರೋಹಿತ್ ವೇಮಲಾರ ಸಾಂಸ್ಥಿಕ ಹತ್ಯೆಯು ಕಪಾಳ ಮೋಕ್ಷದಂತಿತ್ತು. ರೋಹಿತ್ ವೇಮಲಾರ ಸಾಂಸ್ಥಿಕ ಹತ್ಯೆಗೆ ರಾಷ್ಟ್ರವ್ಯಾಪಿ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭಟನೆ ವ್ಯಕ್ತವಾಗಿತ್ತು. ಆದರೆ ಪರಿಶಿಷ್ಟ ಜಾತಿ/ಪಂಗಡದ ದೌರ್ಜನ್ಯ ಕಾಯ್ದೆ (1989)ಯಡಿಯಲ್ಲಿ ಸಾಂಸ್ಥಿಕ ಹತ್ಯೆಗೆ ಕಾರಣವಾಗಿದ್ದವರ ವಿರುದ್ಧ ಪ್ರಕರಣ ದಾಖಲಾದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದು, ಇವರ ಜಾತಿಬಲ, ಹಣಬಲ ಮತ್ತು ಅಧಿಕಾರಬಲದ ದುರ್ಬಳಕೆಯನ್ನು ಎತ್ತಿ ತೋರಿಸುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಮೇಲೆ ನಡೆಯುತ್ತಿದ್ದ ದಾಳಿಗಳ ಬಗ್ಗೆ ಕಠಿಣ ಕ್ರಮಕೈಗೊಳ್ಳುವ ಬದಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಎದೆಯನ್ನು ತೋರಿಸಿ ‘‘ದಲಿತರ ವಿರುದ್ಧ ದೌರ್ಜನ್ಯ ಮಾಡುವ ಬದಲು ನನ್ನನ್ನು ಕೊಲ್ಲಿರಿ’’ ಎಂದು ಬೂಟಾಟಿಕೆ ಹೇಳಿಕೆ ನೀಡಿದ್ದು, ಇವರ ಅಸಮರ್ಥತೆಯನ್ನು ಸಾಬೀತುಪಡಿಸುತ್ತದೆ.

Writer - ಭಾನುಪ್ರಕಾಶ್ ಆರ್.

contributor

Editor - ಭಾನುಪ್ರಕಾಶ್ ಆರ್.

contributor

Similar News