ಹಿಂದೀ ರಾಜಕಾರಣದ ಗೊಂದಲ

Update: 2018-07-12 18:52 GMT

ಭಾಗ-1

1940 ಜೂನ್-ಜುಲೈ ತಿಂಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಎರಡು ಮಹತ್ವದ ನಿರ್ಣಯ ಕೈಗೊಂಡರು. ಆ ಪೈಕಿ ಮೊದಲ ನಿರ್ಣಯವು ಜೂನ್ 22ರಂದು ವರ್ಧಾದಲ್ಲಿ ನಡೆದ ಕಾಂಗ್ರೆಸ್ ವರ್ಕಿಂಗ್ ಕಮಿಟಿಯ ಸಭೆಯಲ್ಲಿ ಜಾರಿಗೆ ಬಂದಿತು. ಅಹಿಂಸೆಗೆ ಹಿಂದೂಸ್ಥಾನದ ರಾಜ್ಯ ಕಾರುಭಾರದಲ್ಲಿ ಕಾಂಗ್ರೆಸ್ ವರ್ಕಿಂಗ್ ಕಮಿಟಿಯ ಸಭೆಯಲ್ಲಿ ಮತದಂತೆ ಎಂತಹ ಸ್ಥಾನ ಇರಬಹುದು, ಎಂಬ ವಿಷಯದಲ್ಲಿ ಆ ನಿರ್ಣಯವು ತನ್ನ ಭೂಮಿಕೆಯನ್ನು ಸ್ಪಷ್ಟ ಪಡಿಸಿದೆ. ಎರಡನೇ ನಿರ್ಣಯವು, ಜುಲೈ 7ರಂದು ದಿಲ್ಲಿಯಲ್ಲಿ ನಡೆದ ವರ್ಕಿಂಗ್ ಕಮಿಟಿಯ ಸಭೆಯಲ್ಲಿ ಜಾರಿಗೆ ಬಂತು. ಆ ನಿರ್ಣಯದಂತೆ, ನಡೆದಿರುವ ಯುದ್ಧ ಮತ್ತು ಆ ಸಂಬಂಧ ಕಾಂಗ್ರೆಸ್‌ನ ಧೋರಣೆ ಏನೆಂಬುದನ್ನು ಜಾಹೀರು ಪಡಿಸಲಾಗಿದೆ. ಮೇಲಿನ ಈ ಎರಡೂ ನಿರ್ಣಯಗಳನ್ನು ಇತ್ತೀಚೆಗೆ ಪುಣೆಯಲ್ಲಿ ಸೇರಿದ ಕಾಂಗ್ರೆಸ್‌ನ ಆಲ್ ಇಂಡಿಯಾ ಕಮಿಟಿಯ ಎದುರು ಮಂಡಿಸಲಾಯಿತು ಹಾಗೂ ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಯು ಅವನ್ನು ಬಹುಮತದಿಂದ ಅಂಗೀಕರಿಸಿತು. ಅವುಗಳಲ್ಲಿ ಮೊದಲನೆಯದಾದ ಅಹಿಂಸೆಯ ಬಗೆಗಿನ ನಿರ್ಣಯವು, 91-63 ಮತಗಳಿಂದ ಅಂಗೀಕೃತವಾದರೆ, ಎರಡನೆಯ ಯುದ್ಧ ವಿಷಯಕ ನಿರ್ಣಯವು 95-47 ಮತಗಳಿಂದ ಅಂಗೀಕೃತವಾಯಿತು. ಮೇಲಿನ ಎರಡೂ ನಿರ್ಣಯಗಳು ಅತ್ಯಂತ ಮಹತ್ವದ್ದೆಂದು ಹೇಳುವುದೇ ಬೇಡ.

ಕಾಂಗ್ರೆಸ್‌ನ ಇದುವರೆಗಿನ ಇತಿಹಾಸದಲ್ಲಿ ಇಷ್ಟೊಂದು ಮಹತ್ವದ ಬೇರಾವುದೇ ನಿರ್ಣಯ ಇದುವರೆಗೆ ಜಾರಿಯಾಗಿಲ್ಲ ಅಂದರೆ ಅದು ಅತಿಶಯೋಕ್ತಿಯಲ್ಲ. ಈ ಮಹತ್ವದ ಕಾರಣ ಸ್ಪಷ್ಟವಿದೆ. ಕಾಂಗ್ರೆಸ್ ಸಂಸ್ಥೆಯು ಗಾಂಧಿಯ ಅಡಿಯಲ್ಲಿ, ಕಳೆದ 1920ರಿಂದ 1940ರವರೆಗೆ, ಗಾಂಧಿ ಅಂದರೆ ಕಾಂಗ್ರೆಸ್, ಕಾಂಗ್ರೆಸ್ ಅಂದರೆ ಗಾಂಧಿ ಅನ್ನುವಂತೆ ಅನ್ಯೋನ್ಯ ಸಂಬಂಧವಿತ್ತು. ಗಾಂಧಿ ಹೇಳುವುದನ್ನು ಕಾಂಗ್ರೆಸ್ ಮಾನ್ಯ ಮಾಡುವುದು, ಗಾಂಧಿ ಹೇಳಿದಂತೆ ಕಾಂಗ್ರೆಸ್ ನಡೆಯುವುದು, ಎಂಬಂತೆ ಈ ಗುರುಶಿಷ್ಯ ಸಂಬಂಧವಿತ್ತು. ದಾಸ್ ಬಾಬು ಮತ್ತು ಪಂಡಿತ ಮೋತಿಲಾಲರು, ಗಾಂಧಿ ವಿರುದ್ಧ ಸ್ವತಂತ್ರ ನಿಲುವು ತಳೆದು, ಸ್ವರಾಜ್ಯ ಪಕ್ಷ ರೂಪಿಸಿದರು. ಆದರೆ ಈ ನಿರ್ಣಯಗಳ ವಿಷಯದಲ್ಲಿ ಗಾಂಧಿ ಮತ್ತು ಕಾಂಗ್ರೆಸ್ ಮಧ್ಯೆ ಮತಭೇದ ಉಂಟಾಗಿ, ಗಾಂಧಿ ಒಂದು ಕಡೆಯಾದರೆ ಅವರ ಶಿಷ್ಯೋತ್ತಮರು ಇನ್ನೊಂದೆಡೆ, ಹೀಗೆ ಎರಡು ವಿಭಿನ್ನ ಪಕ್ಷಗಳಾದವು. ಗಾಂಧಿಗೆ ಇವೆರಡೂ ನಿರ್ಣಯಗಳು ಅಮಾನ್ಯವಿದ್ದವು. ಕಾಂಗ್ರೆಸ್ ಅಹಿಂಸೆಯ ತತ್ವವನ್ನು ಬಿಡಬಾರದು ಹಾಗೆಯೇ, ಮಂತ್ರಿಮಂಡಳ ಸ್ಥಾಪನೆಯ ವಿಷಯಕ್ಕೆ ಮಾನ್ಯತೆ ಕೊಡಬಾರದು. ಕಾರಣ, ಹಾಗೆ ಮಾಡಿದರೆ ಯುದ್ಧದಲ್ಲಿ ಇಂಗ್ಲಿಷರಿಗೆ ಸಹಾಯ ಮಾಡಿದಂತಾಗುವುದು ಮತ್ತು ಅದು ಅಹಿಂಸೆಗೆ ದಾರಿಯಾಗುವುದು, ಎಂದು ಗಾಂಧಿ ಅವರ ಅಂಬೋಣ. ಆದರೆ ಕಾಂಗ್ರೆಸ್ ವರ್ಕಿಂಗ್ ಕಮಿಟಿಗೆ ಇದು ಹಿಡಿಸದೆ, ಗಾಂಧಿ ಅವರ ಮಾತಿಗೆ ವಿರುದ್ಧವಾಗಿ, ಈ ಎರಡು ನಿರ್ಣಯಗಳನ್ನು ಅಂಗೀಕರಿಸಲಾಯಿತು. ಆದರೆ ಈ ಜಗಳದಲ್ಲಿ ಯಾವುದು ರಾಷ್ಟ್ರಕ್ಕೆ ಪೋಷಕ, ಯಾವುದು ಅಲ್ಲ, ಎಂಬ ಬಗ್ಗೆ ನಮ್ಮ ನಿಲುವನ್ನು ಸ್ಪಷ್ಟ ಪಡಿಸುವುದು ಅವಶ್ಯವಿದೆ. ಪುಣೆಯಲ್ಲಿ ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಯಲ್ಲಿ ಮಾನ್ಯವಾದ ಯುದ್ಧ ವಿಷಯಕ ನಿಲುವಿನ ಬಗ್ಗೆ ಮೊದಲು ವಿಚಾರ ಮಾಡೋಣ.

ಈ ನಿರ್ಣಯದಲ್ಲಿ, ತಾನು ಸರ್ವಪಕ್ಷೀಯ ಮಧ್ಯವರ್ತಿ ಮಂತ್ರಿಮಂಡಳದ ಸ್ಥಾಪನೆಗೆ ಸಿದ್ಧವೆಂದು ಕಾಂಗ್ರೆಸ್ ಪ್ರಕಟಪಡಿಸಿತ್ತು. ಕಾಂಗ್ರೆಸ್ ವರ್ಕಿಂಗ್ ಕಮಿಟಿಯ ಈ ಧೋರಣೆಗೆ ನಮ್ಮ ಅಭಿನಂದನೆ ಸಲ್ಲುತ್ತದೆ. ಆದರೆ ಅದರ ಜೊತೆಗೇ ಈ ಕಮಿಟಿಯನ್ನೆಚ್ಚರಿಸುವುದೂ ಅಗತ್ಯ. ನಿಜ ಹೇಳಬೇಕೆಂದರೆ, ಈ ಧೋರಣೆ, ವೈಸರಾಯ್ ಲಾರ್ಡ್ ಲಿನ್‌ಲಿತ್‌ಗೋ ಅವರದು. ಯುದ್ಧ ಆರಂಭವಾದಾಗ, ಸೆಪ್ಟಂಬರ್ 5ರಂದು, ವೈಸರಾಯ್ ಅವರು ಗಾಂಧಿಯವರನ್ನು ಭೇಟಿಗೆ ಕರೆದು, ಹಿಂದೀಯರು ಯುದ್ಧದಲ್ಲಿ ಪೂರ್ಣ ಸಹಕಾರ ನೀಡಬೇಕೆಂದು ವಿನಂತಿಸಿದರು. ಸೆಪ್ಟಂಬರ್ 25ರಂದು ಪುನಃ ಮತ್ತೆ ಅಕ್ಟೋಬರ್ ಒಂದರಂದು ಮೂರನೆಯ ಬಾರಿ, ಹಾಗೂ ಈ ಫೆಬ್ರವರಿ ಎರಡರಂದು ನಾಲ್ಕನೆಯ ಭೇಟಿ ನಡೆಯಿತು. ಪತ್ರ ಮುಖೇನ ವೈಸರಾಯ್ ಅವರು, ಎರಡು ವಿಷಯಗಳು ತಮಗೆ ಸಮ್ಮತವೆಂದು ತಿಳಿಸಿದರು. ಮೊದಲಿಗೆ, ಹಿಂದೂಸ್ಥಾನಕ್ಕೆ ವಸಾಹತು ದರ್ಜೆ ಕೊಡಲೊಪ್ಪಿ, ಹಾಗೆಂದು ಜಾಹೀರು ಪಡಿಸುವ ಆಶ್ವಾಸನೆಯಿತ್ತರು. ಯುದ್ಧ ಮುಗಿದೊಡನೆ, ವಸಾಹತು ಸ್ವರಾಜ್ಯದ ಯೋಜನೆ ಜಾರಿಗೆ ತರುವ ಆಶ್ವಾಸನೆಯನ್ನೂ ಇತ್ತರು. ಈ ಯೋಜನೆಯ ನಿರ್ಣಯವನ್ನು ವೈಸರಾಯ್ ಅವರು ಸರ್ವಪಕ್ಷಗಳೊಡನೆ ಒಂದಾಗಿ 52 ನಾಯಕರ ಎದುರಲ್ಲೇ ಕೈಗೊಂಡರು. ಅವರೆಲ್ಲರೂ ಈ ಯೋಜನೆಗೆ ಬೆಂಬಲವಿತ್ತರು ಮತ್ತು ಮುಸಲ್ಮಾನರೂ ತಮ್ಮ ಸಮ್ಮತಿಯಿತ್ತರು.

ಆದರೂ, ಜನವರಿ ಹನ್ನೊಂದರಂದು ಮುಂಬೈಯ ಓರಿಯೆಂಟ್ ಕ್ಲಬ್‌ನಲ್ಲಿ ಭಾಷಣ ಮಾಡುತ್ತಾ, ಕಾಂಗ್ರೆಸ್ ಇನ್ನೂ ತನ್ನ ಯೋಜನೆಯನ್ನು ಜಾರಿಗೊಳಿಸುವ ತಯಾರಿಯಲ್ಲಿವುದರಿಂದ, ತಾನದನ್ನು ಜಾರಿಗೊಳಿಸಲು ಸಿದ್ಧವೆಂದು ಸಾರಿದರು. ಮತ್ತೆ ಪ್ರತಿ ಭೇಟಿಯಲ್ಲೂ ಗಾಂಧಿ ಅವರ ಮುಂದೂ ಮಂಡಿಸಿದರು. ಆದರೆ ಪ್ರತಿಸಲವೂ ಗಾಂಧಿ ಅವರು ಆ ಯೋಜನೆಯನ್ನು ನಿರಾಕರಿಸಿದರು. ಒಂಬತ್ತು ಹತ್ತು ತಿಂಗಳ ಬಳಿಕ ಆ ಯೋಜನೆ ಜಾರಿಯಾಗುವುದೆಂದರೆ ಆಶ್ಚರ್ಯವೇ ಸರಿ. ಕಾಂಗ್ರೆಸ್‌ನ ಈವರೆಗಿನ ಇತಿಹಾಸವನ್ನು ನೋಡಿದರೆ, ಒಂದು ವಿಷಯ ಸ್ಪಷ್ಟವಾಗುತ್ತದೆ. ಯಾವುದೇ ಪ್ರಶ್ನೆ ದೇಶದ ಮುಂದೆ ಬಂದಾಗ, ಅನ್ಯ ನಾಯಕರು ವ್ಯಕ್ತಪಡಿಸುವ ಅಭಿಪ್ರಾಯಗಳಿಗಿಂತ ಭಿನ್ನಮತ ಕಾಂಗ್ರೆಸ್ ನಾಯಕರು ವ್ಯಕ್ತಪಡಿಸುವುದು ಬಹುತೇಕ ನಿಶ್ಚಿತವೇ ಇದೆ. ಪಾರತಂತ್ರದಲ್ಲಿರುವ ಜನರಿಗೆ ತೀಕ್ಷ್ಣ ವಿಚಾರ, ತೀಕ್ಷ್ಣ ಕಾರ್ಯಕ್ರಮ, ತೀಕ್ಷ್ಣ ಭಾಷೆ, ಮನರಂಜನೆಗೆ ಕಾರಣೀಭೂತವಾಗುತ್ತವೆ. ಏನೇ ಇರಲಿ, ಕಾಂಗ್ರೆಸ್ ವರ್ಕಿಂಗ್ ಕಮಿಟಿಯು ತಡವಾಗಿಯೇ ಆದರೂ, ತಿರಸ್ಕರಿಸಿದ ಯೋಜನೆಯನ್ನು ಪುನಃ ಸ್ವೀಕರಿಸುವ ಧೈರ್ಯ ತೋರಿದ್ದು ಶ್ಲಾಘನೀಯ ಎಂದೇ ನಮಗನಿಸುತ್ತದೆ.

ಇನ್ನೊಂದು ದೃಷ್ಟಿಯಿಂದಲೂ ಈ ನಿರ್ಣಯವನ್ನು ವಿಮರ್ಶಿಸಬೇಕು. ಸರ್ವಪಕ್ಷೀಯ ಮಂತ್ರಿಮಂಡಳ ಸ್ಥಾಪಿಸುವ ನಿರ್ಣಯಕ್ಕೆ ಕಾಂಗ್ರೆಸ್ ಬೆಂಬಲವಿತ್ತುದು ಅಭಿನಂದನೀಯ ಹೌದಾದರೂ, ಆದರಿಂದ ದೇಶಕ್ಕೆ ಯಾವುದೇ ತತ್ಕಾಲೀನ ಲಾಭ ಆಗುವಂತೆ ಕಾಣುತ್ತಿಲ್ಲ. ಈ ಯೋಜನೆ ಮತ್ತು ಆಂಗ್ಲ ಸರಕಾರ ಸ್ವಾತಂತ್ರ ಘೋಷಿಸಲೆಂಬ ಬೇಡಿಕೆ, ಈ ಎರಡೂ ಒಂದಾದ ಯೋಜನೆ ಜಾರಿಗೆ ಬರುವುದೆಂದು ಅನಿಸುವುದಿಲ್ಲ. ಈ ಯೋಜನೆಯೊಡನೆ ಕಾಂಗ್ರೆಸ್ ಮುಂದಿಟ್ಟ ಸ್ವಾತಂತ್ರ ಘೋಷಣೆಯ ಬೇಡಿಕೆ ಪೂರ್ಣ ವಿಚಾರ ಮಾಡಿ ಮುಂದಿಟ್ಟುದಲ್ಲವೆಂದು ನಮಗನಿಸುತ್ತದೆ.

ಈ ಸಂಪೂರ್ಣ ಸ್ವಾತಂತ್ರದ ಬೇಡಿಕೆಯ ಇತಿಹಾಸ ಎಷ್ಟು ಜಟಿಲವೋ ಅಷ್ಟೇ ಉದ್ಬೋಧಕವೂ ಆಗಿದೆ, ಸಂಪೂರ್ಣ ಸ್ವಾತಂತ್ರ ಹಿಂದೂಸ್ಥಾನದ ಧ್ಯೇಯವಾಗಿದೆ. ಇಂತಹ ಘೋಷಣೆ, ಮೊದಲ ಬಾರಿಗೆ 1927ರಲ್ಲಿ ಮದರಾಸಿನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮಾಡಲಾಯಿತು. ಈ ಬೇಡಿಕೆಯ ಇನ್ನೊಂದು ಮಗ್ಗುಲು ಹೆಚ್ಚಿನವರಿಗೆ ಅರಿಯದು. ಅದರ ಮಹತ್ವದ ಕಾರಣ, ಆ ಬಗ್ಗೆ ತಿಳಿಸುವುದು ಅಗತ್ಯವೆಂದು ನಮಗನಿಸುತ್ತದೆ.

ಪಂಡಿತ್ ಮೋತಿಲಾಲ್ ನೆಹರೂ ಮತ್ತು ಶ್ರೀನಿವಾಸ ಅಯ್ಯಂಗಾರರು ಕಾಂಗ್ರೆಸ್‌ನ ಮಹತ್ವದ ವ್ಯಕ್ತಿಗಳೆಂದು ತಿಳಿಯಲಾಗಿದೆ. ಗಾಂಧಿಯವರಿಗೂ ಅವರ ಬಗ್ಗೆ ಗೌರವವಿದೆ. ಇವರಿಬ್ಬರು ಕಾಂಗ್ರೆಸ್‌ನ ಆಧಾರಸ್ತಂಭಗಳಾಗಿ ಬಂಧು ಭಾವದಿಂದಿದ್ದಾರೆ. ಆದರೆ ಬಹಳ ಕಾಲದಿಂದ ಅವರಲ್ಲಿ ವಿರಸವುಂಟಾಗಿ ಅಸಂತುಷ್ಟರಾಗಿದ್ದಾರೆ. ಪರಸ್ಪರರನ್ನು ದೂಷಿಸುತ್ತಾ, ಒಬ್ಬರಿನ್ನೊಬ್ಬರನ್ನು ಪೇಚಿಗೆ ಸಿಲುಕಿಸಲು ನೋಡುತ್ತಾರೆ. ಈ ವ್ಯಕ್ತಿವಾದದಲ್ಲಿ ಮೋತಿಲಾಲರಿಗೆ ಗಾಂಧಿ ಅವರು ಜೊತೆಯದುದರಿಂದ, ಅಯ್ಯಂಗಾರರ ಪ್ರತಿಷ್ಠೆ ಕಡಿಮೆಯಾಗತೊಡಗಿತು. ಆಗ, ತನ್ನ ಕೈ ಮೇಲಾಗಲೆಂದು, ಅಯ್ಯಂಗಾರರು, ಉಳಿದವರು ಕೇವಲ ಸ್ವರಾಜ್ಯ ಬೇಡಿದರೆ, ತಾನು ಸಂಪೂರ್ಣ ಸ್ವರಾಜ್ಯ ಬೇಡುವವನೆಂದಾದರೆ, ತನ್ನ ತೂಕ ಹೆಚ್ಚಾಗುವುದೆಂದು, ಮದರಾಸ್ ಅಧಿವೇಶನದಲ್ಲಿ ಸಂಪೂರ್ಣ ಸ್ವರಾಜ್ಯ ಬೇಡಿ ಘೋಷಣೆ ಕೂಗಿದರು. ಪೇಚಿಗೆ ಸಿಲುಕಿದ ಗಾಂಧಿ ಹಾಗೂ ಮೋತಿಲಾಲರೂ ನಿರ್ವಾಹವಿಲ್ಲದೆ, ಅವರಿಗೆ ಸಮನಾದ ದೇಶಭಕ್ತರು ತಾವೆಂದು ತೋರಿಸಿಕೊಡಲು, ಅಯ್ಯಂಗಾರರ ಭಾಷಣವನ್ನು ಸ್ವೀಕರಿಸಿ, ತಮ್ಮದಾಗಿಸಿಕೊಂಡರು. ಹೀಗೆ ಸಂಪೂರ್ಣ ಸ್ವಾತಂತ್ರದ ನಿರ್ಣಯದ ಪ್ರಸೂತಿ ವೇದನೆಯು ಬಂಜೆಯ ಪ್ರಸೂತಿ ವೇದನೆಯಂತಾಯಿತು.

1927ರಲ್ಲಿ ಈ ನಿರ್ಣಯ ಅಂಗೀಕೃತವಾದ ಬಳಿಕ, ಒಂದೇ ವರ್ಷದಲ್ಲಿ ಕಾಂಗ್ರೆಸ್‌ನ ಸರ್ವಪಕ್ಷ ಕಮಿಟಿ, ಪಂಡಿತ್ ಮೋತಿಲಾಲ್ ನೆಹರೂ ಅಧ್ಯಕ್ಷತೆಯಲ್ಲಿ ಸ್ಥಾಪನೆಯಾಯಿತು.
ಹಿಂದೂಸ್ಥಾನದ ಸ್ಟೇಟ್ ಸೆಕ್ರೆಟರಿ ಲಾರ್ಡ್ ಬರ್ಕನ್ ಹೈಡ್, 1928ರಲ್ಲಿ ಹಿಂದೀಯರನ್ನುದ್ದೇಶಿಸಿ, ‘‘ರಾಜಕೀಯ ಸಂವಿಧಾನ ತಯಾರಿಸುವ ಪ್ರಾಜ್ಞತೆ ಹಿಂದೀಯರಲ್ಲಿ ಇಲ್ಲವೆಂದೂ, ತಾವು ಆಂಗ್ಲರು ತಯಾರಿಸುವ ಯೋಜನೆ ಹಿಂದೀಯರಿಗೆ ಮಾನ್ಯವಾಗದಿದ್ದರೆ, ಅವರೇ ತಮ್ಮ ಯೋಜನೆ ತಯಾರಿಸಿ ತೋರಲಿ’’ ಎಂದರು. ಅದಕ್ಕೆ ಉತ್ತರವಾಗಿ ಒಂದು ಸರ್ವಪಕ್ಷೀಯ ಕಮಿಟಿ ಸ್ಥಾಪಿಸಲಾಯಿತು. ಆಶ್ಚರ್ಯವೆಂದರೆ, 1927ರಲ್ಲಿ ಸಂಪೂರ್ಣ ಸ್ವತಂತ್ರದ ನಿರ್ಣಯ ಅಂಗೀಕೃತವಾದಾಗ, ಆ ಕಮಿಟಿಯು ಸಂಪೂರ್ಣ ಸ್ವಾತಂತ್ರದ ಯೋಜನೆಯ ಬದಲಿಗೆ ವಸಾಹತು ಸ್ವರಾಜ್ಯದ ಯೋಜನೆಯನ್ನು ಅಂಗೀಕರಿಸಿತು ಮತ್ತು 1929ರಲ್ಲಿ ಲಾಹೋರ್‌ನಲ್ಲಿ ಸೇರಿದ ಅಧಿವೇಶನದಲ್ಲಿ ಮಾನ್ಯತೆಯನ್ನೂ ನೀಡಿತು.

ಇದರಿಂದ ಸಂಪೂರ್ಣ ಸ್ವಾತಂತ್ರದ ಬಗ್ಗೆ ಕಾಂಗ್ರೆಸ್‌ಗೆ ಎಷ್ಟು ಅಚಲ ವಿಶ್ವಾಸವಿತ್ತೆಂದು ಸಹಜವಾಗಿಯೇ ತಿಳಿದು ಬರುತ್ತದೆ. 1929ರಲ್ಲಿ ಅಂಗೀಕೃತವಾದ ನಿರ್ಣಯದಲ್ಲಿ, ‘‘1929ರ ಡಿಸೆಂಬರ್ 31ರ ಒಳಗೆ ಬ್ರಿಟಿಷ್ ಸರಕಾರವು ನೆಹರೂ ಕಮಿಟಿಯ ಯೋಜನೆಯನ್ನು ಮಾನ್ಯ ಮಾಡಿದರೆ, ಕಾಂಗ್ರೆಸ್, ಸಂಪೂರ್ಣ ಸ್ವಾತಂತ್ರದ ಬೇಡಿಕೆಯನ್ನು ಬಿಟ್ಟುಕೊಟ್ಟು, ವಸಾಹತು ಸ್ವರಾಜ್ಯದಷ್ಟಕ್ಕೇ ಸಮಾಧಾನ, ಪಟ್ಟುಕೊಳ್ಳುವುದು’’ ಎಂದು ಹೇಳಲಾಗಿದೆ. ಸಂಪೂರ್ಣ ಸ್ವಾತಂತ್ರದ ಧ್ಯೇಯದ ವಿಷಯದಲ್ಲಿ ಕಾಂಗ್ರೆಸ್‌ನ ವರ್ತನೆ ಎಷ್ಟು ಬಾಲಿಶವಾದದ್ದೆಂದು ಇದರಿಂದ ತಿಳಿದು ಬರುತ್ತದೆ. ಈ ಸಂಪೂರ್ಣ ಸ್ವಾತಂತ್ರದ ಧ್ಯೇಯದ ಬೇಡಿಕೆಯ ಇತಿಹಾಸ ನೋಡಿದರೆ, ಈ ಮಹತ್ವದ ವಿಷಯದಲ್ಲಿ ಕಾಂಗ್ರೆಸ್ ಹೇಗೆ ದುರ್ಬಲತೆ ತೋರಿದೆ ಎಂಬುದು ಸ್ಪಷ್ಟವಾಗುತ್ತದೆ. ಎರಡು ವರ್ಷಗಳ ಹಿಂದೆ, ಬಾಬು ಚಿತ್ತರಂಜನದಾಸರು ಈ ವಿಷಯದ ಬಗ್ಗೆ ಚರ್ಚಿಸಿದ್ದರು.

1925ರ ಮೇ 2ರಂದು, ಫರೀದ್‌ಪುರದಲ್ಲಿ ಪ್ರಾವಿನ್ಶಿಯಲ್ ಕಾಂಗ್ರೆಸ್‌ನ ಅಧಿವೇಶನ ಸೇರಿತ್ತು. ಆ ಅಧಿವೇಶನದ ಅಧ್ಯಕ್ಷರಾಗಿ ಈ ವಿಷಯವನ್ನು ಅವರು ಸಾಂಗೋಪಾಂಗವಾಗಿ ಚರ್ಚಿಸಿದ್ದರು. ಅಷ್ಟೊಂದು ಮಹತ್ವಪೂರ್ಣವೂ, ಸಮಂಜಸವೂ ಆಗಿತ್ತು, ಅವರ ಮಾತು.

ಅವರ ಉತ್ತರದಿಂದ, ಸಂಪೂರ್ಣ ಸ್ವಾತಂತ್ರಕ್ಕಿಂತ ವಸಾಹತು ಸ್ವರಾಜ್ಯವೇ ಹಿಂದೂಸ್ಥಾನದ ದೃಷ್ಟಿಯಿಂದ ಶ್ರೇಯಸ್ಕರವೆಂಬ ದಾಸ್ ಅವರ ಮತ, ಕಾಂಗ್ರೆಸ್ ಸಂಪೂರ್ಣ ಸ್ವಾತಂತ್ರದ ಧ್ಯೇಯ ಮಂಡಿಸುವ ಎರಡು ವರ್ಷಗಳ ಮೊದಲೇ ಪ್ರಕಟಿಸಲ್ಪಟ್ಟಿತ್ತು. ಎರಡು ವರ್ಷಗಳಲ್ಲೇ ಇಷ್ಟು ದೊಡ್ಡ ಬದಲಾವಣೆಯಾಗಲು, ಹಿಂದೂಸ್ಥಾನದ ಇತಿಹಾಸದಲ್ಲಿ ಅಂತಹ ಮಹತ್ವದ್ದೇನೋ ಘಟಿಸಿದೆಯೆಂದು ಯಾರೂ ಹೇಳುವಂತೆ ಇರಲಿಲ್ಲ. ಬಾಬು ಚಿತ್ತರಂಜನದಾಸ್ ಅವರು ಇತರ ಕಾಂಗ್ರೆಸಿಗರಂತಿರದೆ, ಮೃದು ಧೋರಣೆಯವರಾಗಿದ್ದರು ಎಂದೂ ಯಾರೂ ಹೇಳುವಂತಿರಲಿಲ್ಲ.

ಅವರ ವಿಚಾರ ಅಲ್ಪಮಾತ್ರದ್ದು, ಎಂದುಕೊಂಡರೂ, ಕಾಂಗ್ರೆಸ್ ತನ್ನ ಸಂಪೂರ್ಣ ಸ್ವಾತಂತ್ರದ ಧೋರಣೆಯಲ್ಲಿ ಮಾಡಿದ ಬದಲಾವಣೆ, ಶ್ರೇಷ್ಠತಮ, ಸುವಿಚಾರಿ, ಸಮಂಜಸ ಮತ್ತು ಕಟ್ಟಾ ಕಾಂಗ್ರೆಸ್ ಕಾರ್ಯಕರ್ತರ ದೃಷ್ಟಿಯಿಂದ ತೀರ ಬಾಲಿಶವಾಯಿತೆನ್ನಲು ಅಡ್ಡಿಯಿಲ್ಲ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News