×
Ad

‘ಇಂದಿರಾ ಕ್ಯಾಂಟಿನ್ ಅವ್ಯವಹಾರ’ ಚರ್ಚೆಗೆ ಪಟ್ಟು: ಆಡಳಿತ-ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ

Update: 2018-07-13 19:26 IST

ಬೆಂಗಳೂರು, ಜು. 13: ಇಂದಿರಾ ಕ್ಯಾಂಟಿನ್‌ನಲ್ಲಿ ನಡೆದಿರುವ ಅವ್ಯವಹಾರ ಪ್ರಕರಣದ ಬಗ್ಗೆ ಸದನದಲ್ಲಿ ಚರ್ಚಿಸಲು ಅವಕಾಶ ಕಲ್ಪಿಸಬೇಕೆಂದು ಬಿಜೆಪಿ ಸದಸ್ಯ ಎಸ್.ಎ.ರಾಮದಾಸ್ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಕೆಲಕಾಲ ವಾಗ್ವಾದ ನಡೆಯಿತು.

ಶುಕ್ರವಾರ ವಿಧಾನಸಭೆಯಲ್ಲಿ ಸ್ಪೀಕರ್ ಪೀಠದಲ್ಲಿದ್ದ ಉಪ ಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿ ವಿಧೇಯಕ ಪರ್ಯಾಲೋಚಿಸುವ ಶಾಸಕ ರಚನೆ ಕಲಾಪಕ್ಕೆ ಅವಕಾಶ ನೀಡಿದರು. ಈ ವೇಳೆ ಉನ್ನತ ಶಿಕ್ಷಣ ಸಚಿವರ ಪರವಾಗಿ ಕಾನೂನು ಸಚಿವ ಕೃಷ್ಣ ಭೈರೇಗೌಡ, ರೈ ತಾಂತ್ರಿಕ ವಿವಿ ವಿಧೇಯಕದ ಬಗ್ಗೆ ವಿವರಣೆ ನೀಡಲು ಮುಂದಾದರು. ಈ ವೇಳೆ ಮಧ್ಯಪ್ರವೇಶಿಸಿದ ರಾಮದಾಸ್, ಅವ್ಯವಹಾರಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳು ನನ್ನ ಬಳಿ ಇವೆ. ಚರ್ಚೆಗೆ ಈಗಾಗಲೇ ನೋಟಿಸ್ ನೀಡಿದ್ದು, ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು. ‘ಈಗಾಗಲೇ ನಿಮ್ಮ ದಾಖಲೆಗಳನ್ನು ಸ್ಪೀಕರ್ ಪರಿಶೀಲಿಸಿ ತಿರಸ್ಕರಿಸಿದ್ದಾರೆ. ಒಂದು ಬಾರಿ ತಿರಸ್ಕೃತವಾದ ಮೇಲೆ ಪುನಃ ಅದೇ ವಿಷಯದ ಬಗ್ಗೆ ಚರ್ಚಿಸುವುದು ಸರಿಯಲ್ಲ. ಹಿರಿಯರಾದ ನಿಮಗೆ ಇದೆಲ್ಲ ಗೊತ್ತಿರಬೇಕಲ್ಲವೇ’ ಎಂದು ಉಪ ಸಭಾಧ್ಯಕ್ಷ ಕೃಷ್ಣಾರೆಡ್ಡಿ ಸೂಚಿಸಿದರು.

‘ನಿಯಮ 69ರಡಿ ಚರ್ಚೆಗೆ ಅವಕಾಶ ನೀಡುವುದು ಎಂದು ಸ್ಪೀಕರ್ ಹೇಳಿದ್ದರು. ನಾನು ದಾಖಲೆಗಳ ಸಮೇತ ಸದನಕ್ಕೆ ಬಂದಿದ್ದೇನೆ. ಏಕಾಏಕಿ ಚರ್ಚೆಗೆ ಅವಕಾಶ ಕೊಡುವುದಿಲ್ಲವೆಂದರೆ ಹೇಗೆ? ಸದನದ ಸದಸ್ಯರ ವಾಕ್ ಸ್ವಾತಂತ್ರ ಮೊಟಕುಗೊಳಿಸುವುದು ಸರಿಯಲ್ಲ’ ಎಂದು ರಾಮದಾಸ್ ಅಸಮಾಧಾನ ಹೊರಹಾಕಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸಚಿವ ಕೃಷ್ಣ ಭೈರೇಗೌಡ ಸೇರಿದಂತೆ ಮತ್ತಿತರ ಸದಸ್ಯರು ಸ್ಪೀಕರ್ ಪೀಠಕ್ಕೆ ನೀವು ಪದೇ ಪದೇ ಅಗೌರವ ತೋರುತ್ತಿದ್ದೀರಿ. ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಮೊದಲು ಪೀಠಕ್ಕೆ ಗೌರವ ಕೊಡುವುದನ್ನು ಕಲಿತುಕೊಳ್ಳಿ. ಕಿರಿಯರಿಗೆ ಮಾರ್ಗದರ್ಶನ ಆಗಬೇಕಾದ ನೀವು ಕಲಾಪಕ್ಕೆ ಅಡ್ಡಿಪಡಿಸುವುದು ಸಲ್ಲ ಎಂದು ಆಕ್ಷೇಪಿಸಿದರು.

ಶೆಟ್ಟರ್ ಮತ್ತು ಅರಗ ಜ್ಞಾನೇಂದ್ರ, ರಾಮದಾಸ್ ಬೆಂಬಲಕ್ಕೆ ನಿಂತು, ಸದಸ್ಯರ ಮಾತನಾಡುವ ಹಕ್ಕನ್ನು ಕಸಿದುಕೊಳ್ಳವುದು ಸರಿಯಲ್ಲ. ಸದಸ್ಯರು ನೀಡಿರುವ ಕಡತವನ್ನು ಪರಿಶೀಲಿಸಿ ಅದು ಚರ್ಚೆಗೆ ಅರ್ಹವೆಂದು ನಿಮಗೆ ಮನವರಿಕೆಯಾದರೆ ವಿಷಯ ಪ್ರಸ್ತಾವನೆಗೆ ಅವಕಾಶ ನೀಡಿ ಎಂದು ಕೋರಿದರು.

ಈಗಾಗಲೇ ತಿರಸ್ಕೃತ ಆಗಿರುವ ವಿಚಾರದ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಅವಕಾಶ ಕಲ್ಪಿಸುವುದು ಸಾಧ್ಯವಿಲ್ಲ. ಹಿರಿಯ ಸದಸ್ಯರಾದ ನೀವು ಪದೇ ಪದೇ ಹೀಗೆ ಕಲಾಪಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ನಿಮ್ಮ ವಿಚಾರ ಚರ್ಚೆಗೆ ಅವಕಾಶವಿಲ್ಲ ಉಪ ಸಭಾಧ್ಯಕ್ಷ ಕೃಷ್ಣಾರೆಡ್ಡಿ ನಿರಾಕರಿಸಿದ ಹಿನ್ನೆಲೆಯಲ್ಲಿ ರಾಮದಾಸ್ ಸಭಾತ್ಯಾಗ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News