ಭೂ ವಿಜ್ಞಾನ ಕೋರ್ಸ್‌ಗಳ ಪ್ರವೇಶ ನಿರ್ಬಂಧ: ರೈ ತಾಂತ್ರಿಕ ವಿವಿ(ತಿದ್ದುಪಡಿ) ವಿಧೇಯಕಕ್ಕೆ ಅನುಮೋದನೆ
ಬೆಂಗಳೂರು, ಜು. 13: ಐಸಿಎಆರ್ ಮಾರ್ಗಸೂಚಿ ಅನುಸರಿಸದಿರುವುದರಿಂದ ‘ರೈ ತಾಂತ್ರಿಕ ವಿಶ್ವ ವಿದ್ಯಾಲಯ’ ಕೃಷಿ ವಿಜ್ಞಾನಗಳು ಮತ್ತು ತಂತ್ರಜ್ಞಾನ, ಹೊಸದಾಗಿ ರೂಪುಗೊಳ್ಳುತ್ತಿರುವ ಯಾವುದೇ ಕ್ಷೇತ್ರ ಅಧ್ಯಯನ, ಭೂ ವಿಜ್ಞಾನಗಳಿಗೆ ಸಂಬಂಧಿಸಿದ ಕೋರ್ಸ್‌ಗಳನ್ನು ನಡೆಸಲು ನಿರ್ಬಂಧಿಸುವ ‘ರೈ ತಾಂತ್ರಿಕ ವಿಶ್ವ ವಿದ್ಯಾಲಯ (ತಿದ್ದುಪಡಿ)ವಿಧೇಯಕಕ್ಕೆ ಅನುಮೋದನೆ ನೀಡಲಾಯಿತು.
ಶುಕ್ರವಾರ ವಿಧಾನಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಕೃಷ್ಣ ಭೈರೇಗೌಡ ವಿಧೇಯಕವನ್ನು ಮಂಡಿಸಿದರು, ಸುದೀರ್ಘ ಚರ್ಚೆಯ ಬಳಿಕ ಸ್ಪೀಕರ್ ಪೀಠದಲ್ಲಿದ್ದ ಉಪಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿ ಧ್ವನಿಮತದ ಮೂಲಕ ಅಂಗೀಕಾರ ದೊರಕಿಸಿಕೊಟ್ಟರು.
ಆರಂಭಕ್ಕೆ ವಿವರಣೆ ನೀಡಿದ ಕೃಷ್ಣಭೈರೇಗೌಡ, 2012ರಲ್ಲಿ ಜಾರಿಗೆ ತರಲಾದ ‘ರೈ ತಾಂತ್ರಿಕ ವಿಶ್ವವಿದ್ಯಾಲಯದ ಅಧಿನಿಯಮ’ದಲ್ಲಿ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ಬೋಧಿಸಲು ಅವಕಾಶ ನೀಡಲಾಗಿತ್ತು. ಇದರಿಂದಾಗಿ ವಿಶ್ವ ವಿವಿದ್ಯಾಲಯ ಸರಕಾರದ ಕೃಷಿ ವಿಶ್ವ ವಿವಿದ್ಯಾಲಯಕ್ಕೆ ಸರಿಸಮಾನವಾಗಿ ಕೃಷಿ ವಿಷಯಗಳನ್ನು ಬೋಧಿಸಲು ಆರಂಭಿಸಿತ್ತು. ಇದನ್ನು ವಿರೋಧಿಸಿ ಶಿವಮೊಗ್ಗ ಇತರೆ ಕಡೆಗಳಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರಕಾರ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕೃಷಿ ಮತ್ತು ಕೃಷಿ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಬೋಧಿಸಬಾರದು ಎಂದು ಷರತ್ತು ವಿಧಿಸಿದೆ. ಈಗಾಗಲೇ ಪ್ರವೇಶ ಪಡೆದು ಮೊದಲ, 2ನೆ ವರ್ಷದ ಕೃಷಿ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳ ಕೋರ್ಸ್‌ನ ಅವಧಿ ಮುಗಿಸುವುದು ರೈ ವಿಶ್ವ ವಿದ್ಯಾಲಯದ ಜವಾಬ್ದಾರಿ ಎಂದು ಸೂಚಿಸಲಾಗಿದೆ. ಹೊಸದಾಗಿ ಕೃಷಿ ವಿಷಯಕ್ಕೆ ಸಂಬಂಧಪಟ್ಟಂತೆ ಯಾವುದೇ ಕೋರ್ಸ್‌ಗಳಿಗೆ ಪ್ರವೇಶ ನೀಡಬಾರದು ಎಂಬ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ದುಡ್ಡ ಕೊಟ್ಟು ಪದವಿ: ಡೀಮ್ಡ್ ಮತ್ತು ಖಾಸಗಿ ವಿಶ್ವ ವಿದ್ಯಾಲಯಗಳು ಪ್ರವೇಶ ಮತ್ತು ಪರೀಕ್ಷೆ ನಡೆಸುವುದನ್ನು ಸರಕಾರ ನಿಯಂತ್ರಿಸಬೇಕು. ದುಡ್ಡ ಕೊಟ್ಟು ಪದವಿ ಪಡೆಯುವುದನ್ನು ತಡೆಗಟ್ಟದಿದ್ದರೆ ಶಿಕ್ಷಣ ವ್ಯವಸ್ಥೆ ಸಂಪೂರ್ಣ ನಾಶವಾಗಲಿದೆ ಎಂದು ಬಿಜೆಪಿ ಸದಸ್ಯ ಜೆ.ಸಿ.ಮಾಧುಸ್ವಾಮಿ ವಿಧೇಯಕದ ಮೇಲೆ ಮಾತನಾಡುವ ವೇಳೆ ಎಚ್ಚರಿಸಿದರು.
ವಿದ್ಯಾರ್ಥಿಗಳು, ಪ್ರಾಧ್ಯಾಪಕ ಮತ್ತು ಉಪನ್ಯಾಸಕರ ಸೇವೆ ಮಾಡುವಂತಹ ಶಿಕ್ಷಣ ಇಲಾಖೆಯಲ್ಲಿ ಆರ್ಡಲ್ರಿ ಪದ್ಧತಿಯನ್ನು ರದ್ದು ಮಾಡಬೇಕು ಎಂದ ಮಾಧುಸ್ವಾಮಿ, ತಾಂತ್ರಿಕ ವಿಶ್ವ ವಿದ್ಯಾಲಯ ಭೂ ವಿಜ್ಞಾನದ ಕೋರ್ಸ್ ನಡೆಸಲು ಹೇಗೆ ಸಾಧ್ಯ. ತಾಂತ್ರಿಕತೆಗೂ ವಿಜ್ಞಾನಕ್ಕೂ ಸಂಬಂಧವಿದೆಯೇ ಎಂದು ಪ್ರಶ್ನಿಸಿದರು.
ಕೃಷಿ ಸಚಿವ ಶಿವಶಂಕರರೆಡ್ಡಿ ಮಾತನಾಡಿ, ರೈ ತಾಂತ್ರಿಕ ವಿವಿ ಐಸಿಎಆರ್ ನಿಯಮ ಉಲ್ಲಂಘಿಸಿದ್ದಲ್ಲದೆ, ಹಣ ಗಳಿಸುವ ಉದ್ದೇಶದಿಂದಲೇ ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಪಡೆದಿದೆ. ಈ ವಿವಿಯಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸಲು ಅಗತ್ಯವಿರುವ ಉಪನ್ಯಾಸಕರು ಸೇರಿ ಮೂಲಸೌಕರ್ಯಗಳೇ ಇಲ್ಲ ಎಂದು ಹೇಳಿದರು.