ಹೃದಯ ಇಲ್ಲದವರು ಶಾಸನಸಭೆಗೆ ಬರಬಾರದು: ಸ್ಪೀಕರ್ ರಮೇಶ್ ಕುಮಾರ್
ಬೆಂಗಳೂರು, ಜು. 13: ‘ತಲೆ ಇಲ್ಲದವರೂ, ಅಂಗವೈಕಲ್ಯಕ್ಕೆ ಒಳಗಾದವರೂ ಬಂದರೂ ಯಾವುದೇ ಅಡ್ಡಿಯಿಲ್ಲ. ಆದರೆ, ಹೃದಯ ಇಲ್ಲದವರು ಶಾಸನಸಭೆಗೆ ಬರಬಾರದು’ ಎಂದು ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ಹೇಳಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ‘ಮೈತ್ರಿ ಸರಕಾರ ಕುಂಟ-ಕುರುಡರ ಸರಕಾರ’ ಎಂದು ಟೀಕಿಸಿದಕ್ಕೆ ಗೋವಿಂದ ಕಾರಜೋಳರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂಬ ಬಿಜೆಪಿ ಸದಸ್ಯ ಮಾಧುಸ್ವಾಮಿ ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಜನರ ಸಂಕಷ್ಟಕೆ ಸ್ಪಂದಿಸುವಂತಹ ಹೃದಯವಂತರು ಬರಬೇಕು ಎಂದರು.
‘ಕಲಾಪದಲ್ಲಿ ನಡೆದ ಚರ್ಚೆಯ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಅವರಿಗಾದರೂ ಬುದ್ಧಿ ಬೇಡವೆ’ ಎಂದು ಮಾಧುಸ್ವಾಮಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ರಮೇಶ್ ಕುಮಾರ್, ಪೊಲೀಸರಿಗೆ ಅಷ್ಟು ಬುದ್ಧಿ ಇದ್ದಿದ್ದರೆ ವಿಧಾನಸಭೆಗೆ ಬಂದು ಬಿಡುತ್ತಿದ್ದರು. ಬೇಡ ಬೀಡಿ ಅವರು ಇಲ್ಲೇ ಇರಲಿ ದೂರು ತೆಗೆದುಕೊಂಡ ತಕ್ಷಣ ಏನೂ ಆಗಲ್ಲ. ಅದು ಮುಂದುವರೆದರೆ ತೊಂದರೆ. ತಲೆ ಇಲ್ಲದವರು, ಅಂಗವೈಕಲ್ಯಕ್ಕೆ ಒಳಗಾದವರೂ ವಿಧಾನಸಭೆಗೆ ಆರಿಸಿ ಬರಲಿ ತೊಂದರೆ ಇಲ್ಲ. ಆದರೆ, ಹೃದಯ ಇಲ್ಲದವರು ಬರಬಾರದು ಎಂದರು.