ವಿವಿಗಳಲ್ಲಿ ಏಕರೂಪ ಪಠ್ಯಕ್ರಮ ಜಾರಿ ನಮ್ಮ ಮುಂದಿಲ್ಲ: ಸಚಿವ ಜಿ.ಟಿ.ದೇವೇಗೌಡ
ಬೆಂಗಳೂರು, ಜು.13: ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಪ್ರಸ್ತುತ ಏಕರೂಪ ಪಠ್ಯಕ್ರಮವನ್ನು ಜಾರಿಗೆ ತರುವ ಪ್ರಸ್ತಾವನೆ ಸರಕಾರದ ಪರಿಶೀಲನೆಯಲ್ಲಿ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನ ಸದಸ್ಯ ಆರ್.ಪ್ರಸನ್ನಕುಮಾರ್ ಪರಿಷತ್ತಿನಲ್ಲಿಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉನ್ನತ ಶಿಕ್ಷಣ ಸಚಿವರು, ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ಮಾರ್ಗಸೂಚಿಗಳ ಅನುಸಾರ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000 ರಲ್ಲಿ ಕಲ್ಪಿಸಿದ ಅವಕಾಶಗಳನ್ವಯ ಪ್ರತಿಯೊಂದು ವಿಷಯಕ್ಕೂ ಒಂದು ಅಧ್ಯಯನ ಮಂಡಳಿಯನ್ನು ರಚಿಸಿ ಪಠ್ಯಕ್ರಮಗಳ ನಿಯಮಾವಳಿಯನ್ನು ಸಿದ್ಧಪಡಿಸಲಾಗುತ್ತದೆ. ಸದರಿ ನಿಯಮಾವಳಿಗೆ ವಿಶ್ವವಿದ್ಯಾಲಯಗಳ ವಿದ್ಯಾವಿಷಯಕ ಪರಿಷತ್ತುಗಳ ಅಂಗೀಕಾರ ಪಡೆದು ಅನಂತರ ರಾಜ್ಯಪಾಲರ ಅನುಮೋದನೆಯೊಂದಿಗೆ ಪಠ್ಯಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಮಾರ್ಗಸೂಚಿಗಳ ಅನುಸಾರ ಆಯಾ ವಿಶ್ವವಿದ್ಯಾಲಯಗಳ ವಿದ್ಯಾವಿಷಯಕ ಪರಿಷತ್ತುಗಳಲ್ಲಿ ನಿಯಮ ರಚಿಸಿ, ರಾಜ್ಯಪಾಲರ ಅನುಮೋದನೆ ಪಡೆದ ಪಿಎಚ್‌ಡಿ ನಿಯಮಗಳನುಸಾರ ವಿವಿಧ ವಿಷಯಗಳಲ್ಲಿನ ಪಿಎಚ್‌ಡಿ ಪದವಿಗೆ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ.
ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ಮಾನ್ಯವಿರುವ ವಿಶ್ವವಿದ್ಯಾಲಯಗಳಿಂದ ಪಡೆದ ಸ್ನಾತಕೋತ್ತರ ಪದವಿಯಲ್ಲಿ ಶೇ.55 ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದವರು ವಿಶ್ವವಿದ್ಯಾಲಯಗಳ ಪಿಎಚ್‌ಡಿ ಪದವಿಯ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ, ವರ್ಗ-1 ರ ಹಾಗೂ ವಿಕಲಚೇತನ ಅಭ್ಯರ್ಥಿಗಳು ಶೇಕಡಾ 50 ರಷ್ಟು ಅಂಕಗಳನ್ನು ಪಡೆದಿರಬೇಕು. ಎನ್‌ಇಟಿ ಮತ್ತು ಎಸ್‌ಎಲ್ಇಟಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವವರು ಅಥವಾ ವಿದೇಶ ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಅರ್ಹತಾ ಪರೀಕ್ಷೆಯಿಂದ ವಿನಾಯಿತಿ ಇರುತ್ತದೆ. ಪಿಎಚ್‌ಡಿ ಪದವಿಯ ಪ್ರವೇಶ ಪರೀಕ್ಷೆಯ ಅಂಕ ಹಾಗೂ ಸ್ನಾತಕೋತ್ತರ ಪದವಿಗಳ ಅಂಕ ಮತ್ತು ಸಂದರ್ಶನದಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಅರ್ಹತೆ ಮತ್ತು ಮೀಸಲಾತಿಯನ್ನು ಆಧರಿಸಿ ಖಾಲಿ ಇರುವ ಪಿಎಚ್‌ಡಿ ಸೀಟುಗಳಿಗೆ ಪ್ರವೇಶ ನೀಡಲಾಗುವುದು ಎಂದರು.