ಲೋಕಸಭಾ ಚುನಾವಣೆಯೊಳಗೆ ಯೋಜನೆಗಳನ್ನು ಅನುಷ್ಠಾನಗೊಳಿಸಿ: ಸದಾನಂದಗೌಡ
ಬೆಂಗಳೂರು, ಜು.13: ಕೇಂದ್ರ ಸರಕಾರ ಅನುದಾನ ನೀಡಿರುವ ಯೋಜನೆಗಳ ಅನುಷ್ಠಾನ ಕುರಿತು ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಸಭೆ ನಡೆಸಿದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮುಂದಿನ ಲೋಕಸಭಾ ಚುನಾವಣೆಯೊಳಗೆ ಎಲ್ಲ ಯೋಜನೆಗಳನ್ನು ಅನುಷ್ಠಾನ ಮಾಡುವ ಕಡೆಗೆ ಗಮನ ನೀಡುವಂತೆ ತಾಕೀತು ಮಾಡಿದ್ದಾರೆ.
ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ನಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಸಲಾಯಿತು. ತಹಶೀಲ್ದಾರ್‌ಗಳು, ಅಧಿಕಾರಿಗಳ ಜೊತೆ ಸಭೆ ನಡೆಸಿದ ಕೇಂದ್ರ ಸಚಿವರು, ಕೇಂದ್ರದ ಪ್ರತಿ ಯೋಜನೆಯ ಅನುಷ್ಠಾನ ಯಾವ ಹಂತದಲ್ಲಿದೆ ಎಂಬುದರ ಕುರಿತು ಮಾಹಿತಿ ಪಡೆದರು.
ಈ ವೇಳೆ ಸಭೆಗೆ ಗೈರಾಗಿದ್ದ ಟೆಲಿಕಾಂ ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡ ಅವರು, ಎರಡು ವರ್ಷದೊಳಗೆ ಎಲ್ಲಾ ಗ್ರಾಮ ಪಂಚಾಯತ್ ಗಳಿಗೆ ಇಂಟರ್ನೆಟ್ ಸಂಪರ್ಕ ಕೊಡಬೇಕಿದೆ. ಆದರೆ ಈ ಕುರಿತು ಸಭೆಗೂ ಬಾರದೆ ಬೇಜಾವಾಬ್ದಾರಿ ತೋರಿದ ಅಧಿಕಾರಿಗಳಿಗೆ ನೋಟಿಸ್ ನೀಡಬೇಕು ಎಂದು ಸೂಚಿಸಿದರು.
ಬೆಂಗಳೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಬರುವ ಮೀನುಗುಂಟೆ ಹಾಗೂ ನೆಲಗುಳಿ ಊರುಗಳಲ್ಲಿ ವಿದ್ಯುತ್ ಸಂಪರ್ಕವಿರದ ಊರುಗಳಿಗೆ ಹದಿನೈದು ದಿನದೊಳಗೆ ವಿದ್ಯುತ್ ನೀಡಬೇಕು. ಪ್ರತಿ ಯೋಜನೆಗಳ ಅನುಷ್ಠಾನದ ಜೊತೆಗೆ ಎಷ್ಟು ಯೋಜನೆಗಳು ಜನರಿಗೆ ಲಭ್ಯವಾಗಿವೆ, ಎಷ್ಟು ದೂರುಗಳು ಬಂದಿವೆ ಎಂಬ ವರದಿಯನ್ನು ಅಧಿಕಾರಿಗಳು ತಯಾರಿಸಬೇಕು ಎಂದು ತಿಳಿಸಿದರು.
ರೈತರ ಬೆಳೆಗೆ ವಿಮಾ ನೀಡುವ ಫಸಲ್ ಬಿಮಾ ಯೋಜನೆ, ಸ್ವಚ್ಛ ಭಾರತ್ ಮಿಷನ್, ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನದ ವಿವರ ಪಡೆದರು. ಒಟ್ಟಿನಲ್ಲಿ ಲೋಕಸಭೆ ಚುನಾವಣೆ ಒಳಗೆ ಎಲ್ಲಾ ಯೋಜನೆಗಳ ಅನುಷ್ಠಾನದ ಕೆಲಸ ಕಾರ್ಯಗಳಿಗೆ ವೇಗ ನೀಡಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.