ಭೂಗಳ್ಳರಿಗೆ ಶಾಕ್ ನೀಡಲಿರುವ ಡ್ರೋಣ್ ಕ್ಯಾಮೆರಾ ಸರ್ವೇ
ಬೆಂಗಳೂರು, ಜು.13: ರಾಜ್ಯ ರಾಜಧಾನಿಯಲ್ಲಿ ಕೆರೆಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಬೃಹತ್ ಕಟ್ಟಡ ನಿರ್ಮಿಸಿರುವ, ಸರಕಾರಿ ಭೂಮಿ ಒತ್ತುವರಿ ಮಾಡಿರುವ ಹಾಗೂ ಪಾಲಿಕೆಯ ಆಸ್ತಿಯನ್ನು ಗುಳುಂ ಮಾಡಿರುವ ಭೂಗಳ್ಳರಿಗೆ ಬ್ರೇಕ್ ಹಾಕಲು ಕರ್ನಾಟಕ ಭೂ ಇಲಾಖೆ ಮುಂದಾಗಿದೆ.
ಭೂ ಇಲಾಖೆಯ ಕಾನೂನಿನ ಪ್ರಕಾರ ಹಳ್ಳಿ ಹಾಗೂ ನಗರ ಪ್ರದೇಶದಲ್ಲಿರುವ ಆಸ್ತಿಯನ್ನು ಪತ್ತೆ ಮಾಡಿ ಮಾಹಿತಿಯನ್ನು ನೀಡಬೇಕು ಎಂಬ ಕಾನೂನಿದೆ. ಅದರ ಹಿನ್ನೆಲೆಯಲ್ಲಿ ಕರ್ನಾಟಕ ಭೂ ಕಂದಾಯ ಇಲಾಖೆಯು ನಗರದಲ್ಲಿ ಆಸ್ತಿ ಪತ್ತೆಗೆ ಮುಂದಾಗಿದೆ. ಇದರಿಂದಾಗಿ ಅಕ್ರಮವಾಗಿ ಆಕ್ರಮಿಸಿಕೊಂಡು ಸರಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟವನ್ನುಂಟು ಮಾಡುತ್ತಿರುವ ಭೂಗಳ್ಳರಿಗೆ ಇಲಾಖೆ ಶಾಕ್ ನೀಡಿದೆ.
ಜಯನಗರದ 4ನೆ ಹಂತದಲ್ಲಿ ಸರ್ವೆ ಆಫ್ ಇಂಡಿಯಾದ ಸಹಭಾಗಿತ್ವದಲ್ಲಿ ಡೆಹ್ರಾಡೂನ್‌ನಿಂದ ಬಂದಿರುವ ಡ್ರೋಣ್ ಕ್ಯಾಮೆರಾ ತಂಡದೊಂದಿಗೆ ಮೂರು ದಿನಗಳ ಕಾಲ ಸರ್ವೆ ಕಾರ್ಯ ನಡೆಯಲಿದೆ. ವಿಶೇಷವಾಗಿ ರಾಜ್ಯದಲ್ಲಿರುವ ಆಸ್ತಿಯನ್ನು ಸರ್ವೆ ಮಾಡಲು ಕನಿಷ್ಠ ಅಂದರೂ ಹತ್ತು ವರ್ಷಗಳು ಬೇಕಾಗುತ್ತಿತ್ತು. ಈ ಡ್ರೋಣ್ ಕ್ಯಾಮೆರಾದ ಸಹಾಯದಿಂದ ಸರ್ವೆ ಸಾಬೀತಾದರೆ ಒಂದೂವರೆ ವರ್ಷದಲ್ಲಿ ಸರ್ವೆ ಕಾರ್ಯ ಮುಗಿಯಲಿದೆ ಎಂದು ಕರ್ನಾಟಕ ಕಂದಾಯ ಇಲಾಖೆಯ ಸರ್ವೆ ಆಯುಕ್ತ ಮುನೀಶ್ ಮೊದ್ಗಿಲ್ ತಿಳಿಸಿದ್ದಾರೆ.
ಡ್ರೋಣ್ ಸರ್ವೆ ಟೆಕ್ನಾಲಜಿಯನ್ನು ಭೂ ಮಾಪನ ಇಲಾಖೆ ಪ್ರಾಯೋಗಿಕವಾಗಿ ತರಿಸಿಕೊಂಡಿದ್ದು, ನಗರದ ಪ್ರತಿ ಇಂಚಿಂಚು ಮಾಹಿತಿಯನ್ನು ಈ ತಂಡ ನೀಡಲಿದೆ. ಭಾರತ ಸರಕಾರದ ಸರ್ವೆ ಆಫ್ ಇಂಡಿಯಾ ಈ ಟೆಕ್ನಾಲಜಿಯನ್ನು ನೀಡಿದೆ. ಡೆಹ್ರಾಡೂನ್‌ನಿಂದ ಮೂರು ಜನ ತಂತ್ರಜ್ಞರು ಹಾಗೂ ಪ್ರಾಪರ್ಟಿ ಡ್ರೋಣ್ ಕ್ಯಾಮೆರಾವನ್ನು ತರಿಸಿಕೊಳ್ಳಲಾಗಿದೆ.
ಡ್ರೋಣ್ ಕ್ಯಾಮೆರಾ ಸಹಾಯದಿಂದ ಸರ್ವೆ ಕಾರ್ಯ ಯಶಸ್ವಿಯಾದರೆ ರಾಜ್ಯ ರಾಜಧಾನಿಯಲ್ಲಿ ಅಕ್ರಮವಾಗಿ ಭೂಮಿ ಕಬಳಿಕೆ ಮಾಡಿಕೊಂಡು ತೆರಿಗೆ ವಂಚನೆ ಮಾಡುತ್ತಿರುವವರ ನಿದ್ದೆ ಕೆಡಿಸಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.