×
Ad

ಬೆಳ್ಳಂದೂರು ಕೆರೆ ಸ್ವಚ್ಛತೆ ವಿಚಾರ: ನಿರ್ವಹಣಾ ಸಮಿತಿ ಸಭೆ ನಡೆಸಲು ಹೈಕೋರ್ಟ್ ನಿರ್ದೇಶನ

Update: 2018-07-13 21:42 IST

ಬೆಂಗಳೂರು, ಜು.13: ಬೆಳ್ಳಂದೂರು ಕೆರೆ ಸ್ವಚ್ಛತೆಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಸಿಂಗ್ ಜೈನ್ ಹಾಗೂ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ(ಬಿಡಿಎ) ಆಯುಕ್ತ ರಾಕೇಶ್‌ಸಿಂಗ್ ನೇತೃತ್ವದಲ್ಲಿ ನಿರ್ವಹಣಾ ಸಮಿತಿ ಸಭೆ ನಡೆಸುವಂತೆ ಹೈಕೋರ್ಟ್ ನಿರ್ದೇಶಿಸಿದೆ.

ಈ ಸಭೆಯಲ್ಲಿ ಮಾಲಿನ್ಯ ಮಂಡಳಿ, ಬಿಬಿಎಂಪಿ, ಬೆಂಗಳೂರು ಜಲಮಂಡಳಿ ಸೇರಿ ಜಾಗತಿಕ ಮಟ್ಟದ ತಜ್ಞರೂ ಭಾಗಿಯಾಗುವಂತೆ ನೋಡಿಕೊಳ್ಳಬೇಕೆಂದು ವಿಭಾಗೀಯ ನ್ಯಾಯಪೀಠ ತಾಕೀತು ಮಾಡಿದೆ. ಬೆಳ್ಳಂದೂರು ಕೆರೆ ಸ್ವಚ್ಛತೆಗೆ ಸಂಬಂಧಿಸಿದಂತೆ ನಮ್ಮ ಬೆಂಗಳೂರು ಪ್ರತಿಷ್ಠಾನ, ಸಂಸದರಾದ ರಾಜೀವ್ ಚಂದ್ರಶೇಖರ್ ಮತ್ತು ಡಿ.ಕುಪೇಂದ್ರರೆಡ್ಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ಮೊಹಮದ್ ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ನ್ಯಾಯಪೀಠದ ನಿರ್ದೇಶನಗಳು: ಸಭೆಯಲ್ಲಿ ತಜ್ಞರ ಸಲಹೆ ಸೂಚನೆಗಳನ್ನು ಪರಿಗಣಿಸಿ ಕ್ರಿಯಾಯೋಜನೆ ಸಿದ್ಧಪಡಿಸಿ. ಸಮನ್ವಯತೆಯಿಂದ ಸಮಯ ವ್ಯರ್ಥಮಾಡದಂತೆ ಮುಂದುವರಿಯಿರಿ. ಕೆರೆ ಸ್ವಚ್ಛತೆಯನ್ನು ಗುತ್ತಿಗೆ ನೀಡಬೇಕು. ಅನಗತ್ಯವಾಗಿ ಹಣ ಖರ್ಚಾಗದಂತೆ ನಿಗಾ ವಹಿಸಿ. ಮುಂದಿನ ವಿಚಾರಣೆ ದಿನದೊಳಗೆ ಕಾಮಗಾರಿ ಪ್ರಗತಿ ಕಂಡಿರಬೇಕು.

ಸೆಪ್ಟೆಂಬರ್ 18ರಂದು ಕ್ರಿಯಾಯೋಜನೆ ಜೊತೆ ಕಾಮಗಾರಿ ಪ್ರಗತಿ ವರದಿಯನ್ನೂ ಸಲ್ಲಿಸಿ. ನ್ಯಾಯಪೀಠ ಈ ಕುರಿತು ವಿಚಾರಣೆಯನ್ನು ಸೆಪ್ಟೆಂಬರ್ 18ಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News