ಚಾಂಪಿಯನ್ ಪಟ್ಟಕ್ಕಾಗಿ ಇಂದು ಫ್ರಾನ್ಸ್-ಕ್ರೊಯೇಶಿಯ ಕಾದಾಟ

Update: 2018-07-14 18:50 GMT

ಮಾಸ್ಕೊ, ಜು.14: ಸರಿಯಾಗಿ ಒಂದು ತಿಂಗಳ ಕಾಲ 63 ಪಂದ್ಯಗಳು ಆಡಲ್ಪಟ್ಟ ಇಪ್ಪತ್ತೊಂದನೇ ಆವೃತ್ತಿಯ ಫಿಫಾ ವಿಶ್ವಕಪ್ ಟೂರ್ನಿಯು ಕ್ಲೈಮ್ಯಾಕ್ಸ್ ಹಂತ ತಲುಪಿದೆ. ರವಿವಾರ ಇಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ 1998ರ ಚಾಂಪಿಯನ್ ಫ್ರಾನ್ಸ್ ತಂಡ ಇದೇ ಮೊದಲ ಬಾರಿ ಫೈನಲ್‌ಗೆ ತಲುಪಿರುವ ಕ್ರೊಯೇಶಿಯ ವಿರುದ್ಧ ಪ್ರತಿಷ್ಠಿತ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. ಲುಝ್ನಿಕಿ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯದಲ್ಲಿ ಕ್ರೊಯೇಶಿಯ ತಂಡ ಚೊಚ್ಚಲ ಪ್ರಶಸ್ತಿಯ ಗುರಿಯೊಂದಿಗೆ ಕಣಕ್ಕಿಳಿ ಯಲಿದೆ. 20 ವರ್ಷಗಳ ಹಿಂದೆ ತವರು ಪಟ್ಟಣ ಪ್ಯಾರಿಸ್‌ನಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡಿರುವ ಫ್ರಾನ್ಸ್ ಎರಡನೇ ಬಾರಿ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕುವ ಅದಮ್ಯ ವಿಶ್ವಾಸದಲ್ಲಿದೆ. ಫ್ರಾನ್ಸ್ ಮೂರನೇ ಬಾರಿ ವಿಶ್ವಕಪ್ ಫೈನಲ್‌ನಲ್ಲಿ ಆಡುತ್ತಿದೆ. 1998ರಲ್ಲಿ ವಿಶ್ವಕಪ್ ಜಯಿಸಿದ್ದ ಫ್ರಾನ್ಸ್ 2006ರಲ್ಲಿ ಫೈನಲ್‌ನಲ್ಲಿ ಇಟಲಿ ವಿರುದ್ಧ ಸೋತು ಎರಡನೇ ಸ್ಥಾನ ಪಡೆದಿತ್ತು. ಇದೀಗ 2ನೇ ಬಾರಿ ವಿಶ್ವಕಪ್ ಜಯಿಸುವ ಮೂಲಕ ಅರ್ಜೆಂಟೀನ ಹಾಗೂ ಉರುಗ್ವೆ ತಂಡಗಳ ಸಾಧನೆ ಸರಿಗಟ್ಟಲು ಎದುರು ನೋಡುತ್ತಿದೆ. ಮಂಗಳವಾರ ನಡೆದ ಮೊದಲ ಸೆಮಿ ಫೈನಲ್‌ನಲ್ಲಿ ಬೆಲ್ಜಿಯಂ ತಂಡವನ್ನು 1-0 ಅಂತರದಿಂದ ಸೋಲಿಸಿದ್ದ ಫ್ರಾನ್ಸ್ ತಂಡ ಫೈನಲ್‌ಗೆ ತಲುಪಿತ್ತು. ಸ್ಯಾಮುಯೆಲ್ ಉಮ್ಟಿಟಿ ಗಳಿಸಿದ ಏಕೈಕ ಗೋಲು ಫ್ರಾನ್ಸ್‌ಗೆ ಫೈನಲ್ ತಲುಪಲು ನೆರವಾಗಿತ್ತು.

ಇದೇ ವೇಳೆ, ಕ್ರೊಯೇಶಿಯ ತಂಡ ಮತ್ತೊಂದು ಸೆಮಿ ಫೈನಲ್‌ನಲ್ಲಿ ಹೆಚ್ಚುವರಿ ಸಮಯದಲ್ಲಿ ಇಂಗ್ಲೆಂಡ್ ತಂಡವನ್ನು 2-1 ಅಂತರದಲ್ಲಿ ಮಣಿಸಿ ಮೊತ್ತ ಮೊದಲ ಬಾರಿ ಫೈನಲ್‌ಗೆ ತಲುಪಿತ್ತು.

    ಲಿಯೊನೆಲ್ ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ನೇಮರ್‌ರಂತಹ ಸ್ಟಾರ್ ಆಟಗಾರರು ತವರಿಗೆ ವಾಪಸಾಗಿದ್ದಾರೆ. ಪ್ರಶಸ್ತಿ ಗೆಲ್ಲುವ ವಿಶ್ವಾಸ ಮೂಡಿಸಿದ್ದ ಜರ್ಮನಿ, ಬ್ರೆಝಿಲ್ ಹಾಗೂ ಅರ್ಜೆಂಟೀನ ತಂಡಗಳು ಈಗಾಗಲೇ ಗಂಟುಮೂಟೆ ಕಟ್ಟಿವೆ. 2010ರಲ್ಲಿ ಸ್ಪೇನ್ ತಂಡ ಹಾಲೆಂಡ್ ವಿರುದ್ಧ ಜಯ ಸಾಧಿಸಿದ ಬಳಿಕ ಬ್ರೆಝಿಲ್, ಜರ್ಮನಿ, ಇಟಲಿ ಅಥವಾ ಅರ್ಜೆಂಟೀನ ಫೈನಲ್‌ಗೆ ತಲುಪಲು ವಿಫಲವಾಗಿವೆ. ಸ್ಟಾರ್ ಆಟಗಾರರಿರುವ ತಂಡದ ಬದಲಿಗೆ ಯುವ ಆಟಗಾರರಿರುವ ಫ್ರಾನ್ಸ್ ಹಾಗೂ ಕ್ರೊಯೇಶಿಯ ತಂಡಗಳು ಫೈನಲ್‌ಗೆ ತಲುಪಿದ್ದು ಈ ಬಾರಿಯ ವಿಶೇಷ. ಫ್ರಾನ್ಸ್ ತಂಡದಲ್ಲಿ ಕೈಲ್ಯಾನ್ ಬಾಪೆ ಹಾಗೂ ಆ್ಯಂಟೊನಿ ಗ್ರೀಝ್‌ಮನ್ ಸ್ಟಾರ್ ಆಟಗಾರರಾಗಿದ್ದಾರೆ. ಫ್ರಾನ್ಸ್ ಕೋಚ್ ಡಿಡಿಯರ್ ಡೆಸ್‌ಚಾಂಪ್ಸ್ ಆಟಗಾರ ಹಾಗೂ ಕೋಚ್ ಆಗಿ ವಿಶ್ವಕಪ್ ಜಯಿಸಿದ ಹೆಗ್ಗಳಿಕೆಗೆ ಪಾತ್ರರಾಗಲು ಎದುರು ನೋಡುತ್ತಿದ್ದಾರೆ. ಫ್ರಾನ್ಸ್ 1998ರಲ್ಲಿ ವಿಶ್ವಕಪ್ ಗೆದ್ದಾಗ ಡೆಸ್‌ಚಾಂಪ್ಸ್ ತಂಡದ ನಾಯಕನಾಗಿದ್ದರು.

 ಝ್ಲಟ್ಕೊ ಡಾಲಿಕ್ ಕೇವಲ 9 ತಿಂಗಳ ಹಿಂದೆ ಕ್ರೊಯೇಶಿಯ ತಂಡದ ಕೋಚ್ ಆಗಿ ನೇಮಕಗೊಂಡಿದ್ದರು. ಕೇವಲ 4.17 ಮಿಲಿಯನ್(ಅಂದಾಜು 42 ಲಕ್ಷ)ಜನಸಂಖ್ಯೆ ಇರುವ ಕ್ರೊಯೇಶಿಯ ವಿಶ್ವಕಪ್‌ನಲ್ಲಿ ಫೈನಲ್‌ಗೆ ತಲುಪಿರುವ ಅತ್ಯಂತ ಪುಟ್ಟ ರಾಷ್ಟ್ರ ಎನಿಸಿಕೊಂಡಿದೆ. ಆದರೆ 1930ರಲ್ಲಿ ನಡೆದ ಚೊಚ್ಚಲ ವಿಶ್ವಕಪ್ ಜಯಿಸಿರುವ ಉರುಗ್ವೆ ತಂಡಕ್ಕೆ ಎಲ್ಲ ಗೌರವ ಸಲ್ಲಲಿದೆ. ಉರುಗ್ವೆ ವಿಶ್ವಕಪ್ ಗೆದ್ದಾಗ ಆ ದೇಶದ ಜನಸಂಖ್ಯೆ ಸುಮಾರು 1.07 ಮಿಲಿಯನ್ ಇತ್ತು. ಫಿಫಾ ವಿಶ್ವ ರ್ಯಾಂಕಿಂಗ್‌ನಲ್ಲಿ 20ನೇ ಸ್ಥಾನದಲ್ಲಿರುವ ಕ್ರೊಯೇಶಿಯಾ ವಿಶ್ವಕಪ್ ಫೈನಲ್ ತಲುಪಿರುವ ಅತ್ಯಂತ ಕೆಳ ರ್ಯಾಂಕಿನ ತಂಡವಾಗಿದೆ. 1998ರ ವಿಶ್ವಕಪ್‌ನಲ್ಲಿ ಮೂರನೇ ಸ್ಥಾನ ಪಡೆದಿರುವುದು ಕ್ರೊಯೇಶಿಯದ ಇದುವರೆಗಿನ ಉತ್ತಮ ಸಾಧನೆಯಾಗಿದೆ. 20 ವರ್ಷಗಳ ಹಿಂದೆ ಕ್ರೊಯೇಶಿಯದ ಗೆಲುವಿನ ಓಟಕ್ಕೆ ಫ್ರಾನ್ಸ್ ತಂಡವೇ ಕಡಿವಾಣ ಹಾಕಿತ್ತು. ಪ್ರಸ್ತುತ ಟೂರ್ನಿಯಲ್ಲಿ ಕ್ರೊಯೇಶಿಯ ಸತತ 6 ಜಯ ಸಾಧಿಸಿ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿದೆ. ಕ್ರೊಯೇಶಿಯ ಎಲ್ಲ 3 ಗ್ರೂಪ್ ಪಂದ್ಯಗಳನ್ನು ಗೆದ್ದುಕೊಂಡಿದೆ. ನಾಕೌಟ್ ಸುತ್ತಿನಲ್ಲಿ ಡೆನ್ಮಾರ್ಕ್ ಹಾಗೂ ರಶ್ಯವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲಿಸಿದೆ. ಸೆಮಿ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಹೆಚ್ಚುವರಿ ಸಮಯದಲ್ಲಿ ಸದೆ ಬಡಿದಿದೆ. ಸ್ವತಂತ್ರ ರಾಷ್ಟ್ರವಾದ ಬಳಿಕ ವಿಶ್ವಕಪ್‌ನಲ್ಲಿ ಮೊದಲ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ರವಿವಾರ ನಡೆಯಲಿರುವ ಫ್ರಾನ್ಸ್ ಹಾಗೂ ಕ್ರೊಯೇಶಿಯ ನಡುವಿನ ವಿಶ್ವಕಪ್ ಫೈನಲ್ 20 ವರ್ಷಗಳ ಹಿಂದಿನ ಪಂದ್ಯವನ್ನು ನೆನಪಿಸುತ್ತಿದೆ. ಉಭಯ ತಂಡಗಳು 1998ರ ವಿಶ್ವಕಪ್‌ನ ಸೆಮಿ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಆಗ ಫ್ರಾನ್ಸ್ ಆತಿಥೇಯ ತಂಡವಾಗಿತ್ತು. 1998ರಲ್ಲಿ ಕ್ರೊಯೇಶಿಯ ಅನಿರೀಕ್ಷಿತ ಪ್ರದರ್ಶನ ನೀಡಿ ಸೆಮಿ ಫೈನಲ್‌ಗೆ ತಲುಪಿತ್ತು. 1991ರಲ್ಲಿ ಸ್ವತಂತ್ರ ರಾಷ್ಟ್ರವಾದ ಬಳಿಕ ಯಶಸ್ವಿ ಪ್ರದರ್ಶನ ನೀಡಿತ್ತು. ಆ ವಿಶ್ವಕಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಕ್ರೊಯೇಶಿಯ ತಂಡ ಜರ್ಮನಿಯನ್ನು 3-0 ಅಂತರದಿಂದ ಸೋಲಿಸಿತ್ತು. ಈ ವರ್ಷದ ಟೂರ್ನಿಯ ಗ್ರೂಪ್ ಹಂತದಲ್ಲಿ ಪ್ರಶಸ್ತಿ ಫೇವರಿಟ್ ಅರ್ಜೆಂಟೀನ ತಂಡವನ್ನು ಕೂಡ 3-0 ಅಂತರದಿಂದ ಸೋಲಿಸಿದೆ. 1998ರಲ್ಲಿ ಕೂಡ ಫ್ರಾನ್ಸ್ ತಂಡ ಕ್ರೊಯೇಶಿಯವನ್ನು ಎದುರಿಸುವ ತನಕ ಕೇವಲ ಒಂದು ಗೋಲು ಬಿಟ್ಟುಕೊಟ್ಟಿತ್ತು. ಆಗ ತಂಡದಲ್ಲಿ ಝೈನುದ್ದೀನ್ ಝೈದಾನ್ ಹಾಗೂ ಥಿಯರಿ ಹೆನ್ರಿ ಅವರಂತಹ ಆಟಗಾರರಿದ್ದರು. 2006ರ ವಿಶ್ವಕಪ್ ಫೈನಲ್‌ನಲ್ಲಿ ಇಟಲಿ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಸೋತಿದ್ದ ಫ್ರಾನ್ಸ್ ತಂಡ 2016ರಲ್ಲಿ ಸ್ವದೇಶದಲ್ಲಿ ನಡೆದಿದ್ದ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ತಲುಪಿತ್ತು. ಆದರೆ, ಆಗ ಪ್ರಶಸ್ತಿ ಫೇವರಿಟ್ ಆಗಿದ್ದ ಫ್ರಾನ್ಸ್ ತಂಡ ಪೋರ್ಚುಗಲ್ ವಿರುದ್ಧ ಸೋಲುಂಡಿತ್ತು. ಕ್ರೊಯೇಶಿಯ ನಾಯಕ ಹಾಗೂ ಮಿಡ್ ಫೀಲ್ಡರ್ ಲುಕಾ ಮೊಡ್ರಿಕ್ ಅರ್ಜೆಂಟೀನ ವಿರುದ್ಧ ಗ್ರೂಪ್ ಹಂತದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಪಂದ್ಯಶ್ರೇಷ್ಠ ಗೌರವ ಪಡೆದಿದ್ದು, ಪ್ರಸ್ತುತ ಟೂರ್ನಿಯಲ್ಲಿ ಶ್ಲಾಘನಾರ್ಹ ಪ್ರದರ್ಶನ ನೀಡುತ್ತಿದ್ದಾರೆ.

ಅರ್ಜೆಂಟೀನ ವಿರುದ್ಧ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಅವಳಿ ಗೋಲು ಬಾರಿಸಿ ತನ್ನ ಸಾಮರ್ಥ್ಯವನ್ನು ವಿಶ್ವದ ಮುಂದೆ ತೆರೆದಿಟ್ಟಿರುವ 19ರ ಹರೆಯದ ಫ್ರಾನ್ಸ್ ಫಾರ್ವರ್ಡ್ ಆಟಗಾರ ಬಾಪೆ ಬ್ರೆಝಿಲ್ ಲೆಜೆಂಡ್ ಪೀಲೆ ಬಳಿಕ ವಿಶ್ವಕಪ್ ಫೈನಲ್‌ನಲ್ಲಿ ಗೋಲು ಬಾರಿಸಿದ ಎರಡನೇ ಯುವ ಆಟಗಾರ ಎನಿಸಿಕೊಳ್ಳುವತ್ತ ಚಿತ್ತವಿರಿಸಿದ್ದಾರೆ. ಪೀಲೆ 1958ರ ಫೈನಲ್‌ನಲ್ಲಿ ಗೋಲು ಬಾರಿಸಿದ ಕಿರಿಯ ಆಟಗಾರನಾಗಿದ್ದಾರೆ. ಫ್ರಾನ್ಸ್‌ನ ಇನ್ನೋರ್ವ ಆಟಗಾರ ಆ್ಯಂಟೊನಿ ಗ್ರೀಝ್‌ಮನ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಬಾಪೆ ಹಾಗೂ ಗ್ರೀಝ್‌ಮನ್ ಟೂರ್ನಿಯಲ್ಲಿ ತಲಾ 3 ಗೋಲುಗಳನ್ನು ಬಾರಿಸಿದ್ದು, ಫೈನಲ್ ಪಂದ್ಯದಲ್ಲಿ ಒಂದು ವೇಳೆ ಹ್ಯಾಟ್ರಿಕ್ ಗೋಲು ಬಾರಿಸಿದರೆ ಒಟ್ಟು ಆರು ಗೋಲು ಗಳಿಸಿ ಗೋಲ್ಡನ್ ಬೂಟ್ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರುವ ಇಂಗ್ಲೆಂಡ್‌ನ ಹ್ಯಾರಿ ಕೇನ್‌ರನ್ನು ಹಿಂದಿಕ್ಕಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News