ಏಕದಿನ ಕ್ರಿಕೆಟ್‌: 10,000 ರನ್ ಕ್ಲಬ್‌ಗೆ ಧೋನಿ ಸೇರ್ಪಡೆ

Update: 2018-07-15 05:08 GMT

ಲಾರ್ಡ್ಸ್, ಜು.15: ಭಾರತದ ಮಾಜಿ ನಾಯಕ ಎಂ.ಎಸ್. ಧೋನಿ ಏಕದಿನ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿದ ಭಾರತದ ನಾಲ್ಕನೇ ಹಾಗೂ ವಿಶ್ವದ 12ನೇ ಆಟಗಾರನೆಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಇಂಗ್ಲೆಂಡ್ ವಿರುದ್ದ ಶನಿವಾರ ರಾತ್ರಿ ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯದ ವೇಳೆ ಧೋನಿ 10,000 ರನ್ ಕ್ಲಬ್‌ಗೆ ಸೇರ್ಪಡೆಯಾದರು. ಧೋನಿಗೆ ಎರಡನೇ ಪಂದ್ಯದಲ್ಲಿ 10,000 ರನ್ ಪೂರೈಸಲು 33 ರನ್ ಅಗತ್ಯವಿತ್ತು.

ಇಂಗ್ಲೆಂಡ್ ವೇಗದ ಬೌಲರ್ ಲಿಯಾಮ್ ಪ್ಲಂಕಟ್ ಎಸೆದ 43ನೇ ಓವರ್‌ನಲ್ಲಿ ಒಂದು ರನ್ ಗಳಿಸಿದ ಧೋನಿ 10 ಸಾವಿರ ರನ್ ಮೈಲುಗಲ್ಲು ತಲುಪಿದರು.

ವೃತ್ತಿಜೀವನದಲ್ಲಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಬ್ಯಾಟ್ಸ್‌ಮನ್ 10,000 ರನ್ ಪೂರೈಸುವುದು ಮಹತ್ವದ ಸಾಧನೆಯಾಗುತ್ತದೆ. ಹೆಚ್ಚಾಗಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಧೋನಿ ಅವರು ಸಚಿನ್ ತೆಂಡುಲ್ಕರ್, ಸೌರವ್ ಗಂಗುಲಿ ಹಾಗೂ ರಾಹುಲ್ ದ್ರಾವಿಡ್ ನಂತರ 10,000 ರನ್ ಪೂರೈಸಿದ ಭಾರತದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಶ್ರೀಲಂಕಾದ ಕುಮಾರ ಸಂಗಕ್ಕರ (14,234 ರನ್)ಬಳಿಕ ಈ ಸಾಧನೆ ಮಾಡಿರುವ ವಿಶ್ವದ ಎರಡನೇ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಆಗಿದ್ದಾರೆ.

ತಿಲಕರತ್ನೆ ದಿಲ್ಶನ್(38 ವರ್ಷ) ಹಾಗೂ ಬ್ರಿಯಾನ್ ಲಾರಾ(37 ವರ್ಷ)ನಂತರ 10 ಸಾವಿರ ರನ್ ಗಳಿಸಿದ ವಿಶ್ವದ ಹಿರಿಯ ಬ್ಯಾಟ್ಸ್‌ಮನ್ ಧೋನಿ(37 ವರ್ಷ).

320 ಪಂದ್ಯಗಳ 273ನೇ ಇನಿಂಗ್ಸ್‌ನಲ್ಲಿ 10,000 ರನ್ ಪೂರೈಸಿರುವ ಧೋನಿ ಈ ಮೈಲುಗಲ್ಲು ತಲುಪಿರುವ ವಿಶ್ವದ 12ನೇ ಅಂತರ್‌ರಾಷ್ಟ್ರೀಯ ಕ್ರಿಕೆಟಿಗನಾಗಿದ್ದಾರೆ. ದಿಲ್ಶನ್, ಕುಮಾರ ಸಂಗಕ್ಕರ, ಸನತ್ ಜಯಸೂರ್ಯ, ಮಹೇಲ ಜಯವರ್ಧನೆ(ಶ್ರೀಲಂಕಾ), ರಿಕಿ ಪಾಂಟಿಂಗ್(ಆಸ್ಟ್ರೇಲಿಯ), ಜಾಕ್ ಕಾಲಿಸ್(ದ.ಆಫ್ರಿಕ),ಬ್ರಿಯಾನ್ ಲಾರಾ(ವೆಸ್ಟ್‌ಇಂಡೀಸ್) ಹಾಗೂ ಇಂಝಮಾಮ್ ವುಲ್‌ಹಕ್(ಪಾಕ್)ಏಕದಿನ ಇತಿಹಾಸದಲ್ಲಿ 10,000 ರನ್ ಪೂರೈಸಿದ ವಿಶ್ವದ ದಾಂಡಿಗರಾಗಿದ್ದಾರೆ.

ಕಡಿಮೆ ಇನಿಂಗ್ಸ್‌ನಲ್ಲಿ 10 ಸಾವಿರ ಏಕದಿನ ರನ್ ಪೂರೈಸಿದ ದಾಂಡಿಗರ ಪಟ್ಟಿಯಲ್ಲಿ ಧೋನಿ ಐದನೇ ಸ್ಥಾನದಲ್ಲಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ 2001ರಲ್ಲಿ ಇಂದೋರ್‌ನಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧ ಪಂದ್ಯದ ವೇಳೆ ಅತ್ಯಂತ ವೇಗವಾಗಿ(259 ಇನಿಂಗ್ಸ್)10,000 ರನ್ ಪೂರೈಸಿ ದಾಖಲೆ ನಿರ್ಮಿಸಿದ್ದರು.

ಸಚಿನ್ ತೆಂಡುಲ್ಕರ್(259)ಬಳಿಕ ಸೌರವ್ ಗಂಗುಲಿ(263), ರಿಕಿ ಪಾಂಟಿಂಗ್(266) ಹಾಗೂ ಜಾಕ್ ಕಾಲಿಸ್(272)ಕಡಿಮೆ ಇನಿಂಗ್ಸ್‌ನಲ್ಲಿ 10 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News