ಬಿದ್ದು ಸಿಕ್ಕಿದ 50 ಸಾವಿರ ರೂ.ಗಳನ್ನು ಹಿಂದಿರುಗಿಸಿದ 7 ವರ್ಷದ ಯಾಸೀನ್

Update: 2018-07-15 14:09 GMT

ಈರೋಡ್, ಜು.15: ಕಳೆದ ವಾರ ತನಗೆ ಸಿಕ್ಕಿದ್ದ 50 ಸಾವಿರ ರೂಪಾಯಿಯನ್ನು ಶಾಲಾ ಅಧಿಕಾರಿಗಳ ಮೂಲಕ ಪೊಲೀಸರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಏಳು ವರ್ಷದ ಬಾಲಕ ಯಾಸೀನ್‍ಗೆ ಶ್ಲಾಘನೆಯ ಮಹಾಪೂರವೇ ಬಂದಿದೆ. ಆದರೆ ರವಿವಾರ ಬಾಲಕನ ಕುಟುಂಬಕ್ಕೇ ಅಚ್ಚರಿ ಎನಿಸುವ ಕೊಡುಗೆ ಬಂದಿದೆ. ಅದು ಸೂಪರ್‍ಸ್ಟಾರ್ ರಜನಿಕಾಂತ್ ಅವರಿಂದ.

ಯಾಸೀನ್‍ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಮಾಧ್ಯಮದ ಜತೆ ಮಾತನಾಡಿದ ರಜನಿಕಾಂತ್, ಬಾಲಕನ ಪ್ರಾಮಾಣಿಕತೆಯನ್ನು ಶ್ಲಾಘಿಸಿದ್ದು ಮಾತ್ರವಲ್ಲದೇ, ಆತನ ಶಿಕ್ಷಣವನ್ನು ಸ್ವತಃ ತಾವು ಪ್ರಾಯೋಜಿಸುವುದಾಗಿ ಭರವಸೆ ನೀಡಿದರು.

"ಸ್ವಲ್ಪ ಹಣಕ್ಕಾಗಿ ಜನ ವಂಚಿಸುವ, ಕಳ್ಳತನ ಮಾಡುವ ಹಾಗೂ ಕೊಲೆ ಮಾಡುವ ಈ ಯುಗದಲ್ಲಿ, ಇದು ನನ್ನ ಹಣವಲ್ಲ ಎಂದು ಹಸ್ತಾಂತರಿಸುವ ಮೂಲಕ ಬಾಲಕ ಯಾಸೀನ್‍ ಪ್ರಾಮಾಣಿಕತೆ ಮೆರೆದಿದ್ದಾನೆ. ಇದು ನಿಜವಾದ ಪ್ರಾಮಾಣಿಕತೆ. ಇದು ದೊಡ್ಡ ಗುಣ" ಎಂದು ತಮ್ಮ ನಿವಾಸದ ಮುಂದೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.

ಯಾಸೀನ್‍ ಅವರ ಪೋಷಕರನ್ನೂ ರಜನಿ ಹೊಗಳಿದರು. "ಬಾಲಕ ಈಗ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾನೆ. ಅಲ್ಲಿ ಓದು ಮುಂದುವರಿಸಲಿ. ಇದಾದ ಬಳಿಕ, ಆತ ಏನು ಓದಲು ಅಪೇಕ್ಷಿಸುತ್ತಾನೋ ಅದನ್ನು ನಾನು ಪ್ರಾಯೋಜಿಸುತ್ತೇನೆ. ಈತ ಪ್ರತಿಯೊಬ್ಬರಿಗೂ, ಪ್ರತಿಯೊಬ್ಬ ಮಗುವಿಗೂ ಸ್ಫೂರ್ತಿ" ಎಂದು ಕೊಂಡಾಡಿದರು.

ಪೊಯೆಸ್‍ ಗಾರ್ಡನ್‍ಗೆ ಯಾಸಿನ್ ಕುಟುಂಬವನ್ನು ಆಹ್ವಾನಿಸಿದ ರಜನಿ ಕೆಲ ಸಮಯವನ್ನು ಅವರ ಜತೆ ಕಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News