ಮೋದಿಯ ಅಸ್ವಸ್ಥ ಮನೋಸ್ಥಿತಿ ದೇಶಕ್ಕೆ ಕಳವಳಕಾರಿ: ಕಾಂಗ್ರೆಸ್

Update: 2018-07-15 14:41 GMT

ಹೊಸದಿಲ್ಲಿ, ಜು.15: ಕಾಂಗ್ರೆಸ್ ಪಕ್ಷ ಕೇವಲ ಮುಸ್ಲಿಮ್ ಪುರುಷರ ಹಿತಾಸಕ್ತಿ ಕಾಯುವ ಸಲುವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿಕೆ ನೀಡಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ಪಕ್ಷ ಕಟುವಾಗಿ ಟೀಕಿಸಿದೆ.

"ಮೋದಿಯವರ ಈ ಅಸ್ವಸ್ಥ ಮನೋಸ್ಥಿತಿ, ದೇಶವೇ ಕಳವಳಪಡುವ ವಿಚಾರ. ಐತಿಹಾಸಿಕ ಹಾಗೂ ಅಂಕಿ ಅಂಶಗಳ ಆಧಾರದಲ್ಲಿ ನೋಡಿದರೂ ಮೋದಿ ಹೇಳಿಕೆಗಳು ಶುದ್ಧ ಸುಳ್ಳು" ಎಂದು ಪಕ್ಷದ ಹಿರಿಯ ಮುಖಂಡ ಆನಂದ್ ಶರ್ಮಾ ಸುದ್ದಿಗೋಷ್ಠಿಯಲ್ಲಿ ಹೇಳಿದರು.

"ಕಾಂಗ್ರೆಸ್ ಪಕ್ಷ ಪ್ರತಿಯೊಬ್ಬರಿಗೂ, ದೇಶದ ಎಲ್ಲ ಧರ್ಮಕ್ಕೂ ಸೇರಿದ್ದು. ಇದಕ್ಕೆ ಮೋದಿಯವರ ಹಾಗೂ ಅವರ ಸಿದ್ಧಾಂತದ ಪ್ರಮಾಣಪತ್ರ ಬೇಕಿಲ್ಲ" ಎಂದವರು ಟೀಕಿಸಿದರು.

"ಮೋದಿ ಇಡೀ ದೇಶದ ಪ್ರಧಾನಿ. ಬಿಜೆಪಿಯ ಪ್ರಧಾನಿಯಲ್ಲ. ಅವರ ಪ್ರತಿಸ್ಪರ್ಧಿ ಪಕ್ಷವಾದ ಕಾಂಗ್ರೆಸ್, ರಾಷ್ಟ್ರೀಯ ಚಳವಳಿ ಮತ್ತು ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿತ್ತು. ಇದನ್ನು ಮುಸ್ಲಿಮರ ಪಕ್ಷ ಎಂದು ಕರೆಯುವುದು ಅವರ ಹುದ್ದೆಗೆ ತಕ್ಕುದಾದ ಹೇಳಿಕೆಯಲ್ಲ. ಅವರಿಗೆ ಇತಿಹಾಸದ ಪ್ರಜ್ಞೆ ಇಲ್ಲ. ಅವರು ತಮ್ಮ ಇತಿಹಾಸವನ್ನು ತಾವೇ ಬರೆಯುತ್ತಿದ್ದಾರೆ" ಎಂದು ಲೇವಡಿ ಮಾಡಿದರು.

"ಪಕ್ಷದ ಅಧ್ಯಕ್ಷರಾಗಿ ಮಹಾತ್ಮಗಾಂಧಿ, ಜವಾಹರಲಾಲ್ ನೆಹರೂ, ಸರ್ದಾರ್ ಪಟೇಲ್, ಲಾಲಾ ಲಜಪತ್‍ರಾಯ್, ಮೌಲಾನಾ ಆಝಾದ್ ಅವರಂಥ ಶ್ರೇಷ್ಠರು ಕಾರ್ಯನಿರ್ವಹಿಸಿದ್ದಾರೆ ಎನ್ನುವುದನ್ನು ಅವರಿಗೆ ನೆನಪಿಸಬೇಕು. ಅವರು ತಮ್ಮ ಕಚೇರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರ ಪಟ್ಟಿಯನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಆಗ ಬಹುಶಃ ತಪ್ಪು ಹೇಳಿಕೆ ನೀಡುವ ಚಟ ಬಿಡಬಹುದು" ಎಂದು ಚುಚ್ಚಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News