ಮಳೆಗಾಲದ ಅಧಿವೇಶನದಲ್ಲಿ ಕೋಮು ಹಿಂಸಾಚಾರ, ಗುಂಪು ಹತ್ಯೆ ಬಗ್ಗೆ ಪ್ರಧಾನಿಗೆ ಪ್ರಶ್ನೆ

Update: 2018-07-15 17:20 GMT

ಹೊಸದಿಲ್ಲಿ, ಜು. 15: ದೇಶದಲ್ಲಿ ನಡೆಯುತ್ತಿರುವ ಗುಂಪಿನಿಂದ ಥಳಿಸಿ ಹತ್ಯೆ ಹಾಗೂ ಕೋಮು ಹಿಂಸಾಚಾರದ ಘಟನೆಗಳ ಬಗ್ಗೆ ಸಂಸತ್‌ನಲ್ಲಿ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಎಡಪಕ್ಷಗಳು ನಿರ್ಧರಿಸಿವೆ ಹಾಗೂ ಮುಂದಿನ ಮಳೆಗಾಲದ ಅಧಿವೇಶನದಲ್ಲಿ ಪ್ರತಿಕ್ರಿಯಿಸುವಂತೆ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.

ದೇಶದಲ್ಲಿ ಇತ್ತೀಚೆಗೆ ನಡೆದ ಕೋಮು ಹಿಂಸಾಚಾರ ಹಾಗೂ ಗುಂಪಿನಿಂದ ಥಳಿಸಿ ಹತ್ಯೆ ಘಟನೆಗಳಿಂದ ಹಲವರು ಜೀವ ಕಳೆದುಕೊಂಡಿದ್ದಾರೆ. ಆರ್‌ಎಸ್‌ಎಸ್ ಹಾಗೂ ಬಿಜೆಪಿಯ ವಿಭಜಕ ರಾಜಕೀಯವನ್ನು ನಿಯಂತ್ರಿಸಲು ಸರಕಾರ ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಪ್ರಧಾನಿ ಅವರು ಮಳೆಗಾಲದ ಅಧಿವೇಶನದಲ್ಲಿ ತಿಳಿಸಬೇಕು ಎಂದು ಸಿಪಿಎಂ ಹಾಗೂ ಸಿಪಿಐ ಹೇಳಿದೆ. ಸಂಸತ್ತಿನ ಎರಡು ಸದನಗಳಲ್ಲಿ ಗುಂಪಿನಿಂದ ಥಳಿಸಿ ಹತ್ಯೆ ಹಾಗೂ ಕೋಮ ಹಿಂಸಾಚಾರದ ಬಗ್ಗೆ ನಾವು ಧ್ವನಿ ಎತ್ತಲಿದ್ದೇವೆ ಎಂದು ಸಿಪಿಎಂನ ಲೋಕಸಭಾ ಸದಸ್ಯ ಮುಹಮ್ಮದ್ ಸಲೀಮ್ ಹೇಳಿದ್ದಾರೆ. ಸರಕಾರ ‘ವಿಭಜಕ ನೀತಿ’ಗಳಿಗೆ ಬೆಂಬಲ ನೀಡುತ್ತಿದೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ರಾಜಕೀಯ ಹಿಂಸಾಚಾರವನ್ನು ಹರಡುತ್ತಿದೆ ಎಂದು ಹೇಳಿರುವ ಅವರು ಈ ಬಗ್ಗೆ ಚರ್ಚೆ ನಡೆಸುವಂತೆ ಪಕ್ಷ ಆಗ್ರಹಿಸುತ್ತದೆ ಎಂದರು. ‘‘ನಾವು ಪ್ರಧಾನಿ ಅವರಿಂದ ನಿರ್ದಿಷ್ಟ ಪ್ರಶ್ನೆಗೆಳಿಗೆ ಉತ್ತರ ಆಗ್ರಹಿಸಲಿದ್ದೇವೆ. ಅಪರಾಧ ಹಾಗೂ ದಲಿತರ ಮೇಲಿನ ಹಲ್ಲೆಯಂತಹ ಘಟನೆಗಳಲ್ಲಿ ಏರಿಕೆಯಾಗಲು ಆರ್‌ಎಸ್‌ಎಸ್ -ಬಿಜೆಪಿ ಹಾಗೂ ಇತರ ಬಲಪಂಥೀಯ ಸಂಘಟನೆಗಳು ಕಾರಣ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಾಯ್ದೆ ದುರ್ಬಲವಾಗುತ್ತಿರುವ ಬಗ್ಗೆ ಮೋದಿ ಅವರು ಉತ್ತರಿಸಬೇಕು’’ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News