ಅಫ್ಘಾನ್: ನಾಗರಿಕರ ಸಾವುಗಳ ಸಂಖ್ಯೆಯಲ್ಲಿ ದಾಖಲೆಯ ಏರಿಕೆ: ವಿಶ್ವಸಂಸ್ಥೆ

Update: 2018-07-15 17:42 GMT

ಕಾಬೂಲ್, ಜು. 15: 2018ರ ಮೊದಲ ಆರು ತಿಂಗಳಲ್ಲಿ ಅಫ್ಘಾನಿಸ್ತಾನ ಯುದ್ಧದಲ್ಲಿ ಮೃತಪಟ್ಟ ನಾಗರಿಕರ ಸಂಖ್ಯೆಯಲ್ಲಿ ದಾಖಲೆಯ ಏರಿಕೆಯಾಗಿದೆ ಎನ್ನುವುದನ್ನು ರವಿವಾರ ವಿಶ್ವಸಂಸ್ಥೆಯ ಅಂಕಿ-ಅಂಶಗಳು ತೋರಿಸಿವೆ.

ಭಯೋತ್ಪಾದಕರು ನಡೆಸುವ ದಾಳಿಗಳು ಮತ್ತು ಆತ್ಮಹತ್ಯಾ ಬಾಂಬ್ ಸ್ಫೋಟಗಳು ಸಾವಿಗೆ ಪ್ರಮುಖ ಕಾರಣವಾಗಿವೆ.

 ಈ ಅವಧಿಯಲ್ಲಿ 1,692 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇದು ಒಂದು ವರ್ಷದ ಹಿಂದಿನ ಅವಧಿಗಿಂತ ಒಂದು ಶೇಕಡದಷ್ಟು ಹೆಚ್ಚಳವಾಗಿದೆ. ಅದೂ ಅಲ್ಲದೆ, ಅಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆಯ ಸಹಾಯಕ ನಿಯೋಗ (ಯುಎನ್‌ಎಎಮ್‌ಎ)ವು 2009ರಲ್ಲಿ ದಾಖಲೆ ಇಡಲು ಆರಂಭಿಸಿದಂದಿನಿಂದ ಆರು ತಿಂಗಳ ಅವಧಿಯ ಅತಿ ಹೆಚ್ಚಿನ ಸಾವು ಇದಾಗಿದೆ.

ಇದೇ ಅವಧಿಯಲ್ಲಿ 3,430 ಮಂದಿ ಯುದ್ಧದಲ್ಲಿ ಗಾಯಗೊಂಡಿದ್ದಾರೆ. ಇದು ಕಳೆದ ವರ್ಷದ ಇದೇ ಅವಧಿಗಿಂತ 5 ಶೇಕಡ ಕಡಿಮೆಯಾಗಿದೆ.

ಸತ್ತವರು ಮತ್ತು ಗಾಯಗೊಂಡವರು ಸೇರಿದಂತೆ, ಒಟ್ಟಾರೆ ಸಾವು-ನೋವು 5,122 ಆಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 3 ಶೇಕಡ ಕಡಿಮೆಯಾಗಿದೆ.

ಮುರಿದು ಬಿದ್ದ ಯುದ್ಧವಿರಾಮ

ಕಳೆದ ತಿಂಗಳು ರಮಝಾನ್ ತಿಂಗಳ ಅವಧಿಯಲ್ಲಿ ಭದ್ರತಾ ಪಡೆಗಳು ಮತ್ತು ತಾಲಿಬಾನ್ ನಡುವೆ ಅಭೂತಪೂರ್ವ ಯುದ್ಧವಿರಾಮ ಏರ್ಪಟ್ಟ ಹೊರತಾಗಿಯೂ, ದಾಖಲೆಯ ಸಾವುಗಳು ಸಂಭವಿಸಿವೆ.

ಈದ್‌ಗಿಂತ ಮೊದಲ ಮೂರು ದಿನಗಳ ಅವಧಿಯಲ್ಲಿ ಯುದ್ಧವಿರಾಮ ಆಚರಿಸಲಾಗಿತ್ತು. ಈ ಅವಧಿಯಲ್ಲಿ ಭದ್ರತಾ ಪಡೆಗಳು ಮತ್ತು ತಾಲಿಬಾನ್ ಉಗ್ರರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಇದು 17 ವರ್ಷಗಳ ಸಂಘರ್ಷದ ಬಳಿಕ ಶಾಂತಿ ಸಾಧ್ಯವಾಗಬಹುದು ಎಂಬ ನಿರೀಕ್ಷೆಯನ್ನೂ ಹುಟ್ಟುಹಾಕಿತ್ತು.

ಆದರೆ, ಪೂರ್ವ ಅಫ್ಘಾನಿಸ್ತಾನದ ಪ್ರಾಂತ ನಂಗರ್‌ಹಾರ್‌ನಲ್ಲಿ ಎರಡು ಭೀಕರ ಆತ್ಮಹತ್ಯಾ ದಾಳಿಗಳು ಸಂಭವಿಸಿದ ಬಳಿಕ ಯುದ್ಧವಿರಾಮ ಮುರಿದುಬಿತ್ತು. ಈ ಸ್ಫೋಟಗಳಲ್ಲಿ ಡಝನ್‌ಗಟ್ಟಳೆ ಮಂದಿ ಪ್ರಾಣ ಕಳೆದುಕೊಂಡರು.

ಈ ಸ್ಫೋಟಗಳ ಹೊಣೆಯನ್ನು ಐಸಿಸ್ ಹೊತ್ತುಕೊಂಡಿತು. ಯುದ್ಧವಿರಾಮದ ವ್ಯಾಪ್ತಿಯಲ್ಲಿ ಐಸಿಸ್ ಇರಲಿಲ್ಲ.

ಯುದ್ಧವಿರಾಮವನ್ನು ಮುಂದುವರಿಸುವ ಸರಕಾರದ ಕೋರಿಕೆಯನ್ನು ತಾಲಿಬಾನ್ ಮನ್ನಿಸಲಿಲ್ಲ. ಯುದ್ಧವನ್ನು ಕೊನೆಗೊಳಿಸಲು ಸರಕಾರದ ಜೊತೆ ಮಾತುಕತೆ ನಡೆಸಲು ನೀಡಲಾದ ಕರೆಯನ್ನು ಅದು ತಿರಸ್ಕರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News