ಸೌದಿ: ಭಾರೀ ಮಳೆ ಮುನ್ನೆಚ್ಚರಿಕೆಗಾಗಿ ಆಧುನಿಕ ವ್ಯವಸ್ಥೆ

Update: 2018-07-15 18:12 GMT

ಜಿದ್ದಾ, ಜು. 15: ಸೌದಿ ಅರೇಬಿಯದಲ್ಲಿ ಭಾರೀ ಮಳೆ ಸುರಿಯುವುದನ್ನು ಮುಂಚಿತವಾಗಿ ತಿಳಿಯಲು ಹಾಗೂ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ನೆರವು ನೀಡುವ ವ್ಯವಸ್ಥೆಯೊಂದನ್ನು ಮುನಿಸಿಪಲ್ ಮತ್ತು ಗ್ರಾಮೀಣ ವ್ಯವಹಾರಗಳ ಸಚಿವಾಲಯ ಜಾರಿಗೊಳಿಸಿದೆ.

‘ಮಾತಿರ್’ ಎಂದು ಕರೆಯಲ್ಪಡುವ ಈ ಉನ್ನತ ತಂತ್ರಜ್ಞಾನ ವ್ಯವಸ್ಥೆಯು ಅರಬ್ ವಲಯದಲ್ಲೇ ಪ್ರಥಮವಾಗಿದೆ.

ಪ್ರಾಕೃತಿಕ ವೈಪರೀತ್ಯಗಳನ್ನು, ಅದರಲ್ಲೂ ಮುಖ್ಯವಾಗಿ ಭಾರಿ ಮಳೆಯನ್ನು ಮುಂಚಿತವಾಗಿಯೇ ಗ್ರಹಿಸಲು ಹಾಗೂ ಜೀವ ಮತ್ತು ಆಸ್ತಿ-ಪಾಸ್ತಿ ನಷ್ಟವನ್ನು ನಿವಾರಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲು ನೂತನ ವ್ಯವಸ್ಥೆಯು ನೆರವು ನೀಡಲಿದೆ.

ಇದನ್ನು ಸಾಧಿಸುವುದಕ್ಕಾಗಿ ‘ಮಾತಿರ್’ ಉಪಗ್ರಹಗಳು ಮತ್ತು ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ಹವಾಮಾನ ಕೇಂದ್ರಗಳ ಮಾಹಿತಿಗಳನ್ನು ಪಡೆದುಕೊಳ್ಳಲಿದೆ. ಈ ಮಾಹಿತಿಗಳನ್ನು ಆಧಾರವಾಗಿಟ್ಟುಕೊಂಡು ಹೆಚ್ಚು ನಿಖರ ಹವಾಮಾನ ಮುನ್ನೆಚ್ಚರಿಕೆಗಳನ್ನು ನೀಡಲಾಗುವುದು.

ಮುಂಬರುವ ಐದು ದಿನಗಳ ಪ್ರವಾಹ ಅಪಾಯವನ್ನು ಗ್ರಹಿಸುವ ನಿಯಂತ್ರಣ ವ್ಯವಸ್ಥೆಯನ್ನು ‘ಮಾತಿರ್’ ಹೊಂದಿದೆ.

ಇದು ಮುಂದಿನ ಐದು ದಿನಗಳ ಅವಧಿಗೆ ಪ್ರತಿ ಗಂಟೆಗೆ ಹವಾಮಾನ ಮುನ್ನೆಚ್ಚರಿಕೆಗಳನ್ನು ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News