×
Ad

ದರೋಡೆ ಪ್ರಕರಣ: 7 ಯುವಕರ ಬಂಧನ

Update: 2018-07-16 19:01 IST

ಬೆಂಗಳೂರು, ಜು.16: ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಮಾರಕಾಸ್ತ್ರಗಳಿಂದ ಬೆದರಿಸಿ ಹಣ, ಮೊಬೈಲ್, ಚಿನ್ನಾಭರಣ ಕಳವು ಮಾಡುತ್ತಿದ್ದ ಆರೋಪದ ಪ್ರಕರಣ ಸಂಬಂಧ 7 ಯುವಕರನ್ನು ಇಲ್ಲಿನ ರಾಜಾಜಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮಧುಸೂದನ್‌ಗೌಡ(22), ಹರೀಶ್(20), ಅಭಿಷೇಕ್(20), ಪ್ರಕಾಶ್(20), ಪ್ರವೀಣ್(20), ರಾಹುಲ್(21) ಮತ್ತು ಕಿಶೋರ್(18) ಬಂಧಿತ ಆರೋಪಿಗಳೆಂದು ಪೊಲೀಸರು ಗುರುತಿಸಿದ್ದಾರೆ.

ಯುವಕರ ಗುಂಪು, ಆನ್‌ಲೈನ್ ಮೂಲಕ ಕಾರನ್ನು ಬಾಡಿಗೆಗೆ ಪಡೆದು ನಂತರ ರಾಜಾಜಿನಗರ, ಮಹಾಲಕ್ಷ್ಮೀ ಲೇಔಟ್, ಯಶವಂತಪುರ, ನಂದಿನಿ ಲೇಔಟ್ ಭಾಗಗಳಲ್ಲಿ ಸಂಚರಿಸುತ್ತ ಒಂಟಿಯಾಗಿ ಹೋಗುವ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಅಡ್ಡಗಟ್ಟಿ ದರೋಡೆ ಮಾಡಿ ಪರಾರಿಯಾಗುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಹಣವನ್ನು ತಮ್ಮ ದುಂದುವೆಚ್ಚಗಳಿಗೆ ಖರ್ಚು ಮಾಡುತ್ತಿದ್ದರು. ಈ ಗುಂಪು ದರೋಡೆ ಮಾಡಿದ್ದ ಮೊಬೈಲ್ನಿಂದಲೇ ಕಾರನ್ನು ಬುಕ್ ಮಾಡುತ್ತಿದ್ದರು ಎನ್ನಲಾಗಿದೆ. ಆರೋಪಿಗಳಿಂದ 26.84 ಲಕ್ಷ ರೂ. ಬೆಲೆಯ ಎರಡು ಐಷಾರಾಮಿ ಕಾರು, ವಿವಿಧ ಕಂಪೆನಿಯ 7 ಮೊಬೈಲ್ಗಳು, ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ಬಂಧನದಿಂದ ರಾಜಾಜಿನಗರ ಪೊಲೀಸ್ ಠಾಣೆಯ ಪ್ರಕರಣ, ಚಂದ್ರಾ ಲೇಔಟ್ ಠಾಣೆಯ ಡಕಾಯಿತಿ ಪ್ರಕರಣಗಳು ಪತ್ತೆಯಾದಂತಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News