ಮೂಲಭೂತ ಹಕ್ಕು ಉಲ್ಲಂಘನೆಯಾದರೆ ಕಾನೂನು ರದ್ದುಗೊಳಿಸುವುದು ನ್ಯಾಯಾಲಯದ ಕರ್ತವ್ಯ

Update: 2018-07-17 18:34 GMT

ಹೊಸದಿಲ್ಲಿ, ಜು. 17: ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುವುದನ್ನು ತಡೆಯಲು ಯಾವುದೇ ಕಾಯ್ದೆ ರಚನೆ, ತಿದ್ದುಪಡಿ ಮಾಡಲು ಅಥವಾ ಕಾಯ್ದೆ ರೂಪಿಸದೇ ಇರಲು ಬಹುಮತ ಹೊಂದಿದ ಸರಕಾರವನ್ನು ನಾವು ಕಾಯಲಾರೆವು ಎಂದು ಮಂಗಳವಾರ ಸುಪ್ರೀಂ ಕೋರ್ಟ್ ಹೇಳಿದೆ.

ಕಾಯಲು ಸರಕಾರ ಭಾದ್ಯತೆ ಹೊಂದಿಲ್ಲ ಹಾಗೂ ಮೂಲಭೂತ ಹಕ್ಕಿನ ಉಲ್ಲಂಘನೆ ಗಮನಕ್ಕೆ ಬಂದರೆ ನ್ಯಾಯಾಲಯ ಕ್ರಮ ಕೈಗೊಳ್ಳಲಿದೆ ಎಂದು ನ್ಯಾಯಮೂರ್ತಿಗಳಾದ ಆರ್.ಎಫ್. ನಾರಿಮನ್, ಎ.ಎಂ. ಖಾನ್ವಿಲ್ಕರ್, ಡಿ.ವೈ. ಚಂದ್ರಚೂಡ ಅವರನ್ನು ಕೂಡ ಒಳಗೊಂಡ ಪೀಠ ಹೇಳಿದೆ. ಭಾರತೀಯ ದಂಡ ಸಂಹಿತೆಯ ವಿಧಿ 377ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾದ ದೂರುಗಳ ಗುಚ್ಛವನ್ನು ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತು.

377 ವಿಧಿ ಏಡ್ಸ್ ಹರಡಲು ಕಾರಣವಾಗುತ್ತದೆ ಎಂಬ ವಾದವನ್ನು ನ್ಯಾಯಮೂರ್ತಿ ಚಂದ್ರಚೂಡ ಅವರು ತಿರಸ್ಕರಿಸಿದರು. ‘‘ಇದಕ್ಕೆ ಪ್ರತಿಯಾಗಿ ಇಂತಹ ಸಂಬಂಧಗಳನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳುವುದರಿಂದ ಜಾಗೃತಿ ಉಂಟಾಗುತ್ತದೆ ಹಾಗೂ ಸಾರ್ವಜನಿಕ ಆರೋಗ್ಯ ಕ್ಷೇತ್ರ ಸುಧಾರಿಸುತ್ತದೆ’’ ಎಂದು ಅವರು ಹೇಳಿದ್ದಾರೆ.

ತೀರ್ಪು ಕಾಯ್ದಿರಿಸಿದ ಸುಪ್ರೀಂ

ಸಮ್ಮತಿಯ ಸಲಿಂಗ ಕಾಮವನ್ನು ಅಪರಾಧೀಕರಣಗೊಳಿಸುವ ಭಾರತೀಯ ದಂಡ ಸಂಹಿತೆ ವಿಧಿ 377ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾದ ದೂರುಗಳ ಗುಚ್ಚವನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.

ಜುಲೈ 10ರಂದು ಆರಂಭವಾಗಿ ನಾಲ್ಕು ದಿನಗಳ ಕಾಲ ವಿವರವಾದ ವಿಚಾರಣೆ ನಡೆದ ಬಳಿಕ ವಿವಾದಾತ್ಮಕ ವಿಷಯದ ವಾದ -ವಿವಾದ ಆಲಿಸುವುದನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಒಳಗೊಂಡ ಐವರು ಸದಸ್ಯರ ಪೂರ್ಣಗೊಳಿಸಿದೆ.

ತಮ್ಮ ಪ್ರತಿಪಾದನೆ ಬೆಂಬಲಿಸುವ ಲಿಖಿತ ವಿವರಗಳನ್ನು ಜುಲೈ 20ರಂದು ಸಲ್ಲಿಸುವಂತೆ ಪೀಠ ಹೇಳಿದೆ. ನ್ಯಾಯಮೂರ್ತಿ ಮಿಶ್ರಾ ಅವರು ನಿವೃತ್ತರಾಗಲಿರುವ ಈ ವರ್ಷ ಅಕ್ಟೋಬರ್ 2ರಂದು ಈ ಪ್ರಕರಣದ ತೀರ್ಪು ಘೋಷಣೆಯಾಗುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News