ಧೋನಿ ಚೆಂಡು ಪಡೆದಿರುವುದು ಬೌಲಿಂಗ್ ಕೋಚ್‌ಗೆ ತೋರಿಸಲು : ಶಾಸ್ತ್ರಿ

Update: 2018-07-19 08:46 GMT

 ಹೊಸದಿಲ್ಲಿ, ಜು.19: ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದ ಕೊನೆಯಲ್ಲಿ ಅಂಪೈರ್ ಕೈಯಿಂದ ಚೆಂಡು ಪಡೆದಿರುವುದು ಬೌಲಿಂಗ್ ಕೋಚ್‌ಗೆ ತೋರಿಸಲು. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾದ ಅಗತ್ಯವಿಲ್ಲ ಎಂದು ಪ್ರಧಾನ ಕೋಚ್ ರವಿ ಶಾಸ್ತ್ರಿ ತಿಳಿಸಿದ್ದಾರೆ. 

    ಸಾಮಾನ್ಯವಾಗಿ ನಿವೃತ್ತರಾಗುವ ಕೆಲವು ಆಟಗಾರರು ಆಡಿದ ಕೊನೆಯ ಪಂದ್ಯದ ನೆನಪಿಗಾಗಿ ಆಟದ ಕೊನೆಯಲ್ಲಿ ಅಂಪೈರ್ ಕೈಯಿಂದ ಚೆಂಡು ಪಡೆದು ನಿವೃತ್ತಿಯ ಸುಳಿವು ನೀಡುತ್ತಾರೆ. ಈ ಕಾರಣದಿಂದಾಗಿ ಧೋನಿ ಚೆಂಡು ಪಡೆದ ವಿಚಾರ ಚರ್ಚೆಗೆ ಕಾರಣವಾಗಿತ್ತು. ಟೆಸ್ಟ್ ಕ್ರಿಕೆಟ್‌ಗೆ ದಿಢೀರನೇ ನಿವೃತ್ತಿ ಘೋಷಿಸಿದ್ದ ಧೋನಿ ಅವರು ಇದೀಗ ಸೀಮಿತ ಓವರ್‌ಗಳ ಕ್ರಿಕೆಟ್‌ನಿಂದಲೂ ನಿವೃತ್ತರಾಗುತ್ತಾರೋ ಎಂಬ ಸಂಶಯ ಉಂಟಾಗಿತ್ತು. ಪಂದ್ಯದ ಕೊನೆಯಲ್ಲಿ ಅಂಪೈರ್ ಕೈಯಿಂದ ಧೋನಿ ಚೆಂಡು ಪಡೆದ ಘಟನೆ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು.
  ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿರುವ ಶಾಸ್ತ್ರಿ ‘‘ ಧೋನಿ ಚೆಂಡು ಪಡೆದಿರುವುದು ಪಂದ್ಯದ ನೆನಪಿನಾರ್ಥವಾಗಿ ಅಲ್ಲ. ಪಂದ್ಯದಲ್ಲಿ ಬಳಕೆ ಮಾಡಿರುವ ಚೆಂಡಿನ ಗುಣಮಟ್ಟವನ್ನು ಪರೀಕ್ಷಿಸಲು ಬೌಲಿಂಗ್ ಕೋಚ್ ಭರತ್ ಅರುಣ್‌ಗೆ ಚೆಂಡನ್ನು ತೋರಿಸಬೇಕಿತ್ತು. ಈ ಕಾರಣಕ್ಕಾಗಿ ಧೋನಿ ಚೆಂಡನ್ನು ಪಡೆದಿದ್ದರು’’ ಎಂದು ಅವರು ಹೇಳಿದ್ದಾರೆ.
 ‘‘ಮಹೇಂದ್ರ ಸಿಂಗ್ ಧೋನಿ ನಮ್ಮಂದಿಗೆ ಇದ್ದಾರೆ. ಅವರು ಎಲ್ಲಿಗೂ ಹೋಗುವುದಿಲ್ಲ. ಅವರು ಸದ್ಯ ನಿವೃತ್ತರಾಗುವುದಿಲ್ಲ ’’ಎಂದು ಶಾಸ್ತ್ರಿ ದೃಢಪಡಿಸಿದ್ದಾರೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News