ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ ಮೌಲ್ಯ

Update: 2018-07-19 16:59 GMT

ಮುಂಬೈ, ಜು.19: ಗುರುವಾರದಂದು ಡಾಲರ್ ವಿರುದ್ಧ ರೂಪಾಯಿ 43 ಪೈಸೆಗಳ ಕುಸಿತ ಕಂಡು 69.05ಕ್ಕೆ ತಲುಪಿದ್ದು ಜೀವಮಾನ ಇಳಿಕೆಯನ್ನು ದಾಖಲಿಸಿದೆ. ಇದೇ ಮೊದಲ ಬಾರಿ ರೂಪಾಯಿ ಡಾಲರ್ ವಿರುದ್ಧ 69ರ ಗಡಿಯನ್ನು ದಾಟಿ ಕುಸಿತ ಕಂಡಿದೆ. ಮೇ 29ರ ಬೃಹತ್ ಕುಸಿತದ ನಂತರ ಗುರುವಾರದಂದು ರೂಪಾಯಿ ಒಂದೇ ದಿನದಲ್ಲಿ ಡಾಲರ್ ವಿರುದ್ಧ ಇಷ್ಟೊಂದು ದೊಡ್ಡ ಕುಸಿತವನ್ನು ಕಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಏರುತ್ತಿರುವ ಡಾಲರ್ ಬೆಲೆ ಮತ್ತು ಕೆಲವು ಸ್ಥಳೀಯ ವಿಷಯಗಳು ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿರುವ ಪರಿಣಾಮವಾಗಿ ರೂಪಾಯಿ ಮೌಲ್ಯ ನಿರಂತರ ಕುಸಿಯುತ್ತಲೇ ಸಾಗಿದೆ. ಫೆಡರಲ್ ರಿಸರ್ವ್ ಮುಖ್ಯಸ್ಥ ಜೆರೊಮ್ ಪೊವೆಲ್ ನೀಡಿರುವ ಹೇಳಿಕೆಯಿಂದ ಬಡ್ಡಿದರಗಳಲ್ಲಿ ಏರಿಕೆಯಾಗುವ ಸೂಚನೆ ಲಭಿಸಿರುವ ಕಾರಣ ಯುಎಸ್ ಡಾಲರ್ ಮೌಲ್ಯ ಒಂದು ವರ್ಷದಲ್ಲೇ ಅತ್ಯಧಿಕ ಏರಿಕೆಯನ್ನು ಕಂಡಿದೆ. ಜೊತೆಗೆ ಶುಕ್ರವಾರ ಸಂಸತ್‌ನಲ್ಲಿ ಪ್ರತಿಪಕ್ಷಗಳು ನರೇಂದ್ರ ಮೋದಿ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿರುವ ಕಾರಣದಿಂದಲೂ ಫಾರೆಕ್ಸ್ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ಜೂನ್ 28ರಂದು ವ್ಯವಹಾರದ ಸಮಯದಲ್ಲಿ ರೂಪಾಯಿ ಡಾಲರ್ ಎದುರು 69.10ಕ್ಕೆ ಕುಸಿದಿದ್ದರೂ ಭಾರತೀಯ ರಿಸರ್ವ್ ಬ್ಯಾಂಕ್ ಹಸ್ತಕ್ಷೇಪ ನಡೆಸುವ ಊಹಾಪೋಹಗಳ ನಂತರ ಚೇತರಿಕೆ ಕಂಡಿತ್ತು. ಜಾಗತಿಕವಾಗಿ ಇತರ ಕರೆನ್ಸಿಗಳ ವಿರುದ್ಧವು ರೂಪಾಯಿ ಕುಸಿತವನ್ನು ಕಂಡಿದೆ. ಪೌಂಡ್ ಎದುರು ರೂಪಾಯಿ ಮೌಲ್ಯ 89.69ಕ್ಕೆ ತಲುಪಿದ್ದರೆ ಯೂರೊ ವಿರುದ್ಧ 80.05ಕ್ಕೆ ಕುಸಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News