ಪ್ರಥಮ ಹಾಕಿ ಟೆಸ್ಟ್: ನ್ಯೂಝಿಲೆಂಡ್ ವಿರುದ್ಧ ಭಾರತಕ್ಕೆ ಜಯ

Update: 2018-07-19 18:31 GMT

ಬೆಂಗಳೂರು, ಜು.19: ನ್ಯೂಝಿಲೆಂಡ್ ವಿರುದ್ಧ ಮೊದಲ ಹಾಕಿ ಟೆಸ್ಟ್ ಪಂದ್ಯದಲ್ಲಿ ಭಾರತ 4-2 ಅಂತರದಲ್ಲಿ ಜಯ ಗಳಿಸಿದೆ.

ಭಾರತದ ಕ್ರೀಡಾ ಪ್ರಾಧಿಕಾರದ ಬೆಂಗಳೂರಿನ ಕ್ಯಾಂಪಸ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತದ ರೂಪೆಂದರ್‌ಪಾಲ್ ಸಿಂಗ್ ಅವಳಿ ಗೋಲು ದಾಖಲಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ನ್ಯೂಝಿಲೆಂಡ್‌ನ ಸ್ಟೀಫೆನ್ ಜೆನ್ನೆಸ್ ಅವಳಿ ಗೋಲು ಗಳಿಸಿದರು.

 2018ರ ಕಾಮನ್‌ವೆಲ್ತ್ ಗೇಮ್ಸ್‌ನ ಬಳಿಕ ಮತ್ತೆ ಭಾರತ ತಂಡಕ್ಕೆ ವಾಪಸಾಗಿದ್ದ ರೂಪೆಂದರ್ ಪಾಲ್ ಸಿಂಗ್ ಅವರು ಮೊದಲ ನಿಮಿಷದಲ್ಲಿ ಸಿಕ್ಕಿದ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. ರೂಪೆಂದರ್ ಪಾಲ್ ಸಿಂಗ್ ಅವರು ನ್ಯೂಝಿಲೆಂಡ್‌ನ ಗೋಲು ಕೀಪರ್ ರಿಚರ್ಡ್ ಜೋಯ್ಸಿ ಅವರ ಕಣ್ಣು ತಪ್ಪಿಸಿ 2ನೇ ನಿಮಿಷದಲ್ಲಿ ತಂಡದ ಗೋಲು ಖಾತೆ ತೆರೆದರು. 7ನೇ ನಿಮಿಷದಲ್ಲಿ ಪ್ರವಾಸಿ ತಂಡಕ್ಕೆ ಸಮಬಲಗೊಳಿಸುವ ಅವಕಾಶ ಒದಗಿ ಬಂದಿತ್ತು. ಆದರೆ ಭಾರತದ ಗೋಲು ಕೀಪರ್ ಕೃಷ್ಣ ಪಾಠಕ್ ಅವಕಾಶ ನೀಡಲಿಲ್ಲ.

 15ನೇ ನಿಮಿಷದಲ್ಲಿ ಭಾರತದ ಮನ್‌ಪ್ರೀತ್ ಸಿಂಗ್ ಗೋಲು ಬಾರಿಸಿ ತಂಡಕ್ಕೆ 2-0 ಗೆಲುವಿಗೆ ನೆರವಾದರು.

    22ನೇ ನಿಮಿಷದಲ್ಲಿ ಭಾರತಕ್ಕೆ ಎರಡನೇ ಪೆನಾಲ್ಟಿ ಅವಕಾಶ ಸಿಕ್ಕಿದರೂ ಗೋಲು ಬರಲಿಲ್ಲ. 26ನೇ ನಿಮಿಷದಲ್ಲಿ ನ್ಯೂಝಿಲೆಂಡ್‌ನ ಸ್ಟೀಫೆನ್ ಜೆನ್ನೆಸ್ ಫೀಲ್ಡ್ ಗೋಲು ಜಮೆ ಮಾಡಿ ನ್ಯೂಝಿಲೆಂಡ್‌ನ ಹಿನ್ನಡೆಯನ್ನು ತಗ್ಗಿಸಿದರು. ದ್ವಿತೀಯಾರ್ಧದ 34ನೇ ನಿಮಿಷದಲ್ಲಿ ಮೂರನೇ ಪೆನಾಲ್ಟಿ ಅವಕಾಶದಲ್ಲಿ ಡ್ರಾಗ್ ಫ್ಲಿಕರ್ ಎಸ್ ವಿ ಸುನೀಲ್ ಗೋಲು ಗಳಿಸುವ ಅವಕಾಶ ಸೃಷ್ಟಿಸಿದರು. ರೂಪೆಂದರ್ ಪಾಲ್ ಸಿಂಗ್ ಇನ್ನೊಂದು ಗೋಲು ಜಮೆ ಮಾಡಿದರು.

38ನೇ ನಿಮಿಷದಲ್ಲಿ ಇನ್ನೊಂದು ಪೆನಾಲ್ಟಿ ಅವಕಾಶದಲ್ಲಿ ಹರ್ಮನ್ ಪ್ರೀತ್ ಸಿಂಗ್ ಗೋಲು ಜಮೆ ಮಾಡಿದರು. ಭಾರತ 4-1 ಮುನ್ನಡೆ ಸಾಧಿಸಿತು.

55ನೇ ನಿಮಿಷದಲ್ಲಿ ಸ್ಟೀಫೆನ್ ಜೆನ್ನೆಸ್ ಗೋಲು ಬಾರಿಸಿದರು. ಇದರೊಂದಿಗೆ ನ್ಯೂಝಿಲೆಂಡ್‌ಗೆ ಎರಡನೇ ಗೋಲು ಬಂತು. ಭಾರತ ಪಂದ್ಯವನ್ನು 4-2 ಅಂತರದಲ್ಲಿ ಗೆದ್ದುಕೊಂಡಿತು.

ಸರಣಿಯ ಎರಡನೇ ಪಂದ್ಯ ಶನಿವಾರ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News