ಸುಪ್ರೀಂ ಕೋರ್ಟ್‌ನ ತೀರ್ಪಿನ ವರೆಗೆ ವಿ.ವಿ. ಬೋಧಕರ ನೇಮಕ ಮುಂದೂಡಿ: ಯುಜಿಸಿಗೆ ಕೇಂದ್ರ ಸರಕಾರ ಸೂಚನೆ

Update: 2018-07-19 18:57 GMT

ಹೊಸದಿಲ್ಲಿ, ಜು. 19: ಸುಪ್ರೀಂ ಕೋರ್ಟ್ ತೀರ್ಪು ನೀಡುವ ವರೆಗೆ ಪ್ರತಿ ವಿಭಾಗ ಆಧರಿಸಿ ಹುದ್ದೆ ಲೆಕ್ಕ ಹಾಕಿ ಅಧ್ಯಾಪಕರ ನೇಮಕ ಪ್ರಕ್ರಿಯೆಯ ಮುಂದೂಡಲು ವಿಶ್ವವಿದ್ಯಾನಿಲಯಗಳಿಗೆ ಸೂಚನೆ ನೀಡುವಂತೆ ಕೇಂದ್ರ ಸರಕಾರ ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ (ಯುಜಿಸಿ)ಗೆ ತಿಳಿಸಿದೆ. ಈ ವಿಷಯಕ್ಕೆ ಸಂಬಂಧಿಸಿದ ಮರು ಪರಿಶೀಲನಾ ಅರ್ಜಿಯನ್ನು ನ್ಯಾಯಾಲಯ ಶೀಘ್ರದಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.

ಈ ಸಂಬಂಧ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್‌ಆರ್‌ಡಿ) ಸಚಿವಾಲಯ ಗುರುವಾರ ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗಕ್ಕೆ ಪತ್ರ ಕಳುಹಿಸಿದೆ. ‘‘ಹಲವು ವಿಶ್ವವಿದ್ಯಾನಿಲಯಗಳು ಹಾಗೂ ಕಾಲೇಜುಗಳು ನೇಮಕಾತಿ ಮಾಡಿಕೊಳ್ಳಲು ಆರಂಭಿಸಿದೆ. ವಿಭಾಗದ ಆಧಾರದಲ್ಲಿ ಹುದ್ದೆಗಳನ್ನು ಲೆಕ್ಕಹಾಕಿವೆ. ಇದರಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪ್ರತಿನಿಧೀಕರಣದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಈ ವಿಷಯ ವಿಚಾರಣೆ ಹಂತದಲ್ಲಿ ಇರುವುದರಿಂದ, ನಾವು ನೇಮಕಾತಿಯನ್ನು ಮುಂದೂಡುವಂತೆ ಸೂಚಿಸಿದ್ದೇವೆ’’ ಎಂದು ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಕಳೆದ ವರ್ಷ ಎಪ್ರಿಲ್‌ನಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯ ನೀಡಿದ ತೀರ್ಪು ಹಾಗೂ ಆ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿರುವ ಬೋಧಕ ಹುದ್ದೆಗಳ ಸಂಖ್ಯೆಯನ್ನು ಲೆಕ್ಕ ಹಾಕಲು ಪ್ರತಿ ವಿಭಾಗವನ್ನು ಮೂಲ ಘಟಕವಾಗಿ ಪರಿಗಣಿಸಬೇಕು ಎಂದು ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ ಮಾರ್ಚ್‌ನಲ್ಲಿ ಪ್ರಕಟಿಸಿತ್ತು.

ಮೀಸಲಾತಿ ವರ್ಗದ ಬೋಧಕರ ಸಂಖ್ಯೆಯನ್ನು ಏಕ ಘಟಕ ಎಂದು ವಿಶ್ವವಿದ್ಯಾನಿಲಯ ಪರಿಗಣಿಸಬೇಕು. ಉದಾಹರಣೆಗಾಗಿ ಎಲ್ಲ ಶ್ರೇಣಿಯ ಬೋಧಕ ಹುದ್ದೆಯನ್ನು ಪಟ್ಟಿ ಮಾಡುವ ಸಂದರ್ಭ ಮೀಸಲಾತಿ ನಿರ್ಧರಿಸಲು ಎಲ್ಲ ವಿಭಾಗಗಳನ್ನು ಸಂಯೋಜಿಸಲಾಗಿದೆ. ಬಾಕ್ಸ್ ನೂತನ ನಿಯಮದ ಪ್ರಕಾರ ವಿಶ್ವವಿದ್ಯಾನಿಲಯದ ಪ್ರತಿ ವಿಭಾಗವನ್ನು ಒಂದು ಘಟಕವಾಗಿ ಪರಿಗಣಿಸಬೇಕು. ಆದರೆ, ಈ ಕ್ರಮದಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಹುದ್ದೆಗಳ ಸಂಖ್ಯೆ ಗಮನಾರ್ಹವಾಗಿ ಇಳಿಕೆಯಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News