ಹತ್ಯೆಗೆ ಕುಮ್ಮಕ್ಕಿನ ಆರೋಪ: ವಾಟ್ಸ್ಯಾಪ್ ವಿರುದ್ಧ ದಾವೆಗೆ ಮುಂದಾದ ಸರ್ಕಾರ

Update: 2018-07-20 04:34 GMT

ಹೊಸದಿಲ್ಲಿ, ಜು.20: ದೇಶದ ಹಲವು ರಾಜ್ಯಗಳಲ್ಲಿ ಹತ್ಯೆಗಳಿಗೆ ಕಾರಣವಾಗುತ್ತಿರುವ ಸುಳ್ಳುಸುದ್ದಿಗಳನ್ನು ನಿಯಂತ್ರಿಸಲು ವಿಫಲವಾದಲ್ಲಿ ಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ವಾಟ್ಸ್ಯಾಪ್‌ಗೆ ಎಚ್ಚರಿಕೆ ನೀಡಿದೆ.

"ಬಳಕೆದಾರರ ಹೊಣೆಗಾರಿಕೆಯನ್ನು ಹೆಚ್ಚಿಸುವ ಮತ್ತು ಸುಳ್ಳು ಸುದ್ದಿಗಳನ್ನು ಪತ್ತೆ ಮಾಡುವ ಹೆಚ್ಚು ಪರಿಣಾಮಕಾರಿ ಪರಿಹಾರವನ್ನು ಕಂಡುಹಿಡಿಯುವಂತೆ ವಾಟ್ಸ್ಯಾಪ್‌ಗೆ ಸೂಚಿಸಲಾಗಿದೆ. ಇದು ತೀರಾ ಗಂಭೀರ ವಿಚಾರವಾಗಿದ್ದು, ಹೆಚ್ಚು ಸೂಕ್ಷ್ಮ ಸ್ಪಂದನೆ ಅಗತ್ಯ" ಎಂದು ಕಂಪನಿಗೆ ನೀಡಿರುವ ಹೊಸ ಎಚ್ಚರಿಕೆಯಲ್ಲಿ ಮಾಹಿತಿ ತಂತ್ರಜ್ಞಾನ ಸಚಿವಾಲಯ ಸ್ಪಷ್ಟಪಡಿಸಿದೆ.

ವಾಟ್ಸ್ಯಾಪ್‌ನಲ್ಲಿ ವೈರಲ್ ಆದ ಮಕ್ಕಳ ಕಳ್ಳತನ ವದಂತಿಯಿಂದ ಬೀದರ್‌ನಲ್ಲಿ 32 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಮುಹಮ್ಮದ್ ಅಝಮ್ ಅವರನ್ನು ಹತ್ಯೆ ಮಾಡಿದ ಘಟನೆ ಹಿನ್ನೆಲೆಯಲ್ಲಿ ಹೊಸ ಎಚ್ಚರಿಕೆ ನೀಡಲಾಗಿದೆ.

"ದೇಶದಲ್ಲಿ ಈ ಸವಾಲು ಅಗಾಧವಾಗುತ್ತಿದ್ದು, ವ್ಯಾಪಕ ದುರ್ಬಳಕೆ ನಡೆಯುತ್ತಿದೆ. ಪದೇ ಪದೇ ಜಾಲತಾಣಗಳಲ್ಲಿ ಹರಡುವ ಬೇಜವಾಬ್ದಾರಿಯುತ ಸುಳ್ಳು ಸುದ್ದಿಗಳಿಂದ ಆಧಾರದಲ್ಲಿ ಅಪರಾಧಗಳು ನಡೆಯುತ್ತಿವೆ. ಇದನ್ನು ವಾಟ್ಸ್ಯಾಪ್‌ ಸೂಕ್ತವಾಗಿ ತಡೆಯುತ್ತಿಲ್ಲ" ಎಂದು ಸಚಿವಾಲಯ ಹೇಳಿದೆ.

ಈ ವಿಚಾರದಲ್ಲಿ ವಾಟ್ಸ್ಯಾಪ್‌ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲಾಗದು ಎಂದು ಸಚಿವಾಲಯ ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News