ಅವಿಶ್ವಾಸ ನಿಲುವಳಿಯಲ್ಲಿ ಯು-ಟರ್ನ್ ಹೊಡೆದ ಶಿವಸೇನೆ: ಬಿಜೆಪಿಗೆ ಮುಖಭಂಗ

Update: 2018-07-20 09:49 GMT

ಹೊಸದಿಲ್ಲಿ, ಜು.20: ಬಿಜೆಪಿಗೆ ದೊಡ್ಡ ಮುಖಭಂಗವುಂಟು ಮಾಡುವ ಬೆಳವಣಿಗೆಯಲ್ಲಿ ಶಿವಸೇನೆ ಸಂಸತ್ತಿನಲ್ಲಿ ಇಂದು ನಡೆಯುತ್ತಿರುವ ಅವಿಶ್ವಾಸ ನಿಲುವಳಿ ಮೇಲಿನ ಮತದಾನದಿಂದ ದೂರವುಳಿಯಲು ನಿರ್ಧರಿಸಿದೆ. ಗುರುವಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆಗೆ ದೂರವಾಣಿ ಮೂಲಕ ಮಾತನಾಡಿ ಬೆಂಬಲ ಯಾಚಿಸಿದ್ದ ನಂತರ ಪಕ್ಷ ಸಂಸದರಿಗೆ ವಿಪ್ ಜಾರಿಗೊಳಿಸಿ ಬಿಜೆಪಿಯನ್ನು ಬೆಂಬಲಿಸುವಂತೆ ಹೇಳಿತ್ತು.

ಆದರೆ ಇಂದು ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯ ಬಿಜೆಪಿಗೆ ಮಂಗಳಾರತಿಯೆತ್ತಿದೆ. "ನಮ್ಮನ್ನಾಳುತ್ತಿರುವವರು ಪ್ರಾಣಿಗಳನ್ನು ರಕ್ಷಿಸಿ, ಮನುಷ್ಯರನ್ನು ಕೊಲ್ಲುವ ಕಸಾಯಿಗಳು'' ಎಂದು ಶಿವಸೇನೆ ತನ್ನ ಸಂಪಾದಕೀಯದಲ್ಲಿ ಬರೆದಿರುವ ಬೆನ್ನಿಗೇ  ಬಿಜೆಪಿಯನ್ನು ಬೆಂಬಲಿಸದೇ ಇರಲು ನಿರ್ಧರಿಸಿದೆ.

ಉದ್ಧವ್ ಠಾಕ್ರೆ ರಾತ್ರೋರಾತ್ರಿ ತಮ್ಮ ನಿರ್ಧಾರ ಬದಲಿಸಿದ್ದು ಈ ಬಗ್ಗೆ ಬಿಜೆಪಿ ಸಂಸದರಿಗೆ  ಸಂಸತ್ ಭವನದಲ್ಲಿ ನಡೆದ ಸಭೆಯೊಂದರಲ್ಲಿ ಮಾಹಿತಿ ನೀಡಲಾಯಿತು.

``ನಾವು ಯಾವತ್ತೂ ಜನರಿಗಾಗಿ ಹೋರಾಡುವವರು, ನಮ್ಮನ್ನು ಯಾರೂ ಬೆಂಬಲಿಸಿಲ್ಲ, ತೆಲುಗು ದೇಶಂ ಪಕ್ಷದ ಅವಿಶ್ವಾಸ ನಿಲುವಳಿ ಮಂಡನೆಗೂ ನಮಗೂ ಸಂಬಂಧವಿಲ್ಲ'' ಎಂದು ಶಿವಸೇನೆ ನಾಯಕ ಆನಂದ್ ರಾವ್ ಅದ್ಸುಲ್ ಹೇಳಿದರು.

ಗುರುವಾರ ಲೋಕ¸ಭೆಯಲ್ಲಿ ಶಿವಸೇನೆಯ ಮುಖ್ಯ ಸಚೇತಕ ಚಂದ್ರಕಾಂತ್ ಖೈರೆ ಪಕ್ಷದ ಸಂಸದರಿಗೆ ವಿಪ್ ಜಾರಿ ಮಾಡಿ ಅವಿಶ್ವಾಸ ನಿಲುವಳಿ ಸಂದರ್ಭ ಹಾಜರಿದ್ದು ಸರಕಾರಕ್ಕೆ ಬೆಂಬಲಿಸುವಂತೆ ಹೇಳಿದ್ದರು. ಆದರೆ ತಾನು ವಿಪ್ ಜಾರಿಗೊಳಿಸಿಲ್ಲ ಎಂದು ಪಕ್ಷ ಈಗ ಹೇಳುತ್ತಿದೆ.

ಗುರುವಾರ ಅಮಿತ್ ಶಾ ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಜತೆ ಫೋನ್ ಸಂಭಾಷಣೆ ನಡೆಸಿದ ನಂತರ ಬಿಜೆಪಿಯನ್ನು ಸದಾ ಟೀಕಿಸುತ್ತಿದ್ದ ಶಿವಸೇನೆ ಸರಿದಾರಿಗೆ ಬಂದಿದೆ ಹಾಗೂ ಇಂದು ಸರಕಾರವನ್ನು ಬೆಂಬಲಿಸುವುದು ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದರು. ಆದರೆ ಕೆಲವೇ ಗಂಟೆಗಳಲ್ಲಿ ಉದ್ಧವ್ ತಮ್ಮ ನಿರ್ಧಾರ ಬದಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News