"ಮೋದಿ ಚೌಕೀದಾರ್ ಅಲ್ಲ, ಭಾಗೀದಾರ್"

Update: 2018-07-20 10:44 GMT

ಹೊಸದಿಲ್ಲಿ, ಜು.20: ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರಕಾರದ ವಿರುದ್ಧ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು. ರಾಫೆಲ್ ಡೀಲ್, ಪ್ರಧಾನಿ ನೀಡಿದ್ದ ಭರವಸೆಗಳು, ಜಿಎಸ್ ಟಿ ಹೀಗೆ ಹಲವು ವಿಷಯಗಳಲ್ಲಿ ರಾಹುಲ್ ಕೇಂದ್ರ ಸರಕಾರವನ್ನು ಟೀಕಿಸಿದರು. ರಾಹುಲ್ ಗಾಂಧಿಯವರ ಟಾಪ್ 10 ಮಾತುಗಳು ಈ ಕೆಳಗಿದೆ.

►ಟಿಡಿಪಿ ಸಂಸದ ಜಯದೇವ್ ಗಲ್ಲಾರನ್ನು ಉಲ್ಲೇಖಿಸಿ ಮಾತನಾಡಿದ ರಾಹುಲ್, "ನೀವು 21ನೆ ಶತಮಾನದ ರಾಜಕೀಯ ಅಸ್ತ್ರದ ಬಲಿಪಶುವಾಗಿದ್ದೀರಿ. ಆದರೆ ನೀವೊಬ್ಬರೇ ಅಲ್ಲ. ಈ ರಾಜಕೀಯ ಆಯುಧವನ್ನು 'ಜುಮ್ಲಾ ಸ್ಟ್ರೈಕ್' ಎಂದು ಕರೆಯುತ್ತಾರೆ".

►"ಮೋದಿಯವರ ಜಿಎಸ್ ಟಿ ಕುರಿತ ಮಾತುಗಳನ್ನು 15ರಿಂದ 20 ಸೂಟುಬೂಟುಧಾರಿ ಉದ್ಯಮಿಗಳು ಮಾತ್ರ ಆಲಿಸಿದ್ದಾರೆ. ಆದರೆ ಸಣ್ಣ ವಲಯದ ವ್ಯಾಪಾರಿಗಳನ್ನು ದೋಚಲಾಗಿದೆ".

►"ತಾನು ದೇಶದ ಚೌಕಿದಾರ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ ಅಮಿತ್ ಶಾ ಪುತ್ರನಿಗೆ ಸಂಬಂಧಿಸಿ ಭ್ರಷ್ಟಾಚಾರದ ವಿಚಾರದಲ್ಲಿ ಅವರು ಮೌನವಾಗಿದ್ದಾರೆ".

►"ರಾಫೆಲ್ ಡೀಲ್ ಬಗ್ಗೆ ಪ್ರಧಾನಿ ಮೌನವಾಗಿದ್ದಾರೆ. ಯುಪಿಎ ಅವಧಿಯಲ್ಲಿ ರಾಫೆಲ್ ಡೀಲ್ ಗೆ ಸಹಿ ಮಾಡಲಾಗಿತ್ತು. ಆದರೆ ಪ್ರಧಾನಿ ಫ್ರಾನ್ಸ್ ಗೆ ಹೋದ ನಂತರ ಏನಾಯಿತೋ ತಿಳಿಯದು. ಅದರ ವೆಚ್ಚ 1600 ಕೋಟಿ ರೂ. ಹೆಚ್ಚಿತು".

►"ರಹಸ್ಯ ಷರತ್ತು ಎಂದು ಹೇಳಿ ರಾಫೆಲ್ ಡೀಲ್ ಬಗೆಗಿನ ವಿವರ ಹಂಚಿಕೊಳ್ಳಲು ನಿರ್ಮಲಾ ಸೀತಾರಾಮನ್ ನಿರಾಕರಿಸಿದ್ದಾರೆ. ಆದರೆ ನಾನು ಫ್ರಾನ್ಸ್ ನ ಅಧ್ಯಕ್ಷರನ್ನು ಭೇಟಿಯಾಗಿದ್ದೆ. 'ರಹಸ್ಯ ಷರತ್ತಿನ' ಬಗ್ಗೆಯೂ ಪ್ರಶ್ನಿಸಿದೆ. ಆದರೆ ಅಂತಹ ಯಾವುದೇ ಷರತ್ತಿಲ್ಲ ಎಂದು ಅವರು ಹೇಳಿದರು. ಪ್ರಧಾನಿ ಮೋದಿಯ ಒತ್ತಡದಿಂದಾಗಿ ನಿರ್ಮಲಾ ಸೀತಾರಾಮನ್ ದೇಶಕ್ಕೆ ಸುಳ್ಳು ಹೇಳಿದ್ದಾರೆ".

►"ಮೋದಿ ತಾನು ದೇಶದ ಚೌಕಿದಾರ ಎಂದರು. ಆದರೆ ಅವರು ಚೌಕೀದಾರ್ ಅಲ್ಲ, ಭಾಗೀದಾರ್".

►"ಅವರು (ಮೋದಿ) ನಗುತ್ತಿರುವುದು ನನಗೆ ಕಾಣಿಸುತ್ತಿದೆ. ಆದರೆ ಅವರೊಳಗೆ ಅಳುಕಿದೆ ಹಾಗು ಅವರು ನನ್ನನ್ನು ನೋಡದೆ ಬೇರೆಡೆಗೆ ನೋಡುತ್ತಿದ್ದಾರೆ. ನನಗದು ಅರ್ಥವಾಗುತ್ತದೆ. ನನ್ನ ಕಣ್ಣಲ್ಲಿ ಕಣ್ಣಿಟ್ಟು ಅವರಿಗೆ ನೋಡಲಾಗುತ್ತಿಲ್ಲ"

►"ಚೀನಾ 24 ಗಂಟೆಗಳಲ್ಲಿ 50 ಸಾವಿರ ಮಂದಿಗೆ ಉದ್ಯೊಗ ನೀಡಿದರೆ ನೀವು 24 ಗಂಟೆಗಳಲ್ಲಿ ಕೇವಲ 400 ಮಂದಿಗೆ ಉದ್ಯೋಗ ನೀಡಿದ್ದೀರಿ"

►"ನೀವೆಲ್ಲೇ ಹೋದರೂ ಉದ್ಯೋಗದ ಬಗ್ಗೆ ಮಾತನಾಡುತ್ತೀರಿ. ಕೆಲವೊಮ್ಮೆ ನೀವು ಪಕೋಡ ಮಾರಿ ಎಂದು ಹೇಳುತ್ತೀರಿ"

►"ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತಕ್ಕೆ ಮಹಿಳೆಯರನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲ. "ದಲಿತರು, ಅಲ್ಪಸಂಖ್ಯಾತರು ಹಾಗು ಬುಡಕಟ್ಟುಗಳನ್ನು ದೇಶದಲ್ಲಿ ಗುರಿ ಮಾಡಲಾಗುತ್ತದೆ. ಆದರೆ ಪ್ರಧಾನಿ ಈ ಬಗ್ಗೆ ಒಂದು ಮಾತನ್ನೂ ಆಡಿಲ್ಲ. ಕೊಲೆ ಪ್ರಕರಣದ ಆರೋಪಿಗಳಿಗೆ ಮೋದಿಯ ಸಚಿವರು ಸನ್ಮಾನಿಸಿದ್ದಾರೆ."

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News