ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಲು ಲಂಚ ಕೇಳಿದ ಆರೋಪ: ರಾಜೀವ್ ಶುಕ್ಲ ಸಹಾಯಕ ರಾಜೀನಾಮೆ

Update: 2018-07-20 11:26 GMT

ಹೊಸದಿಲ್ಲಿ, ಜು.20: ಉತ್ತರ ಪ್ರದೇಶ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಲು ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಅವರ ಸಹಾಯಕ ಅಕ್ರಮ್ ಸೈಫಿ ಲಂಚದ ಬೇಡಿಕೆಯಿರಿಸಿದ್ದರೆಂದು ಕುಟುಕು ಕಾರ್ಯಾಚರಣೆಯೊಂದರ ಮೂಲಕ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಬಿಸಿಸಿಐನಿಂದ ಉಚ್ಛಾಟನೆಗೊಂಡ ಅವರಿಂದ ಸಹಾಯಕ ಹುದ್ದೆಯಿಂದಲೂ ಬಲವಂತವಾಗಿ ರಾಜೀನಾಮೆ ಪಡೆದುಕೊಳ್ಳಲಾಗಿದೆ.

ಅಕ್ರಮ್ ಸೈಫಿ ಹಾಗೂ ಕ್ರಿಕೆಟಿಗ ರಾಹುಲ್ ಶರ್ಮ ನಡುವೆ ನಡೆದಿದೆಯೆನ್ನಲಾದ ದೂರವಾಣಿ ಸಂಭಾಷಣೆಯೊಂದನ್ನು ಹಿಂದಿ ಸುದ್ದಿ ವಾಹಿನಿಯೊಂದು ಪ್ರಸಾರ ಮಾಡಿತ್ತು. ಶರ್ಮ ಅವರು ಉತ್ತರ ಪ್ರದೇಶ ತಂಡಕ್ಕೆ ಆಯ್ಕಯಾಗಬೇಕಾದರೆ ತಮಗೆ ನಗದು ಮತ್ತು ಇತರ ಕಾಣಿಕೆಗಳನ್ನು ನೀಡಬೇಕೆಂದು ಅಕ್ರಮ್ ಹೇಳುತ್ತಿರುವುದು ಈ ಸಂಭಾಷಣೆಯಲ್ಲಿ ಕೇಳಿಸುತ್ತದೆ.

ಶುಕ್ಲಾ ಅವರು ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ನಿರ್ದೇಶಕರೂ ಆಗಿದ್ದಾರೆ. ಈ ಲಂಚ ಬೇಡಿಕೆ ಹಗರಣವನ್ನು ಬಿಸಿಸಿಐ ತನಿಖೆ ನಡೆಸಲು ನಿರ್ಧರಿಸಿದೆ. ಈಗಾಗಲೇ ಬಿಸಿಸಿಐ ಈ ಹಗರಣದ ಬಗ್ಗೆ ಅಕ್ರಮ್ ಅವರಿಂದ ವಿವರಣೆ ಕೇಳಿದೆ. ತನಿಖೆಗಾಗಿ ನೇಮಕಗೊಳ್ಳುವ ಆಯುಕ್ತರು ಅಕ್ರಮ್ ಅವರ ವಿವರಣೆಯನ್ನು ಪರಿಶೀಲಿಸಲಿದ್ದಾರೆ. ವರದಿ 15 ದಿನಗಳೊಳಗಾಗಿ ಬಿಸಿಸಿಐಗೆ ಸಲ್ಲಿಕೆಯಾಗಬೇಕಿದ್ದು  ನಂತರ ಶಿಸ್ತು ಸಮಿತಿಗೆ ಅದನ್ನು ಕಳುಹಿಸಲಾಗುವುದು. ಟಿವಿ ವಾಹಿನಿ ಪ್ರಸಾರ ಮಾಡಿದ ದೂರವಾಣಿ ಸಂಭಾಷಣೆಯ ತುಣುಕನ್ನೂ ಪಡೆದು ಪರಿಶೀಲಿಸಲಾಗುವುದು. ಸಂಭಾಷಣೆಯಲ್ಲಿ ಭಾಗಿಯಾಗಿದ್ದಾರೆನ್ನಲಾದ ರಾಹುಲ್ ಶರ್ಮ ಭಾರತವನ್ನು ಯಾವತ್ತೂ ಪ್ರತಿನಿಧಿಸಿಲ್ಲ ಯಾ ಉತ್ತರ ಪ್ರದೇಶ ತಂಡವನ್ನೂ ಪ್ರತಿನಿಧಿಸಿಲ್ಲ. ಅಕ್ರಮ್ ತನ್ನಿಂದ ಲಂಚ ಕೇಳಿದ್ದಾರೆಂದು ಶರ್ಮ ಹೇಳಿದರೂ ಅಕ್ರಮ್ ಮಾತ್ರ ಇದನ್ನು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News