×
Ad

ಮೀನುಗಾರ ಮಹಿಳೆಯರಿಗೆ ಬಡ್ಡಿ ರಹಿತ ಸಾಲ: ಸಚಿವ ವೆಂಕಟರಾವ್ ನಾಡಗೌಡ

Update: 2018-07-20 18:20 IST

ಬೆಂಗಳೂರು, ಜು. 20: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿನ ಮೀನುಗಾರ ಮಹಿಳೆಯರಿಗೆ 50 ಸಾವಿರ ರೂ.ವರೆಗೆ ಶೂನ್ಯ ಬಡ್ಡಿ ದರದಲ್ಲಿ ನೇರವಾಗಿ ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀನುಗಾರ ಮಹಿಳೆಯರಿಗೆ ಸಹಕಾರ ಸಂಘಗಳ ಮೂಲಕ ನೀಡುತ್ತಿರುವ ಸಾಲದ ಬಡ್ಡಿ ದರ ಮತ್ತಷ್ಟು ಕಡಿಮೆ ಮಾಡಲಾಗುವುದು ಎಂದು ಹೇಳಿದರು.

ಎಲೆಕ್ಟ್ರಿಕ್ ಬೋಟ್: ಮೀನುಗಾರಿಕೆ ಬೋಟ್‌ಗಳಿಗೆ ಸಬ್ಸಿಡಿ ಸಹಿತ ಸೀಮೆಎಣ್ಣೆ ಪೂರೈಕೆಯನ್ನು ಆಹಾರ ಮತ್ತು ನಾಗರಿಕ ಇಲಾಖೆ ನಿಲ್ಲಿಸಿದೆ. ಹೀಗಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಆದುದರಿಂದ ಡೀಸೆಲ್ ಅಥವಾ ಎಲೆಕ್ಟ್ರಿಕ್ ಬೋಟ್‌ಗಳ ಬಳಕೆಗೆ ಪ್ರೋತ್ಸಾಹಿಸಲಾಗುವುದು ಎಂದರು. ಮೀನುಗಾರಿಕೆ ಬೋಟ್‌ಗಳಿಗೆ ಅಗತ್ಯವಿರುವ ಸೀಮೆಎಣ್ಣೆ ವಿತರಣೆ ಸಂಬಂಧ ಈಗಾಗಲೇ ಕೇಂದ್ರ ಆಹಾರ ಸಚಿವರೊಂದಿಗೆ ಸಮಾಲೋಚನೆ ನಡೆಸಿದ್ದು, ಸೀಮೆಎಣ್ಣೆ ವಿತರಣೆಗೆ ಸಮ್ಮತಿಸಿದ್ದಾರೆ. ಭವಿಷ್ಯದಲ್ಲಿ ಸೀಮೆಎಣ್ಣೆ ಮೇಲೆ ಅವಲಂಬನೆ ಕಷ್ಟಸಾಧ್ಯ ಎಂದು ಹೇಳಿದರು.

ಫ್ಲೋಟಿಂಗ್ ಬೋಟ್: ಮೀನುಗಾರಿಕೆಗಾಗಿ ಗೋವಾ ಮಾದರಿಯಲ್ಲೆ ತೇಲುವ ಜಟ್ಟಿಗಳ(ಫ್ಲೋಟಿಂಗ್ ಬೋಟ್) ನಿರ್ಮಾಣಕ್ಕೆ ಚಿಂತನೆ ನಡೆಸಿದ್ದು, ಗೋವಾ ರಾಜ್ಯದಲ್ಲಿ ಇಂತಹ ಬೋಟ್‌ಗಳಿದ್ದು, ರಾಜ್ಯದ ಅಧಿಕಾರಿಗಳು ಶೀಘ್ರದಲ್ಲೆ ಗೋವಾಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಲಿದ್ದಾರೆ. ಆ ಬಳಿಕ ಇದರ ಸಾಧಕ-ಬಾಧಕಗಳ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.

ದರ ಏರಿಕೆ ಪ್ರಸ್ತಾವ ಇಲ್ಲ: ನಂದಿನಿ ಹಾಲಿನ ಮಾರಾಟ ದರ ಏರಿಕೆಯ ಯಾವುದೇ ಪ್ರಸ್ತಾವ ರಾಜ್ಯ ಸರಕಾರದ ಮುಂದಿಲ್ಲ ಎಂದು ಸ್ಪಷ್ಟಣೆ ನೀಡಿದ ಅವರು, ಹಾಲಿಗೆ ನೀಡುತ್ತಿರುವ ಪ್ರೋತ್ಸಾಹ ಧನ ಹೆಚ್ಚಳಕ್ಕೆ ಹಾಲು ಒಕ್ಕೂಟಗಳು ಮನವಿ ಮಾಡಿದ್ದು, ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ನಂದಿನಿ ಹಾಲು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭವಾಗುತ್ತಿಲ್ಲ. ನಂದಿನಿ ಉತ್ಪನ್ನಗಳು ಬೇರೆ ಸಂಸ್ಥೆಗಳೊಂದಿಗೆ ಪೈಪೋಟಿ ಅನಿವಾರ್ಯ ಎಂದ ಅವರು, ಬಳಕೆಯಾಗದೆ ಉಳಿಯುವ ಹಾಲನ್ನು ಪೌಡರ್ ಮಾಡಲು ಹೆಚ್ಚಿನ ಮೊತ್ತದ ವೆಚ್ಚ ಆಗುತ್ತಿದೆ ಎಂದರು.

ಹೊರ ರಾಜ್ಯಗಳಿಂದ ಬರುವ ಹಾಲಿನಲ್ಲಿ ಕಲಬೆರೆಕೆ ಹೆಚ್ಚಾಗಿರುವ ಬಗ್ಗೆ ಆಹಾರ ಇಲಾಖೆ ಪರಿಶೀಲನೆ ನಡೆಸಲಿದೆ. ಇದು ದೃಢಪಟ್ಟರೆ ಹೊರರಾಜ್ಯದ ಹಾಲು ಮಾರಾಟಕ್ಕೆ ನಿರ್ಬಂಧ ಹೇರಲಾಗುವುದು. ಕಲಬೆರಕೆ ಹಾಲು ಮಾರಾಟವಾಗುತ್ತಿರುವ ಬಗ್ಗೆ ಪರಿಶೀಲಿಸಲು ಸಹಕಾರ ಸಚಿವರನ್ನೊಳಗೊಂಡಂತೆ ಸಭೆ ಕರೆದು ಸೂಚನೆ ನೀಡಲಾಗುವುದು’
-ವೆಂಕಟರಾವ್ ನಾಡಗೌಡ, ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News