ಇಎಸ್‌ಐ ಆಸ್ಪತ್ರೆಗಳಲ್ಲಿ ಪ್ರಯೋಗಾಲಯ ಸ್ಥಾಪನೆ: ಕಾರ್ಮಿಕ ಸಚಿವ ವೆಂಕಟರಮಣಪ್ಪ

Update: 2018-07-20 13:23 GMT

ಬೆಂಗಳೂರು, ಜು. 20: ರಾಜ್ಯದಲ್ಲಿನ ಎಲ್ಲ ಇಎಎಸ್ ಆಸ್ಪತ್ರೆಗಳಲ್ಲಿ ರಕ್ತ, ಮೂತ್ರ ಪರೀಕ್ಷಾ ಪ್ರಯೋಗಾಲಯ ಮತ್ತು ಆಯುಷ್ ಘಟಕಗಳನ್ನು ಶೀಘ್ರದಲ್ಲೆ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ 112 ಇಎಸ್‌ಐ ಚಿಕಿತ್ಸಾಲಯಗಳಿದ್ದು, ಏಳು ಆಸ್ಪತ್ರೆಗಳಲ್ಲಿ ರಕ್ಷ ಪರೀಕ್ಷಾ ಪ್ರಯೋಗಾಲಯ, ಆಯುಷ್ ಘಟಕ ಮತ್ತು ಹೊರ ಗುತ್ತಿಗೆ ಆಧಾರದ ಮೇಲೆ ಡಯಾಲಿಸಿಸ್ ಘಟಕ ಆರಂಭಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರ ಸರಕಾರ ಶೀಘ್ರದಲ್ಲೆ ಪ್ರಸ್ತಾವನೆಗೆ ಅನುಮೋದನೆ ನೀಡುವ ನಿರೀಕ್ಷೆ ಇದ್ದು, ಶೀಘ್ರದಲ್ಲೆ ಕಾರ್ಮಿಕರಿಗೆ ಇಎಸ್‌ಐ ಆಸ್ಪತ್ರೆಗಳಲ್ಲೆ ಪ್ರಯೋಗಾಲಯ ಆರಂಭ ಮಾಡಲಾಗುವುದು. ಕಾರ್ಮಿಕರಿಗೆ ಸೂಕ್ತ ಚಿಕಿತ್ಸೆ ಸೌಲಭ್ಯ ಕಲ್ಪಿಸಲು ಇಎಸ್‌ಐ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ ಎಂದರು.

ವರ್ಗಾವಣೆ: ಇಎಸ್‌ಐ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ರೋಗಿಗಳ ದೂರನ್ನು ಆಧರಿಸಿ ಸಮರ್ಪಕವಾಗಿ ಕಾರ್ಯ ನಿರ್ವಹಿಸದ ವೈದ್ಯರು, ಸಿಬ್ಬಂದಿ ಸೇರಿ 37 ಮಂದಿಯನ್ನು ವರ್ಗಾವಣೆ ಮಾಡಲು ಸೂಚನೆ ನೀಡಲಾಗಿದೆ ಎಂದು ವೆಂಕಟ ರಮಣಪ್ಪ ತಿಳಿಸಿದರು.

ಅನುದಾನ ಹೆಚ್ಚಳ: ಕಾರ್ಮಿಕರಿಗೆ ರಾಜೀವ್‌ಗಾಂಧಿ ವಸತಿ ನಿಗಮದ ಮೂಲಕ ವಸತಿ ಸೌಲಭ್ಯ ಕಲ್ಪಿಸಲು ಉದ್ದೇಶಿಸಿದ್ದು, ಕಾರ್ಮಿಕರ ವಸತಿ ಕಲ್ಪಿಸಲು ಒದಗಿಸುತ್ತಿದ್ದ ಅನುದಾನವನ್ನು 2 ಲಕ್ಷ ರೂ.ನಿಂದ 5ಲಕ್ಷ ರೂ.ಗಳಿಗೆ ಹೆಚ್ಚಿಸಿದ್ದು, ನಿಗಮದಿಂದಲೇ ಮನೆ ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು.
ಈಗಾಗಲೇ ಕಾರ್ಮಿಕ ಇಲಾಖೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕರ್ತವ್ಯ ಲೋಪವೆಸಗುವ ಮತ್ತು ಕರ್ತವ್ಯ ನಿರ್ಲಕ್ಷ ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದೆ. ಕರ್ತವ್ಯ ನಿರ್ಲಕ್ಷಿಸುವ ಅಧಿಕಾರಿಗಳನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಕಟ್ಟಡ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಣೆ ಕಾರ್ಯವನ್ನು ಮತ್ತಷ್ಟು ತ್ವರಿತಗೊಳಿಸಲಾಗುವುದು ಎಂದ ಅವರು, ಕಾರ್ಮಿಕ ವರ್ಗದ ಕಲ್ಯಾಣಕ್ಕೆ ಅತ್ಯಂತ ಹೆಚ್ಚು ಪರಿಣಾಮಕಾರಿಯಾಗಿ ಇಲಾಖೆ ಕಾರ್ಯ ನಿರ್ವಹಿಸಲಿದೆ ಎಂದರು.

ಶ್ರಮ ಸಾಮರ್ಥ್ಯ ಕಿಟ್ ವಿತರಣೆ: ‘ಎಲೆಕ್ಟ್ರಿಷಿಯನ್ ಸೇರಿದಂತೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಸೂಕ್ತ ತರಬೇತಿ ನೀಡಿ ಅವರಿಗೆ ‘ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ-ಶ್ರಮ ಸಾಮರ್ಥ್ಯ’ ಕಿಟ್ ಅನ್ನು ವಿತರಣೆ ಮಾಡಲಾಗುವುದು’
-ವೆಂಕಟರಮಣಪ್ಪ ಕಾರ್ಮಿಕ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News