×
Ad

ತಪ್ಪಾಗಿದ್ದರೆ ಜನತೆಯ ಕ್ಷಮೆ ಯಾಚಿಸುವೆ: ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ

Update: 2018-07-20 19:14 IST

ಬೆಂಗಳೂರು, ಜು. 20: ‘ವಿಧಾನಸಭೆ ಮೊಗಸಾಲೆಯಲ್ಲಿ ಜನ್ಮದಿನಾಚರಣೆಗೆ ಸ್ವಚ್ಛತಾ-ಭದ್ರತಾ ಸಿಬ್ಬಂದಿ ಮತ್ತು ಸಹೋದ್ಯೋಗಿಗಳು ಪ್ರೀತಿಯಿಂದ ಆಹ್ವಾನಿಸಿದ್ದಕ್ಕೆ ನಾನು ಪಾಲ್ಗೊಂಡಿದ್ದೆ. ಇದರಲ್ಲಿ ತಪ್ಪಾಗಿದ್ದರೆ ರಾಜ್ಯದ ಜನತೆಯ ಕ್ಷಮೆ ಕೋರುವೆ ಎಂದು ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ವಿಧಾನಸಭೆ ಮೊಗಸಾಲೆಯಲ್ಲಿ ಸಿಬ್ಬಂದಿ ಬೀಳ್ಕೊಡುಗೆ ಸಮಾರಂಭ ಮಾಡುತ್ತಿದ್ದರು. ಇದು ನಮ್ಮ ಕರ್ಮಭೂಮಿ ಆಗಿದ್ದರಿಂದ ಪಾಲ್ಗೊಂಡಿದ್ದೆ ಎಂದು ಹೇಳಿದರು.

ಜು.17ಕ್ಕೆ ನನ್ನ ಹುಟ್ಟುಹಬ್ಬ. ನಾನು ಪ್ರತಿನಿತ್ಯದಂತೆ ಕೆಲಸಕ್ಕೆ ಹಾಜರಾಗಿದ್ದೆ. ಸಿಬ್ಬಂದಿ ಕೇಕ್ ತರಿಸಿ ಹತ್ತು ನಿಮಿಷ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಿದರು. ಹೀಗಾಗಿ ಅವರೆಲ್ಲರ ಪ್ರೀತಿಯ ಒತ್ತಾಯಕ್ಕೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದೇನೆ. ಈ ವೇಳೆ ಮೇಲ್ಮನೆ ಸದಸ್ಯೆ ತಾರಾ ಅವರು ಹಾಜರಿದ್ದರು.
ಮೊಗಸಾಲೆಯಲ್ಲಿ ಯಾವುದೇ ಆಚರಣೆ ಮಾಡಬಾರದೆಂದು ಅವರಿಗೆ ಮನವಿ ಮಾಡಿದ್ದೆ. ಅಲ್ಲಿ ನಾನು ಯಾವುದೇ ಸಂಭ್ರಮಾಚರಣೆ ಮಾಡಿಲ್ಲ. ಅದನ್ನು ನಾನೂ ಸಂಘಟಿಸಿಲ್ಲ. ಮೊಗಸಾಲೆಯಲ್ಲಿ ಉಪಾಹಾರ ಸೇವಿಸಬಹುದು. ಅದಕ್ಕೆ ಅವಕಾಶವಿದೆ. ಮುಂದೆ, ಹೀಗಾಗದಂತೆ ನೋಡಿಕೊಳ್ಳುವೆ ಎಂದು ಮೂರ್ತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News