ರಾಜಕೀಯ ಅನಿವಾರ್ಯವಾದರೂ ಅಧಿಕಾರವೇ ಮುಖ್ಯವಲ್ಲ: ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆ
ಬೆಂಗಳೂರು, ಜು.20: ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ರಾಜಕೀಯ ಅನಿವಾರ್ಯವಾಗಿದ್ದರೂ ಅಧಿಕಾರವೇ ಮುಖ್ಯವಲ್ಲ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬಿ ಅಭಿಪ್ರಾಯಿಸಿದರು.
ಶುಕ್ರವಾರ ನಗರದಲ್ಲಿ ನಡೆದ ಎಸ್‌ಡಿಪಿಐನ ರಾಜ್ಯ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ಕೇವಲ ಅಧಿಕಾರಕ್ಕಾಗಿ ರಾಜಕೀಯ ಮಾಡುವುದು ನಮ್ಮ ಉದ್ದೇಶವಲ್ಲ. ಜನಪರ ಅಗತ್ಯಗಳನ್ನು ಈಡೇರಿಸುವುದಕ್ಕಾಗಿ ಎಸ್‌ಡಿಪಿಐ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿದೆ ಎಂದು ತಿಳಿಸಿದರು.
ಎಸ್‌ಡಿಪಿಐ ಚುನಾವಣಾ ಮತ್ತು ಹೋರಾಟ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ರಾಜ್ಯ ಮಟ್ಟದಲ್ಲಿ ತನ್ನದೇ ಆದಂತಹ ಸ್ಥಾನವನ್ನು ಹೊಂದಿದೆ. ರಾಜ್ಯದಲ್ಲಿರುವ ಪ್ರಮುಖ ರಾಜಕೀಯ ಪಕ್ಷಗಳು ಜನರಿಂದ ಸಾಕಷ್ಟು ಅಂತರವನ್ನು ಕಾಯ್ದುಕೊಂಡಿವೆ. ಇಂತಹ ಸಂದರ್ಭದಲ್ಲಿ ಎಸ್‌ಡಿಪಿಐನ ಜವಾಬ್ದಾರಿ ಹೆಚ್ಚಿದೆ ಎಂದು ಅವರು ಅಭಿಪ್ರಾಯಿಸಿದರು.
ಈ ವೇಳೆ ನಡೆದ ಸಭೆಯಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ನಡೆಯುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ರಾಜ್ಯ ಉಪಾಧ್ಯಕ್ಷರಾಗಿದ್ದ ಅಬ್ದುಲ್ ಮಜೀದ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯ ಕಾರ್ಯದರ್ಶಿಯಾಗಿದ್ದ ಅಲ್ಫೋನ್ಸೋ ಫ್ರಾಂಕೋ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಇದರಿಂದ ತೆರವಾದ ಸ್ಥಾನಕ್ಕೆ ನೂತನ ರಾಜ್ಯ ಉಪಾಧ್ಯಕ್ಷರಾಗಿ ನ್ಯಾಯವಾದಿ ಅಬ್ದುಲ್ ಮಜೀದ್ ಖಾನ್ ಹಾಗೂ ರಾಜ್ಯ ಕಾರ್ಯದರ್ಶಿಯಾಗಿ ಕುಮಾರಸ್ವಾಮಿ ಮೈಸೂರು ರವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ರಾಜ್ಯ ನಾಯಕರು ಹಾಗೂ ವಿವಿಧ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಸ್ವಾಗತಿಸಿ, ಕಾರ್ಯದರ್ಶಿ ಅಕ್ರಂ ಹಸನ್ ವಂದಿಸಿದರು.