ಸಾಹಿತ್ಯ ಕ್ಷೇತ್ರದಲ್ಲಿ ಬದಲಾವಣೆ ಅಗತ್ಯ: ಬಿ.ಟಿ.ಲಲಿತಾ ನಾಯಕ್

Update: 2018-07-20 14:44 GMT

ಬೆಂಗಳೂರು, ಜು.20: ಇಂದಿನ ಕಾಲಘಟ್ಟದಲ್ಲಿ ಸಾಹಿತ್ಯದಲ್ಲಿ ಅಪಾರವಾದ ಬದಲಾವಣೆ ಕಾಣಬೇಕಾದ ಅಗತ್ಯವಿದೆ ಎಂದು ಸಾಹಿತಿ ಹಾಗೂ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಅಭಿಪ್ರಾಯಿಸಿದ್ದಾರೆ.

ಶುಕ್ರವಾರ ನಗರದ ಕಸಾಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ಟಿ.ಗಿರಿಜಾ ಸಾಹಿತ್ಯ ದತ್ತಿ ಹಾಗೂ ಮನೋಹರಿ ಪಾರ್ಥಸಾರಥಿ ಮನುಶ್ರೀ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

19 ನೆ ಶತಮಾನದಲ್ಲಿ ಬಸವಣ್ಣರಿಂದ ಆರಂಭವಾಗಿ, ಕುವೆಂಪು, ಬೇಂದ್ರೆ, ಗಿರೀಶ್ ಕಾರ್ನಾಡ್, ತೇಜಸ್ವಿ, ನಿರಂಜನ, ಅ.ನ.ಕೃ, ಕಾರಂತ, ಕಂಬಾರ ಸೇರಿದಂತೆ ಅನೇಕ ಸಾಹಿತಿಗಳು ಕನ್ನಡದಲ್ಲಿ ಚಿಂತನಾಶೀಲ ಸಾಹಿತ್ಯ ರಚಿಸಿದ್ದಾರೆ. ಆದರೆ, ಇತ್ತೀಚಿನ ಸಾಹಿತಿಗಳಲ್ಲಿ ಅದು ಕಂಡು ಬರುತ್ತಿಲ್ಲ. ಹಿಂದಿನ ಸಾಹಿತಿಗಳನ್ನು ತಿರುಗಿ ನೋಡಬೇಕಿದೆ ಎಂದು ಹೇಳಿದರು.

ಸಮ ಸಮಾನತೆಯ ಪ್ರತಿಪಾದಕರಾಗಿದ್ದ ಬಸವಣ್ಣರನ್ನು ಮೇಲು-ಕೀಳು ಎಂಬುದನ್ನು ಪ್ರಶ್ನಿಸಿ, ಅದನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸಿದ ಸಂದರ್ಭದಲ್ಲಿ ಅವರ ಮೇಲೆ ಹಲ್ಲೆ, ದಾಳಿ, ದೌರ್ಜನ್ಯಗಳು ನಡೆದವು. ಆದರೆ, ಇಂದಿಗೂ ಅದೇ ಪದ್ಧತಿ ಮುಂದುವರಿದಿದೆ. ಅಂತರ್ ಜಾತಿ ಅಥವಾ ಧರ್ಮದವರು ಪ್ರೀತಿಸಿ ವಿವಾಹವಾದರೆ ಮರ್ಯಾದೆ ಹತ್ಯೆ ಮಾಡುತ್ತಿದ್ದಾರೆ. ಇದನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸಾಹಿತಿಗಳು ಸಾಹಿತ್ಯವನ್ನು ರಚನೆ ಮಾಡುವ ಕಡೆಗೆ ಶ್ರಮಿಸಬೇಕು ಎಂದು ತಿಳಿಸಿದರು.

ಮಠ-ಮಂದಿರಗಳು ಜನರಲ್ಲಿ ಜಾಗೃತಿ ಮೂಡಿಸಬೇಕು. ಜನರಿಗೆ ಬದುಕುವುದನ್ನು ಕಲಿಸುವ ಮೂಲಕ ಜಾತೀಯತೆ ತೊಲಗಿಸಿ, ಸಮಾನತೆಯ ಆಶಯಗಳನ್ನು ತುಂಬಬೇಕಿದೆ. ಇತ್ತೀಚಿನ ದಿನಗಳಲ್ಲಿ ಮಠ-ಮಂದಿರಗಳಲ್ಲಿ ದ್ವೇಷ, ಅಸೂಯೆಯಿಂದ ಕೂಡಿದ ವಾತಾವರಣ ನಿರ್ಮಾಣವಾಗುತ್ತಿದ್ದು, ಇತ್ತೀಚೆಗೆ ಸ್ವಾಮೀಜಿಯೊಬ್ಬರಿಗೆ ಅನ್ನದಲ್ಲಿ ವಿಷ ಹಾಕಿ ಕೊಟ್ಟಿರುವುದು ಪ್ರಸ್ತುತ ನಿದರ್ಶನವಾಗಿದೆ ಎಂದು ನುಡಿದರು.

ಕಸಾಪ ಅಧ್ಯಕ್ಷ ಡಾ.ಮನುಬಳಿಗಾರ್ ಮಾತನಾಡಿ, ಕನ್ನಡದ ಬಗ್ಗೆ ಧ್ವನಿ ಎತ್ತುವ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರ ಹಾಗೂ ಚಳವಳಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಎಲ್ಲರೂ ಕನ್ನಡದ ಸೇವೆ ಮಾಡುತ್ತಿರುತ್ತಾರೆ. ಪ್ರಶಸ್ತಿ ಪಡೆದ ಡಾ.ಬಸವರಾಜ ಡೋಣೂರು ಸಮರ್ಥ ಕೆಲವು ಅನುವಾದಕರಲ್ಲಿ ಒಬ್ಬರಾಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡವನ್ನು ಬೆಳೆಸುವಲ್ಲಿ ಶ್ರಮಿಸುತ್ತಿದ್ದಾರೆ. ಅಲ್ಲದೆ, ಕುಲಶೇಖರಿ ಅವರು ಸಾಹಿತ್ಯ ಕ್ಷೇತ್ರಕ್ಕೆ ಅನನ್ಯವಾದ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಟಿ.ಗಿರಿಜಾ ಸಾಹಿತ್ಯ ದತ್ತಿ ಪ್ರಶಸ್ತಿಯನ್ನು ಸಾಹಿತಿ ಕುಲಶೇಖರಿ ಅವರಿಗೆ ಹಾಗೂ ಮನೋಹರಿ ಪಾರ್ಥಸಾರಥಿ ಮನುಶ್ರೀ ಪ್ರಶಸ್ತಿಯನ್ನು ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಸಚಿವ ಡಾ.ಬಸವರಾಜಡೋಣೂರು ಅವರಿಗೆ ಪ್ರದಾನ ಮಾಡಲಾಯಿತು. ಈ ವೇಳೆ ದತ್ತಿ ದಾನಿ ಟಿ.ಎಸ್.ಶೈಲಜಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News