ಪೌರ ಕಾರ್ಮಿಕರ ಹೆಸರಿನಲ್ಲಿ ವಂಚಿಸಿದರೆ ಕಠಿಣ ಕ್ರಮ: ಮೇಯರ್ ಸಂಪತ್‌ ರಾಜ್

Update: 2018-07-20 14:46 GMT

ಬೆಂಗಳೂರು, ಜು.20: ಪೌರ ಕಾರ್ಮಿಕರ ಪಟ್ಟಿಯಲ್ಲಿ ನಕಲಿ ಹೆಸರುಗಳನ್ನು ಸೇರಿಸಿ ಅವರ ವೇತನವನ್ನು ಪಡೆಯುತ್ತಿರುವುದು ಕಂಡು ಬಂದರೆ ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಕೆ.ಸಂಪತ್‌ ರಾಜ್ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಮಹದೇವಪುರ ವಲಯ ಕೇಂದ್ರ ಕಚೇರಿಯಲ್ಲಿ ಪೌರ ಕಾರ್ಮಿಕರಿಗೆ ಪಾವತಿಸಿರುವ ವೇತನಕ್ಕೆ ಸಂಬಂಧಿಸಿದ ದಾಖಲಾತಿಯನ್ನು ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

ಪೌರ ಕಾರ್ಮಿಕರ ಪಟ್ಟಿಯಲ್ಲಿ ನಕಲಿ ಪೌರಕಾರ್ಮಿಕರನ್ನು ಸೇರಿಸಿ ವೇತನ ಪಡೆಯುತ್ತಿರುವುದು ಕಂಡು ಬಂದರೆ, ವೇತನ ಪಡೆಯುತ್ತಿರುವ ಖಾಸಗಿ ವ್ಯಕ್ತಿಗಳು ಮತ್ತು ಈ ಅಕ್ರಮಕ್ಕೆ ಸಹಕಾರ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಪೌರ ಕಾರ್ಮಿಕರಿಗೆ ಬಾಕಿಯಿರುವ ವೇತನವನ್ನು ಅವರ ಹೆಸರಿನ ಖಾತೆಗೆ ಕೂಡಲೆ ವರ್ಗಾಯಿಸಬೇಕು. ಮತ್ತೊಮ್ಮೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಹೋರಾಟಗಳು, ಪ್ರತಿಭಟನೆಗಳು ನಡೆದರೆ ವಾರ್ಡ್‌ಮಟ್ಟದ ಅಧಿಕಾರಿಗಳನ್ನೆ ಇದಕ್ಕೆ ಹೊಣೆಗಾರರನ್ನಾಗಿಸಲಾಗುವುದು ಎಂದು ಮೇಯರ್ ಹೇಳಿದರು.

ಮಹದೇವಪುರ ವಲಯದಲ್ಲಿರುವ ಪೌರ ಕಾರ್ಮಿಕರ ಹೆಸರು, ಖಾತೆ, ವೇತನ ಸೇರಿದಂತೆ ಬ್ಯಾಂಕಿನ ಮಾಹಿತಿಗಳನ್ನು ಒಳಗೊಂಡ ಸಂಪೂರ್ಣ ವರದಿಯನ್ನು ಸೋಮವಾರದೊಳಗೆ ಬಿಬಿಎಂಪಿ ಕೇಂದ್ರ ಕಚೇರಿಗೆ ತಲುಪಿಸಬೇಕು. ಒಂದು ವೇಳೆ ಸೋಮವಾರದ ಬಳಿಕ ಪೌರ ಕಾರ್ಮಿಕರ ಸಮಸ್ಯೆಗಳು ಈ ಭಾಗದಲ್ಲಿ ಪುನರಾವರ್ತನೆಯಾದರೆ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಸಂಪತ್‌ ರಾಜ್ ಎಚ್ಚರಿಕೆ ನೀಡಿದರು.

ಒಂದು ವರ್ಷ ಕೆಲಸ ಮಾಡಿ ಕೆಲಸದಿಂದ ವಜಾಗೊಂಡಿರುವ ಪೌರ ಕಾರ್ಮಿಕರನ್ನು ಅಗತ್ಯವಿರುವ ವಾರ್ಡುಗಳಿಗೆ ಮರು ನೇಮಕ ಮಾಡಲು ಪರಿಶೀಲನೆ ನಡೆಸಲಾಗುವುದು. ಅಲ್ಲದೆ, ಪೌರಕಾರ್ಮಿಕರಿಗೆ ಇಎಸ್‌ಐ, ಪಿಎಫ್ ಹಾಗೂ ನಿವೃತ್ತಿ ಹೊಂದಿರುವವರಿಗೆ ಪಿಂಚಣಿ ಸೌಲಭ್ಯ ಕಲ್ಪಿಸಬೇಕೆಂದು ಜಂಟಿ ಆಯುಕ್ತೆ ವಾಸಂತಿ ಅಮರ್ ಪ್ರಸ್ತಾವನೆ ಇಟ್ಟಿದ್ದಾರೆ. ಈ ಬಗ್ಗೆ ಪಾಲಿಕೆಯ ಆಯುಕ್ತರೊಂದಿಗೆ ಚರ್ಚೆ ಮಾಡಿ ಕ್ರಮ ಕೈಗೊಳ್ಳುತ್ತೇನೆ ಎಂದು ಮೇಯರ್ ತಿಳಿಸಿದರು.

2011ರ ಜನಸಂಖ್ಯೆ ಸಮೀಕ್ಷೆ ಪ್ರಕಾರ 1965 ಪೌರ ಕಾರ್ಮಿಕರು ಮಹದೇವಪುರ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. 2018ನೆ ಸಾಲಿಗೆ ಇನ್ನು 817 ಮಂದಿ ಪೌರಕಾರ್ಮಿಕರ ಬೇಡಿಕೆಯಿದೆ. ಇದನ್ನು ಕೂಲಂಕಷವಾಗಿ ಪರಿಶೀಲಿಸಿ, ಹಂತ ಹಂತವಾಗಿ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ್ ಹೇಳಿದರು.

ಈ ಸಂದರ್ಭದಲ್ಲಿ ಉಪ ಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಬಿಬಿಎಂಪಿ ಸದಸ್ಯೆ ನೇತ್ರಾನಾರಾಯಣ್, ಜಂಟಿ ಆಯುಕ್ತೆ ವಾಸಂತಿ ಅಮರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News