ಉಪಸಭಾಪತಿ ಕೊಠಡಿ-ಕ್ಯಾಂಟೀನ್ ನವೀಕರಣಕ್ಕೆ ದುಂದುವೆಚ್ಚ ಮಾಡಿಲ್ಲ: ಬಸವರಾಜ ಹೊರಟ್ಟಿ

Update: 2018-07-20 16:40 GMT

ಬೆಂಗಳೂರು, ಜು.20: ವಿಧಾನಪರಿಷತ್ ಉಪಸಭಾಪತಿಯ ಕೊಠಡಿ ಹಾಗೂ ಕ್ಯಾಂಟೀನ್ ನವೀಕರಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅಂದಾಜು 6 ಕೋಟಿ ರೂ.ವೆಚ್ಚವಾಗಿದ್ದು, ನಿಯಮಾವಳಿಗಳನ್ನು ಮೀರಿ ಯಾವುದೆ ರೀತಿಯ ದುಂದು ವೆಚ್ಚ ಮಾಡಲಾಗಿಲ್ಲ ಎಂದು ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಸ್ಪಷ್ಟಣೆ ನೀಡಿದರು.

ಶುಕ್ರವಾರ ವಿಧಾನಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಮಾಡಿರುವ ಆರೋಪದಂತೆ ವಿಧಾನಪರಿಷತ್ತಿಗೆ ಸಂಬಂಧಿಸಿದ ಈ ಕಾಮಗಾರಿಗಳಿಗೆ 18 ಕೋಟಿ ರೂ.ವೆಚ್ಚ ಮಾಡಲಾಗಿಲ್ಲ ಎಂದರು.

ಕೆಆರ್‌ಐಡಿಎಲ್ ಸಂಸ್ಥೆ ವತಿಯಿಂದ ಈ ನವೀಕರಣ ಕಾಮಗಾರಿ ನಡೆದಿದೆ. 4ಜಿ ವಿನಾಯಿತಿಯಡಿ ಈ ಕಾಮಗಾರಿ ನಡೆಸಿದ್ದರಿಂದ ಟೆಂಡರ್ ಕರೆಯುವ ಅಗತ್ಯವಿರಲಿಲ್ಲ. ಹೀಗಾಗಿ, ಟೆಂಡರ್ ಕರೆಯದೆ ಕಾಮಗಾರಿ ನಡೆಸಲಾಗಿದೆ ಎಂದು ಅಧಿಕಾರಿಗಳು ತನಗೆ ಮಾಹಿತಿ ನೀಡಿರುವುದಾಗಿ ಅವರು ತಿಳಿಸಿದರು.

ಎಸ್.ಮೂರ್ತಿ ವಿರುದ್ಧ ಸ್ಪೀಕರ್‌ಗೆ ಪತ್ರ: ವಿಧಾನಪರಿಷತ್ತಿಗೆ ಸಂಬಂಧಿಸಿದಂತೆ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಆರೋಪ ಮಾಡುವುದು ತಪ್ಪು. ಸಂಬಂಧವಿಲ್ಲದವರು ನಮ್ಮ ಸದನದ ಬಗ್ಗೆ ಮಾತನಾಡುವುದು ಸರಿಯಲ್ಲ. ಈ ಸಂಬಂಧ ವಿಧಾನಸಭೆಯ ಸ್ಪೀಕರ್ ರಮೇಶ್‌ ಕುಮಾರ್‌ಗೆ ಪತ್ರ ಬರೆಯುತ್ತೇನೆ ಎಂದು ಬಸವರಾಜ ಹೊರಟ್ಟಿ ಹೇಳಿದರು.

ಒಂದು ವೇಳೆ ಅಕ್ರಮ ನಡೆದಿದ್ದರೆ ದಾಖಲೆ ಸಮೇತ ಅವರು ಮಾಹಿತಿ ನೀಡಲಿ. ನಾನು ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಚರ್ಚಿಸಿ, ತಪ್ಪು ನಡೆದಿರುವುದು ಕಂಡು ಬಂದರೆ ಕ್ರಮ ಕೈಗೊಳ್ಳುತ್ತೇನೆ. ಅದನ್ನು ಬಿಟ್ಟು ತಪ್ಪು ಮಾಹಿತಿಗಳನ್ನು ನೀಡಬಾರದು ಎಂದು ಅವರು ತಿಳಿಸಿದರು.

ಲೋಕೋಪಯೋಗಿ ಇಲಾಖೆಯವರು ವರ್ಷದ 365 ದಿನವು ಕೆಲಸ ಮಾಡುತ್ತಿರುತ್ತಾರೆ. ಶಾಸಕರ ಭವನದಲ್ಲಿ ಒಳ್ಳೆಯ ಟೈಲ್ಸ್ ತೆಗೆದು ಬೇರೆ ಹಾಕಿದ್ದಾರೆ. ಹೊರ ಗುತ್ತಿಗೆ ಕೊಡುತ್ತಾರೆ. ವಿಧಾನಸೌಧದ ಆವರಣದಲ್ಲಿರುವ ವಾಹನ ನಿಲುಗಡೆ ಪ್ರದೇಶದಲ್ಲಿಯೂ ಅದನ್ನೆ ಮಾಡುತ್ತಿದ್ದಾರೆ ಎಂದು ಬಸವರಾಜ ಹೊರಟ್ಟಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News