ವಿಚಾರವಾದಿಗಳ ಹತ್ಯೆ ಪ್ರಾಯೋಜಕರು ಶೀಘ್ರ ಪತ್ತೆ: ಚಿದಾನಂದ ರಾಜ್‌ಘಟ್ಟ
ಬೆಂಗಳೂರು, ಜು.20: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಎಸ್‌ಐಟಿ ನಡೆಸುತ್ತಿರುವ ತನಿಖೆ ತೃಪ್ತಿ ತಂದಿದ್ದು, ಶೀಘ್ರದಲ್ಲಿಯೇ ವಿಚಾರವಾದಿಗಳ ಹತ್ಯೆ ಹಿಂದಿರುವ ಪ್ರಾಯೋಜಕರು ಪತ್ತೆಯಾಗಬಹುದು ಎಂದು ಲೇಖಕ, ಗೌರಿ ಲಂಕೇಶ್ ಮಾಜಿ ಪತಿ ಚಿದಾನಂದ ರಾಜ್‌ಘಟ್ಟ ಇಂದಿಲ್ಲಿ ಹೇಳಿದ್ದಾರೆ.
ಶುಕ್ರವಾರ ನಗರದ ಎಂ.ಜಿ.ರಸ್ತೆಯ ಹಿಗ್ಗಿನ್ ಬಾಥಮ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ, 'ಇಲ್ಲಿಬರಲ್ ಇಂಡಿಯಾ; ಗೌರಿ ಲಂಕೇಶ್ ಅಂಡ್ ದಿ ಏಜ್ ಆಫ್ ಆನ್ ರೀಸನ್' ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 'ಗೌರಿ ಹತ್ಯೆ ಪ್ರಕರಣವನ್ನು ವಿಶೇಷ ತನಿಖಾ ತಂಡದ ಅಧಿಕಾರಿಗಳು ನಿರ್ದಿಷ್ಟ ದಿಕ್ಕಿನಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂಬ ತೃಪ್ತಿಯಿದೆ. ಗೌರಿ ಹತ್ಯೆಯ ತನಿಖೆಯ ಜೊತೆಗೆ ವಿಚಾರವಾದಿಗಳಾದ ಪ್ರೊ. ಎಂ.ಎಂ.ಕಲಬುರ್ಗಿ, ದಾಭೋಲ್ಕರ್ ಹಾಗೂ ಪನ್ಸಾರೆ ಹತ್ಯೆ ಪ್ರಕರಣಗಳು ಬಯಲಿಗೆಳೆಯುತ್ತಾರೆ ಎಂದು ತಿಳಿಸಿದರು.
ಭಾರತ ಮತ್ತು ಕರ್ನಾಟಕ ರಾಜಕೀಯವಾಗಿ ಯಾವ ದಿಕ್ಕಿನಲ್ಲಿ ಸಾಗುತ್ತಿದೆ. ವಿಚಾರವಾದಿಗಳ ಹತ್ಯೆಗಳು ಯಾಕೆ ನಡೆಯುತ್ತಿವೆ. ಇದನ್ನು ಜನರು ಯಾವ ರೀತಿ ಸ್ವೀಕರಿಸುತ್ತಿದ್ದಾರೆ ಎಂಬುದು 'ಇಲ್ಲಿಬರಲ್ ಇಂಡಿಯಾ: ಗೌರಿ ಆಂಡ್ ದಿ ಏಜ್ ಆಫ್ ಅನ್ ರೀಸನ್' ಮೂಲಕ ತಿಳಿಸಲಾಗಿದೆ ಎಂದರು.
ಧರ್ಮ ಎಂಬುದು ವ್ಯಾವಹಾರಿಕವಾಗಿ ಮಾರ್ಪಟ್ಟಿದ್ದು, ರಿಯಲ್ ಎಸ್ಟೇಟ್ ಉದ್ಯಮಿಗಳು ಶಿಕ್ಷಣ ಸಂಸ್ಥೆಗಳ ಮೂಲಕ ಧಾರ್ಮಿಕ ಬೋಧನೆಗಳನ್ನು ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಚಿದಾನಂದ ನುಡಿದರು.
ಭಾರತ ಬಹುಸಂಸ್ಕೃತಿಯ ದೇಶವಾಗಿದೆ. ಧಾರ್ಮಿಕ ಭಾವನೆಯಿಂದ ಮಹಿಳೆಯರನ್ನು ವಿವಿಧ ರೂಪಗಳಲ್ಲಿ ಪೂಜಿಸುತ್ತೇವೆ. ಅಲ್ಲದೇ, ಆರ್ಥಿಕವಾಗಿ ನಾವು ಎಷ್ಟೇ ಮುಂದುವರೆದಿದ್ದರೂ ಸಹ ಮಹಿಳೆಯರನ್ನು ದ್ವಿತೀಯ ದರ್ಜೆಯವರಂತೆ ನೋಡುವ ದೃಷ್ಟಿ ಬದಲಾಗುವುದಿಲ್ಲ. ಧರ್ಮಗಳನ್ನು ಉದ್ಯಮಿಗಳು ಧರ್ಮಗಳ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳ ಮೂಲಕ ಧಾರ್ಮಿಕ ಭಾವನೆ ಬಿತ್ತುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪತ್ರಕರ್ತೆ ಗೌರಿ ಮತ್ತು ನಾನು ದಾಂಪತ್ಯ ಜೀವನದಿಂದ ಬೇರೆ ಬೇರೆಯಾಗಿದ್ದರೂ ಸಹ ಒಳ್ಳೆಯ ಸ್ನೇಹಿತರಾಗಿದ್ದೆವು. ಭಾರತಕ್ಕೆ ಬಂದಾಗಲೆಲ್ಲ ಭೇಟಿಯಾಗುತ್ತಿದ್ದೆ. ದೇಶದ ಸಾಮಾಜಿಕ, ರಾಜಕೀಯ ಹಾಗೂ ಹೋರಾಟದ ಕುರಿತು ಚರ್ಚಿಸುತ್ತಿದ್ದೆವು ಎಂದು ಅವರು ನೆನಪು ಮಾಡಿಕೊಂಡರು.