ಬಾಕಿ ಹಣ ಕೇಳಿದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ
ಬೆಂಗಳೂರು, ಜು.20: ಬಾಕಿ ಹಣ ನೀಡುವಂತೆ ಕೇಳಿದ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಇಲ್ಲಿನ ಕೊಡಿಗೇಹಳ್ಳಿಯ ಭದ್ರಪ್ಪ ಲೇಔಟ್‌ನಲ್ಲಿ ನಡೆದಿದೆ.
ನಗರದ ನಿವಾಸಿ ಜೋಸೆಫ್ (40) ಎಂಬುವರ ಮೇಲೆ ಹಲ್ಲೆ ನಡೆದಿದ್ದು, ಬೋರ್ವೆಲ್ ವ್ಯವಹಾರ ನಡೆಸುತ್ತಿದ್ದ ಪುಟ್ಟ ಮಾದೇಗೌಡ ಮತ್ತು ಆತನ ಸಹಚರರು ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ.
ತಮಿಳುನಾಡು ಮೂಲದ ಬೋರ್ವೆಲ್ವೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಜೋಸೆಫ್ ಬಾಕಿ ಹಣ ಕೇಳಲು ಬೆಂಗಳೂರಿಗೆ ಬಂದಿದ್ದರು. ಗಂಗಾ ಬೋರ್ವೆಲ್ಸ್ ನಡೆಸುವ ಪುಟ್ಟ ಮಾದೇಗೌಡ ಪಿವಿಸಿ ಪೈಪ್ ಖರೀದಿಸಿ ಹಣ ಕೊಟ್ಟಿರಲಿಲ್ಲ ಎನ್ನಲಾಗಿದೆ. 25 ಲಕ್ಷ ಹಣ ಬಾಕಿ ಕೇಳಿದಾಗ, ಕೊಠಡಿಯೊಂದರಲ್ಲಿ ಕೂಡಿ ಪುಟ್ಟಮಾದೇಗೌಡ ಮತ್ತು ಆತನ ಸಹಚರರು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆಂದು ಜೋಸೆಫ್ ದೂರಿದ್ದಾರೆ.
ಹಲ್ಲೆಯಿಂದ ಗಾಯಗೊಂಡಿರುವ ಜೋಸೆಫ್ ಅವರನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ತಮಿಳುನಾಡಿನ ಬೋರ್ವೆಲ್ ಅಸೋಸಿಯೇಷನ್ ಪ್ರತಿನಿಧಿಗಳು ದೂರು ನೀಡಿ ಕಾನೂನಿನ ಕ್ರಮ ತೆಗೆದುಕೊಳ್ಳಲು ಮತ್ತು ಬಾಕಿ ಹಣ ಕೊಡಿಸುವಂತೆ ಮನವಿ ಮಾಡಿದ್ದಾರೆ.