ಇಂದಿನಿಂದ ಮಹಿಳಾ ಹಾಕಿ ವಿಶ್ವಕಪ್

Update: 2018-07-20 18:39 GMT

ಲಂಡನ್, ಜು.20: ಹದಿನಾಲ್ಕನೇ ಆವೃತ್ತಿಯ ಮಹಿಳಾ ಹಾಕಿ ವಿಶ್ವಕಪ್‌ಗೆ ಶನಿವಾರ ಲಂಡನ್‌ನಲ್ಲಿ ಚಾಲನೆ ದೊರೆಯಲಿದ್ದು,ಲಂಡನ್‌ನ ಲೀ ವ್ಯಾಲಿ ಹಾಕಿ ಮತ್ತು ಟೆನಿಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಭಾರತ ಆತಿಥೇಯ ಇಂಗ್ಲೆಂಡ್‌ನ್ನು ಎದುರಿಸಲಿದೆ.

ಈಗಾಗಲೇ ನಡೆದಿರುವ ಹದಿಮೂರು ಎಫ್‌ಐಎಚ್ ಮಹಿಳಾ ಹಾಕಿ ವಿಶ್ವಕಪ್‌ನಲ್ಲಿ ಭಾರತ 6ಬಾರಿ ಭಾಗವಹಿಸಿದೆ. ಭಾರತ ಹಾಕಿ ವಿಶ್ವಕಪ್‌ನಲ್ಲಿ ಭಾಗವಹಿಸಲಿರುವ ನಂ.10 ತಂಡವಾಗಿದೆ. ಏಶ್ಯಾದಿಂದ ಭಾರತದೊಂದಿಗೆ ದಕ್ಷಿಣ ಕೊರಿಯಾ (ನಂ.9) ಮತ್ತು ಚೀನಾ(ನಂ.8) ತಂಡಗಳು ಭಾಗವಹಿಸಲಿದೆ.

2018ನೇ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 4ನೇ ಸ್ಥಾನ ಪಡೆದಿರುವ ಭಾರತದ ವನಿತೆಯರ ಹಾಕಿ ತಂಡ 1974ರಲ್ಲಿ ನಾಲ್ಕನೇ ಸ್ಥಾನ ಗಳಿಸಿರುವುದು ವಿಶ್ವಕಪ್‌ನಲ್ಲಿ ಮಾಡಿರುವ ಈ ವರೆಗಿನ ದೊಡ್ಡ ಸಾಧನೆ. ಪಶ್ಚಿಮ ಜರ್ಮನಿ ವಿರುದ್ಧ ಮೂರನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಪಶ್ಚಿಮ ಜರ್ಮನಿ ವಿರುದ್ಧ 0-2 ಅಂತರದಲ್ಲಿ ಸೋಲು ಅನುಭವಿಸಿತ್ತು. ಭಾರತ 1978ರಲ್ಲಿ 7ನೇ, 1983ರಲ್ಲಿ 11ನೇ, 1998ರಲ್ಲಿ 12ನೇ, 2006ರಲ್ಲಿ 11ನೇ ಮತ್ತು 2010ರಲ್ಲಿ 9ನೇ ಸ್ಥಾನ ಗಳಿಸಿತ್ತು.

ಕೋಚ್ ಶೋರ್ಡ್ ಮ್ಯಾರಿಜ್ನೆ ಮತ್ತು ಸ್ಟ್ರೈಕರ್ ರಾಣಿ ರಾಂಪಾಲ್ ನಾಯಕತ್ವದ ತಂಡ ಸ್ಪೇನ್‌ನಲ್ಲಿ ಅಭ್ಯಾಸ ಶಿಬಿರದಲ್ಲಿ ಉತ್ತಮ ತಯಾರಿ ನಡೆಸಿದೆ. ಈ ಬಾರಿ ವಿಶ್ವಕಪ್‌ನಲ್ಲಿ ಆಡಲಿರುವ ಭಾರತದ ತಂಡದಲ್ಲಿರುವ 18 ಮಂದಿ ಆಟಗಾರ್ತಿಯರ ಪೈಕಿ 16 ಮಂದಿ ಮೊದಲ ಬಾರಿ ಪಾಲ್ಗೊಳ್ಳಲಿದ್ದಾರೆ. ನಾಯಕಿ ರಾಣಿ ರಾಂಪಾಲ್ ಮತ್ತು ದೀಪಿಕಾ ಹಿಂದಿನ ವಿಶ್ವಕಪ್‌ನಲ್ಲಿ ಪಾಲ್ಗೊಂಡಿದ್ದ ಅನುಭವಿ ಆಟಗಾರ್ತಿಯರು.

ವಿಶ್ವಕಪ್‌ನ ಗ್ರೂಪ್ ಹಂತದ ಹಣಾಹಣಿಯಲ್ಲಿ ಎಫ್‌ಐಎಚ್ ರ್ಯಾಂಕಿಂಗ್‌ನಲ್ಲಿ ನಂ.10 ಭಾರತದ ಜೊತೆ ‘ಬಿ’ ಗುಂಪಿನಲ್ಲಿ ನಂ.2 ಇಂಗ್ಲೆಂಡ್, ನಂ.7 ಅಮೆರಿಕ ಮತ್ತು ನಂ.16 ಐರ್ಲೆಂಡ್ ಸ್ಥಾನ ಪಡೆದಿದೆ.

ಗ್ರೂಪ್ ಹಂತದಲ್ಲಿ ಮೊದಲ ಸ್ಥಾನ ಪಡೆಯುವ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಪಡೆಯಲಿದೆ. 2 ಮತ್ತು 3ನೇ ಸ್ಥಾನ ಗಳಿಸಿರುವ ತಂಡಗಳು ಕ್ರಾಸ್ ಓವರ್ ಪಂದ್ಯಗಳಲ್ಲಿ ಆಡುವುದರ ಮೂಲಕ ಉಳಿದ 4 ಕ್ವಾರ್ಟರ್ ಫೈನಲ್‌ನಲ್ಲಿ ಅವಕಾಶ ದೃಢಪಡಿಸಲಿದೆ.

ಅರ್ಜೆಂಟೀನ, ಆಸ್ಟ್ರೇಲಿಯ, ಬೆಲ್ಜಿಯಂ, ಚೀನಾ, ಜರ್ಮನಿ, ಇಟಲಿ, ಜಪಾನ್, ಕೊರಿಯಾ, ಹಾಲೆಂಡ್, ನ್ಯೂಝಿಲೆಂಡ್, ದಕ್ಷಿಣ ಆಫ್ರಿಕ ಮತ್ತು ಸ್ಪೇನ್ ಕಣದಲ್ಲಿರುವ ಇತರ 12 ತಂಡಗಳು. ಹಾಲಿ ಚಾಂಪಿಯನ್ ಹಾಲೆಂಡ್ ವಿಶ್ವಕಪ್‌ನಲ್ಲಿ 7 ಬಾರಿ ಪ್ರಶಸ್ತಿ ಜಯಿಸಿದೆ.

ವಿಶ್ವಕಪ್‌ನ ಲ್ಲಿ ಭಾಗವಹಿಸಲಿರುವ ತಂಡಗಳು 16

ಗ್ರೂಪ್ ಎ : ಚೀನಾ, ಇಟಲಿ, ಕೊರಿಯಾ, ಹಾಲೆಂಡ್

ಗ್ರೂಪ್ ಬಿ : ಇಂಗ್ಲೆಂಡ್, ಭಾರತ, ಐರ್ಲೆಂಡ್, ಅಮೆರಿಕ

ಗ್ರೂಪ್ ಸಿ: ಅರ್ಜೆಂಟೀನ, ಜರ್ಮನಿ, ದಕ್ಷಿಣ ಆಫ್ರಿಕ, ಸ್ಪೇನ್

ಗೂಪ್ ಡಿ: ಆಸ್ಟ್ರೇಲಿಯ, ಬೆಲ್ಜಿಯಂ, ಜಪಾನ್, ನ್ಯೂಝಿಲೆಂಡ್

,,,,,,,

ಭಾರತ ಎದುರಿಸಲಿರುವ ಪಂದ್ಯಗಳು

ಜು.21: ಭಾರತ -ಇಂಗ್ಲೆಂಡ್ , ಸಮಯ ಸಂಜೆ 6:30

ಜು.26: ಭಾರತ -ಐರ್ಲೆಂಡ್ , ಸಮಯ ಸಂಜೆ 6:30

ಜು.29: ಭಾರತ-ಅಮೆರಿಕ, ಸಮಯ ಸಂಜೆ 6:30

,,,,,,,,,

ಭಾರತದ ತಂಡ

ಗೋಲು ಕೀಪರ್: ಸವಿತಾ (ಉಪನಾಯಕಿ), ರಜನಿ ಎಟಿಮಾರ್ಪು

ಡಿಫೆಂಡರ್: ಸುನಿತಾ ಲಕ್ರಾ, ದೀಪ್ ಗ್ರೇಸಿ ಎಕ್ಕಾ, ದೀಪಿಕಾ, ಗುರ್ಜಿತ್ ಕೌರ್, ರೀನಾ ಖೋಖರ್.

ಮಿಡ್ ಫೀಲ್ಡರ್: ನಮಿತಾ ಟೊಪ್ಪೊ, ಲಿಲಿಮಾ ಮಿಂಝ್, ಮೊನಿಕಾ, ನೇಹಾ ಗೋಯಲ್, ನವ್‌ಜೋತ್ ಕೌರ್, ನಿಕ್ಕಿ ಪ್ರಧಾನ್.

ಫಾರ್ವಡ್ಸ್: ರಾಣಿ ರಾಂಪಾಲ್(ನಾಯಕಿ), ವಂದನಾ ಕಟಾರಿಯಾ, ನವ್‌ನೀತ್ ಕೌರ್,್ ಲಾರ್ಲೆಮ್‌ಸಿಯಮಿ, ಉದಿತಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News