‘‘ಹಾಪುರ್ ಗುಂಪು ಥಳಿತದಲ್ಲಿ ಪೊಲೀಸರು ಭಾಗಿಯಾಗಿದ್ದರು; ಸುಳ್ಳು ದೂರು ನೀಡುವಂತೆ ಅವರು ನಮಗೆ ಬಲವಂತ ಮಾಡಿದ್ದರು’’

Update: 2018-07-20 18:43 GMT

ಜೂನ್ 18ರಂದು ಹಿಂಸಾನಿರತ ಗುಂಪೊಂದು ಸಮಯುದ್ದೀನ್ ಮತ್ತು ಮುಹಮ್ಮದ್ ಕಾಸಿಮ್‌ರನ್ನು ಲಾಠಿ, ದೊಣ್ಣೆ, ಬ್ಯಾಟ್ ಮತ್ತು ಕಲ್ಲುಗಳಿಂದ ಮಾರಣಾಂತಿಕವಾಗಿ ಥಳಿಸಿತು. ಇದು ನಡೆದದ್ದು ಉತ್ತರಪ್ರದೇಶದ ಹಾಪುರ್ ಜಿಲ್ಲೆಯ ಬಝೇರಾ ಎಂಬ ಹಳ್ಳಿಯಲ್ಲಿ. ತೀವ್ರ ಗಾಯಗಳಿಂದ ಕಾಸಿಮ್ ಮೃತಪಟ್ಟರು. ಸಮಯುದ್ದೀನ್ ಗಂಭೀರ ಗಾಯಗೊಂಡಿದ್ದರೂ ಬದುಕುಳಿದರು. ಗುಂಪು ದಾಳಿ ನಡೆದ ಬಳಿಕ ಈಗ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತಾಡಿರುವ ಸಮಯುದ್ದೀನ್ ಹೇಳುವಂತೆ, ಅಂದು ನಡೆದ ಘಟನೆಯಲ್ಲಿ ಪೊಲೀಸರ ಪಾತ್ರವಿದೆ.

ಅವರು ಹೇಳುವಂತೆ, ಅವರಿನ್ನೂ ಸಮಯುದ್ದೀನ್ ಬಳಿ ಮಾತಾಡಿಲ್ಲ. ಏನಾಯಿತೆಂದು ಕೂಡ ಕೇಳಿಲ್ಲ. ಆದರೂ ಬಂಧಿತರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಅವರು ತನ್ನ ಕುರ್ಚಿಯಲ್ಲಿ ಅಲ್ಲಾಡಬೇಕಾದರೂ ಅವರಿಗೆ ಇನ್ನೊಬ್ಬರ ಸಹಾಯ ಬೇಕು. ಅವರ ಮೈಮೇಲೆಲ್ಲಾ ಗಾಯಗಳಾಗಿವೆ.
ಯುಪಿ ಪೊಲೀಸರು ಸಮಯುದ್ದೀನ್‌ರ ಹೇಳಿಕೆಯನ್ನು ದಾಖಲೆ, ಮಾಡಿಕೊಂಡಿಲ್ಲ. ಅವರು ಆ ಗುಂಪು ಪಟ್ಟಿಯಲ್ಲಿ ಬದುಕಿ ಉಳಿದವರು ಮತ್ತು ಓರ್ವ ಪ್ರತ್ಯಕ್ಷದರ್ಶಿ. ಆದರೂ, ಪೊಲೀಸರು ಅವರ ಹೇಳಿಕೆಯನ್ನು ದಾಖಲಿಸುವ ಗೋಜಿಗೆ ಹೋಗಲಿಲ್ಲ ಎಂದಿದ್ದಾರೆ. ಈಗ ಅವರಿಗೆ ಕಾನೂನಿನ ಬೆಂಬಲ ನೀಡಲಿರುವ ಸುಪ್ರೀಂ ಕೋರ್ಟ್‌ನ ನ್ಯಾಯವಾದಿ ವೃಂದಾ ಗ್ರೋವರ್, ‘‘ಸಮಯುದ್ದೀನ್ ಹೇಳುವಂತೆ, ಜೂನ್ 18ರಂದು ಬೆಳಗ್ಗೆ ಸುಮಾರು 10:30ರ ಹೊತ್ತಿಗೆ ಅವರು ತನ್ನ ಗದ್ದೆಯಲ್ಲಿ ಕುಳಿತಿದ್ದಾಗ ಸುಮಾರು 15-20 ಮಂದಿಯ ಗುಂಪೊಂದು ಕಾಸಿಮ್ ಮೇಲೆ ದಾಳಿ ಮಾಡುವುದನ್ನು ನೋಡಿದೆ. ಯಾಕೆ ಅವನನ್ನು ಹೊಡೆಯುತ್ತಿದ್ದೀರಿ? ಎಂದು ಕೇಳಿದೆ. ‘ನಿನಗೂ ಒಂದು ಪಾಠ ಕಲಿಸುತ್ತೇವೆ’ ಎಂದು ಹೇಳಿದ ಅವರು ನನ್ನನ್ನೂ ಥಳಿಸಲಾರಂಭಿಸಿದರು. ಕಾಸಿಮ್ ಮತ್ತು ನಾನು ಇಬ್ಬರೂ ಹಸುಗಳನ್ನು ಕೊಲ್ಲುತ್ತಿದ್ದೇವೆ ಎಂದರು. ಗದ್ದೆಯಲ್ಲಿ ಹಸುವೂ ಇಲ್ಲ, ಅದನ್ನು ಕೊಲ್ಲಲು ಯಾವುದೇ ಆಯುಧವೂ ಇಲ್ಲ ಎಂದು ಅವರು ಹೇಳಿದರೂ ಅವರು ಕೇಳಿಸಿಕೊಳ್ಳಲಿಲ್ಲ.’’

ಸರದಿಯ ಪ್ರಕಾರ ಜನ ಅವರನ್ನು ಥಳಿಸುತ್ತಿದ್ದರು. ಸುಮಾರು ಒಂದು ಕಿ.ಮೀ. ದೂರದ ವರೆಗೆ ಅವರನ್ನು ಎಳೆದುಕೊಂಡು ಹೋಗಲಾಯಿತು.
ಸಮಯುದ್ದೀನ್‌ರನ್ನು ಬಝೇರಾ ಹಳ್ಳಿಯ ದೇವಾಲಯಕ್ಕೆ ಕೊಂಡೊಯ್ದು ಅಲ್ಲಿ ಹೊರಗೆ ಬಿಸಿಲಿನಲ್ಲಿ ಬಿಡಲಾಯಿತು. ಅವರು ಪ್ರಜ್ಞೆ ಕಳೆದುಕೊಳ್ಳಲಾರಂಭಿಸಿದರು. ಆದರೂ ಕೆಲವರು ಇನ್ನೂ ಅವರನ್ನು ಒದೆಯುತ್ತಿದ್ದರು, ಗುದ್ದುತ್ತಿದ್ದರು.

ಬಳಿಕ ಅವರನ್ನು ಪೊಲೀಸ್ ವ್ಯಾನ್ ಒಂದರೊಳಕ್ಕೆ ತಳ್ಳಲಾಯಿತು. ಪೊಲೀಸರು ಅವರನ್ನು ಹಲವು ಆಸ್ಪತ್ರೆಗಳಿಗೆ ಕರೆದೊಯ್ದರು. ಹೆಚ್ಚಿನ ಆಸ್ಪತ್ರೆಗಳು ಅವರನ್ನು ದಾಖಲಿಸಿಕೊಳ್ಳಲು ನಿರಾಕರಿಸಿದವು. ಒಂದು ಆಸ್ಪತ್ರೆಯಲ್ಲಿ ಅವರಿಗೆ ಕಾಸಿಮ್ ಸತ್ತುಹೋದನೆಂದು ಯಾರೋ ಹೇಳುತ್ತಿದ್ದದ್ದು ಕೇಳಿಸಿತು.

ಮಧ್ಯಾಹ್ನ ಸುಮಾರು 12 ಗಂಟೆಗೆ ಸಮಯುದ್ದೀನ್‌ನ ಸಹೋದರ ಯಾಸೀನ್‌ಗೆ ವಿಷಯ ತಿಳಿಯಿತು. ಆತ ತಕ್ಷಣ ಪೊಲೀಸ್ ಠಾಣೆಗೆ ಧಾವಿಸಿದರು. ಆದರೆ ಸಮಯುದ್ದೀನ್ ಯಾವ ಆಸ್ಪತ್ರೆಯಲ್ಲಿದ್ದಾರೆೆಂದು ಅವರಿಗೆ ತಿಳಿಯಲಿಲ್ಲ. ಮುಂದಿನ 4-5 ಗಂಟೆಗಳಕಾಲ ಆತ ತನ್ನ ಸಹೋದರನನ್ನು ಹುಡುಕುತ್ತ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದರು. ‘‘ಈ ಆಸ್ಪತ್ರೆಗೆ ಅವನನ್ನು ತಂದಿದ್ದರು. ಇಲ್ಲಿಂದ ಬೇರೆ ಆಸ್ಪತ್ರೆಗೆ ಕೊಂಡುಹೋದರು. ಯಾವ ಆಸ್ಪತ್ರೆ ಅಂತ ನಮಗೆ ಗೊತ್ತಿಲ್ಲ. ಆವನು ಬದುಕಿ ಉಳಿಯದಿರಲೂಬಹುದು’’ ಎಂಬ ಉತ್ತರ ಅವನಿಗೆ ಸಿಗುತ್ತಿತ್ತು.

ಅಂತಿಮವಾಗಿ ಸುಸ್ತಾದ ಯಾಸಿನ್ ಸಂಜೆ 5ರ ವೇಳೆಗೆ ಪುನಃ ಪೊಲೀಸ್ ಠಾಣೆಗೆ ಹೋದ. ‘‘ನೀನು ಒಂದು ಎಫ್‌ಐಆರ್‌ಗೆ ಸಹಿ ಹಾಕಿದರೆ ಮಾತ್ರ ನಿನ್ನ ಸಹೋದರ ಎಲ್ಲಿದ್ದಾನೆಂದು ನಾವು ಹೇಳುತ್ತೇವೆ. ಇದು ರಸ್ತೆ ಕಾದಾಟದ ಒಂದು ಪ್ರಕರಣ. ನೀನು ಸಹಿ ಹಾಕದಿದ್ದರೆ ನಿನ್ನ ಮನೆಯವರೆಲ್ಲ ಕಂಬಿ ಎಣಿಸಬೇಕಾಗುತ್ತದೆ’’ ಎಂದು ಪಿಲ್‌ಖುವಾ ಪೊಲೀಸ್ ಠಾಣೆಯ ಪೊಲೀಸ್ ಆಫೀಸರ್ ಪವನ್ ಕುಮಾರ್ ಹೇಳಿದರು. ‘‘ಅದೆಲ್ಲ ಸುಳ್ಳು ಎಂದು ನನಗೆ ಗೊತ್ತಿದ್ದರೂ ಅನಿವಾರ್ಯವಾಗಿ ಅವರು ಹೇಳಿದ ಹಾಗೆಯೇ ಎಫ್‌ಐಆರ್‌ಗೆ ಸಹಿ ಹಾಕಿದೆ’’ ಎಂದಿದ್ದಾರೆ ಯಾಸೀನ್.

ಯಾಸೀನ್‌ಗೆ ಬರೆಯಲು ಬರುತ್ತಿರಲಿಲ್ಲವಾದ್ದರಿಂದ, ಪೊಲೀಸರು ಸಮಯುದ್ದೀನ್‌ರ ಕುಟುಂಬದ ಓರ್ವ ಗೆಳೆಯ ದಿನೇಶ್ ತೋಮರ್‌ನನ್ನು ಕರೆಸಿ ಅವನಿಂದ ದೂರನ್ನು ಬರೆಯಿಸಿದರು. ‘‘ಇದೊಂದು ಗೋಹತ್ಯಾ ಪ್ರಕರಣ. ಸ್ಥಳದಲ್ಲಿ ಒಂದು ಹಸು ಪತ್ತೆಯಾಗಿದೆ. ಅಧಿಕಾರದಲ್ಲಿ ಈಗ ಇರುವುದು ಯಾರ ಸರಕಾರ ಅಂತ ತಿಳಿದಿದೆಯಲ್ಲ ನಿಮಗೆ? ಗೋಹತ್ಯೆ ಪ್ರಕರಣ ಎಂದಾದಲ್ಲಿ ನೀವೆಲ್ಲ ಜೈಲಿಗೆ ಹೋಗಬೇಕಾಗುತ್ತದೆ. ಆದ್ದರಿಂದ ದೂರಿನಲ್ಲಿ ರಸ್ತೆ ಕಾದಾಟ (ರೋಡ್ ರೇಜ್) ಅಂತ ಬದಲಿಸಿ ಬರಿ ಎಂದು ಪವನ್ ಕುಮಾರ್ ಹೇಳಿದರು’’ ಎಂದಿದ್ದಾನೆ ತೋಮರ್.

ಸಮಯುದ್ದೀನ್, ಯಾಸಿನ್ ಮತ್ತು ತೋಮರ್‌ರವರ ಹೇಳಿಕೆಗಳನ್ನು ಈಗ ಮೀರತ್ ವಲಯದ ಐಜಿಗೆ, ಎಸ್ಪಿಗೆ ಮತ್ತು ಹಾಪುರ್‌ನ ಹೆಚ್ಚುವರಿ ಐಜಿಗೆ ಕಳುಹಿಸಲಾಗಿದೆ. ತಮ್ಮನ್ನು ಬೆದರಿಸಿ ಒಂದು ಆಧಾರರಹಿತ ಸುಳ್ಳು ದೂರು ಬರೆಯುವಂತೆ ಮಾಡಿದ ಪವನ್ ಕುಮಾರ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

‘ದಿ ವೈರ್’, ಮೀರತ್ ವಲಯದ ಐಜಿ ರಾಮ್ ಕುಮಾರ್‌ರನ್ನು ಸಂಪರ್ಕಿಸಲು ಹಲವು ಬಾರಿ ಫೋನ್ ಮಾಡಿದರೂ, ವಾಟ್ಸ್‌ಆ್ಯಪ್ ಸಂದೇಶ ಕಳಿಸಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅದೇ ರೀತಿ ದೂರಿನ ಪ್ರತಿಯನ್ನು ಕಳುಹಿಸಲಾಗಿರುವ ಇತರ ಅಧಿಕಾರಿಗಳಿಂದಲೂ ಯಾವುದೇ ಉತ್ತರ ಬಂದಿಲ್ಲ.

ಮಾಧ್ಯಮದವರು ಪವನ್ ಕುಮಾರ್‌ರ ಬಳಿ ಮಾತಾಡಿದಾಗ ಆತ ಸಮುಯುದ್ದೀನ್, ಯಾಸೀನ್ ಮತ್ತು ತೋಮರ್ ಸುಳ್ಳು ಹೇಳುತ್ತಿದ್ದಾರೆ. ಅವರೇ ಮೋಟಾರ್ ಬೈಕ್ ಕತೆ ಹಿಡಿದುಕೊಂಡು ಬಂದವರು ಎಂದಿದ್ದಾರೆ.

ಪೊಲೀಸರು ಇನ್ನೂ ಸಮಯುದ್ದೀನ್ ಹೇಳಿಕೆ ಪಡೆದಿಲ್ಲ ಎಂಬುದನ್ನು ನಿರಾಕರಿಸಿರುವ ಪವನ್ ಕುಮಾರ್ ತನ್ನ ಬಳಿ ಆತನೊಡನೆ ಮಾತಾಡಿರುವ ರೆಕಾರ್ಡಿಂಗ್‌ಗಳಿವೆ ಎಂದರು. ಆದರೆ ಅವುಗಳನ್ನು ತಮಗೆ ಕೇಳಿಸಿ ಎಂದಾಗ ಆತ ನಿರಾಕರಿಸಿದರು. ‘‘ಅದು ಸಾಧ್ಯವಿಲ್ಲ. ಅದು ಪೊಲೀಸ್ ವಿಚಾರಣೆಯ ಒಂದು ಭಾಗ’’ ಎಂದು ಆತ ಹೇಳಿದ್ದಾರೆ.

 ವೃಂದಾ ಗ್ರೋವರ್, ಕುಮಾರ್ ಹೇಳುವುದನ್ನು ಅಲ್ಲಗಳೆದಿದ್ದಾರೆ. ಇಂತಹ ಒಂದು ಪ್ರಕರಣದಲ್ಲಿ ಕ್ರಿಮಿನಲ್ ದಂಡ ಸಂಹಿತೆಯ 164ನೇ ಸೆಕ್ಷನ್ ಪ್ರಕಾರ ಓರ್ವ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಪ್ರಕರಣದ ಪ್ರತ್ಯಕ್ಷದರ್ಶಿ ಮತ್ತು ಗುಂಪು ಥಳಿತದಲ್ಲಿ ಬದುಕಿ ಉಳಿದಿರುವವನೊಬ್ಬನ ಹೇಳಿಕೆ ಪಡೆಯುವುದು ವಿಚಾರಣೆಯ ಒಂದು ಸರಿಯಾದ ಕ್ರಮ. ಆದರೆ ಇಲ್ಲಿ ಈ ಕ್ರಮವನ್ನು ಅನುಸರಿಸಲಾಗಿಲ್ಲ. ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ರೊಬ್ಬರ ಮುಂದೆ ಸಮುಯುದ್ದೀನ್‌ನ ಹೇಳಿಕೆ ದಾಖಲಿಸಿಕೊಳ್ಳಲು ಪೊಲೀಸರು ಯಾಕೆ ಹಿಂದೇಟು ಹಾಕುತ್ತಿದ್ದಾರೆ?’’ ಎಂದು ಪ್ರಶ್ನಿಸಿದ್ದಾರೆ.

ಸಮಯುದ್ದೀನ್‌ರ ಪರವಾಗಿ, ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಮತ್ತು ಅವರು ಹಾಗೂ ಅವರ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ಗ್ರೋವರ್ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಿದ್ದಾರೆ.

ಜೂನ್ ತಿಂಗಳ ಆದಿಯಲ್ಲಿ ಗುಂಪೊಂದು ಕಾಸಿಮ್‌ನನ್ನು ನಿರ್ದಯವಾಗಿ ಥಳಿಸುತ್ತಿದ್ದಾಗ ಪೊಲೀಸರು ಆ ಗುಂಪಿಗೆ ರಕ್ಷಣೆ ನೀಡುತ್ತಿರುವ ಒಂದು ಫೋಟೊ ಬಹಿರಂಗವಾದಾಗ ಉತ್ತರಪ್ರದೇಶದ ಪೊಲೀಸರು ಅನಿವಾರ್ಯವಾಗಿ ಕ್ಷಮೆಯಾಚಿಸಿದರು. ಆ ಫೋಟೊದಲ್ಲಿ ಪೊಲೀಸರು ಆ ಗುಂಪಿಗೆ ದಾರಿ ಮಾಡಿ ಕೊಡುತ್ತಿರುವಂತೆ ತೋರುತ್ತಿತ್ತು.

ಕೃಪೆ: : thewire.in

Writer - ಕಬೀರ್ ಅಗರ್‌ವಾಲ್

contributor

Editor - ಕಬೀರ್ ಅಗರ್‌ವಾಲ್

contributor

Similar News