ಮುಂಬೈ- ನ್ಯೂಯಾರ್ಕ್ ಏರ್ ಇಂಡಿಯಾ ವಿಮಾನದಲ್ಲಿ ತಿಗಣೆ ಕಾಟ!

Update: 2018-07-21 03:59 GMT

ಮುಂಬೈ, ಜು.21: ಮುಂಬೈಯಿಂದ ನ್ಯೂಯಾರ್ಕ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಿಗಣೆ ಕಾಟದ ಬಗ್ಗೆ ಬ್ಯುಸಿನೆಸ್ ಕ್ಲಾಸ್ ಪ್ರಯಾಣಿಕರು ಆರೋಪಿಸಿದ ಹಿನ್ನೆಲೆಯಲ್ಲಿ ವಿಮಾನವನ್ನು ತಾತ್ಕಾಲಿಕವಾಗಿ ನಿಲುಗಡೆ ಮಾಡಿ ಧೂಮೀಕರಣ ಮಾಡಿದ ಕುತೂಹಲಕರ ಘಟನೆ ವರದಿಯಾಗಿದೆ.

ನ್ಯೂಯಾರ್ಕ್‌ನಿಂದ ಮಂಗಳವಾರ ಹೊರಟಿದ್ದ ವಿಮಾನದಲ್ಲಿ ತಿಗಣೆ ಇದ್ದ ಬಗ್ಗೆ ಪ್ರಯಾಣಿಕರು ಇಂಡಿಯನ್ ಏರ್‌ಲೈನ್ಸ್‌ಗೆ ದೂರು ನೀಡಿದ್ದರು. ಅಮೆರಿಕದಲ್ಲಿ ವಿಹಾರಕ್ಕೆ ತೆರಳಿದ್ದ ಕಶ್ಮೀರ ತೋನ್ಸೆಕರ್ ಎಂಬುವವರು ಈ ಬಗ್ಗೆ ದೂರು ನೀಡಿದ್ದರು. ತೋನ್ಸೆಕರ್ ಅವರ ಪುಟ್ಟ ಮಗಳು ತಿಗಣೆ ಕಚ್ಚುತ್ತಿರುವ ಬಗ್ಗೆ ತಂದೆಯಲ್ಲಿ ಹೇಳಿಕೊಂಡಾಗ ಪರಿಶೀಲಿಸಿದರು. ತಿಗಣೆ ಕಂಡುಬಂದ ಹಿನ್ನೆಲೆಯಲ್ಲಿ ಅವರು ದೂರು ನೀಡಿದರು. "ಈ ಬಗ್ಗೆ ಸಿಬ್ಬಂದಿಗೆ ದೂರು ನೀಡಿದಾಗ ರಿಪೆಲ್ಲಂಟ್ ಸಿಂಪಡಿಸಿದರು. ಸ್ವಲ್ಪಸಮಯದಲ್ಲೇ ಬಹಳಷ್ಟು ತಿಗಣೆಗಳು ಇತರ ಸೀಟುಗಳಿಂದ ಮತ್ತು ನಮ್ಮ ಸೀಟಿನಿಂದ ಹೊರಬಂದವು ಎಂದು ಅವರು ವಿವರಿಸಿದ್ದಾರೆ.

ಬಳಿಕ ಅವರನ್ನು ಎಕಾನಮಿ ಕ್ಲಾಸ್‌ಗೆ ವರ್ಗಾಯಿಸಲಾಯಿತು. ಈ ಬಗ್ಗೆ ತೋನ್ಸೆಕರ್ ಅವರ ಪತಿ ಪ್ರವೀಣ್ ಕೂಡಾ ಇ-ಮೇಲ್ ಮಾಡಿದ್ದರು. ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವಿವೇಕ್ ಮೋದಿ ಎಂಬುವವರು ಆಸನದಲ್ಲಿ ತಿಗಣೆಗಳು ಓಡಾಡುತ್ತಿರುವ ಫೋಟೊ ಟ್ವೀಟ್ ಮಾಡಿದ್ದರು. ಮುಂಬೈ- ನ್ಯೂಯಾರ್ಕ್ ವಿಮಾನದಲ್ಲಿ ಹಸುಳೆಗೂ ತಿಗಣೆ ಕಡಿದಿತ್ತು. ಎರಡೂ ವಿಮಾನಗಳನ್ನು ಒಂದು ದಿನ ಕಾಲ ನಿಲ್ಲಿಸಿ ಧೂಮೀಕರಣ ಮಾಡಲಾಗಿದೆ ಎಂದು ಏರ್‌ ಇಂಡಿಯಾ ವಕ್ತಾರರು ಹೇಳಿದ್ದಾರೆ. ಹೊಸ ಸೀಟ್‌ ಕವರ್‌ಗಳನ್ನು ಹಾಕಲಾಗಿದೆ. ವಿಮಾನಯಾನಕ್ಕೆ ಯಾವುದೇ ತೊಂದರೆಯಾಗಿಲ್ಲ ಎಂದು ಏರ್‌ ಇಂಡಿಯಾ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News