ಹಾಲ್ ಆಫ್ ಫೇಮ್ ಓಪನ್ : ಭಾರತೀಯ ಆಟಗಾರನ ಅಪೂರ್ವ ಸಾಧನೆ

Update: 2018-07-22 04:01 GMT

ವಾಷಿಂಗ್ಟನ್, ಜು.22: ಭಾರತದ ಟೆನಿಸ್ ತಾರೆ ರಾಮಕುಮಾರ್ ರಾಮನಾಥನ್ ಅವರು ಅಮೆರಿಕದ ನ್ಯೂಪೋರ್ಟ್‌ನಲ್ಲಿ ನಡೆಯುತ್ತಿರುವ ಹಾಲ್ ಆಫ್ ಫೇಮ್ ಓಪನ್ ಟೂರ್ನಿಯ ಫೈನಲ್ ತಲುಪಿದ್ದಾರೆ.

ಇವರು ಅಮೆರಿಕದ ಟಿಮ್ ಮಿಕ್‌ಝೆಕ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ 6-4, 7-5 ನೇರ ಸೆಟ್‌ಗಳ ಜಯ ಸಾಧಿಸಿದರು. ಫೈನಲ್‌ನಲ್ಲಿ ಅವರು ಸ್ಪೇನ್‌ನ ಮಾರ್ಸೆಲ್ ಗ್ರನೊಲರ್ಸ್‌ ಅಥವಾ ಅಮೆರಿಕದ ಸ್ಟೀವ್ ಜಾನ್ಸನ್ ಅವರನ್ನು ಎದುರಿಸಲಿದ್ದಾರೆ.

ಏಳು ವರ್ಷಗಳ ಬಳಿಕ ಎಟಿಪಿ ವಿಶ್ವ ಟೂರ್ನಿಯ ಫೈನಲ್ ತಲುಪಿದ ಮೊಟ್ಟಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. 2011ರಲ್ಲಿ ಸೋಮದೇವ್ ದೇವ್‌ವರ್ಮನ್ ಅವರು ದಕ್ಷಿಣ ಆಫ್ರಿಕಾದ ಇಜಾಕ್ ವಾನ್ ದೆರ್ ಮೆರ್ವೆ ಅವರನ್ನು ಎಸ್‌ಎ ಟೆನಿಸ್ ಓಪನ್ ಸೆಮಿಫೈನಲ್‌ನಲ್ಲಿ ಸೋಲಿಸಿದ್ದರು. ವಿಂಬಲ್ಡನ್ ರನ್ನರ್‌ಅಪ್ ಕೆವಿನ್ ಆಂಡರ್ಸನ್ ವಿರುದ್ಧ ಫೈನಲ್‌ನಲ್ಲಿ ಅವರು ಸೋಲು ಅನುಭವಿಸಿದ್ದರು.

ನ್ಯೂಪೋರ್ಟ್ ಟೂರ್ನಿ ಭಾರತೀಯರ ಅಚ್ಚುಮೆಚ್ಚಿನ ಟೂರ್ನಿಯಾಗಿದ್ದು, ಭಾರತದ ಟೆನಿಸ್ ತಾರೆ ವಿಜಯ್ ಅಮೃತ್‌ರಾಜ್ ಅವರು ಹಾಲ್ ಆಫ್ ಫೇಮ್ ಓಪನ್ ಸಿಂಗಲ್ಸ್ ಪ್ರಶಸ್ತಿಯನ್ನು 1976, 1980 ಮತ್ತು 1984ರಲ್ಲಿ ಗೆದ್ದಿದ್ದರು. ವಿಜಯ್ ಅಮೃತ್‌ರಾಜ್ ಅವರ ಪುತ್ರ ಪ್ರಕಾಶ್ ಅಮೃತರಾಜ್ 2008ರಲ್ಲಿ ಈ ಟೂರ್ನಿಯ ಫೈನಲ್ ತಲುಪಿದ್ದರು. ವೃತ್ತಿಜೀವನದಲ್ಲಿ ಅವರು ಫೈನಲ್ ತಲುಪಿದ ಏಕೈಕ ಟೂರ್ನಿ ಇದಾಗಿದೆ.

ಈ ಹುಲ್ಲುಹಾಸಿನ ಟೂರ್ನಿಯಲ್ಲಿ ರಾಮ್‌ಕುಮಾರ್ ಗೆಲುವು ಸಾಧಿಸಿದರೆ, 20 ವರ್ಷಗಳ ಬಳಿಕ ಈ ಸಾಧನೆ ಮಾಡಿದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. 1998ರಲ್ಲಿ ಲಿಯಾಂಡರ್ ಪೇಸ್ ಈ ಟೂರ್ನಿ ಗೆದ್ದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News